More

    ಎಂಟು ಸಾವಿರ ಕಡೆ ವೀಕ್ಷಣೆ ವ್ಯವಸ್ಥೆ

    ಹಾವೇರಿ: ಜೂ. 7ರಂದು ಬೆಂಗಳೂರಿನಲ್ಲಿ ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಪದಗ್ರಹಣ ಸಮಾರಂಭ ನಡೆಯಲಿದೆ. ಆದರೆ ಕಾರ್ಯಕ್ರಮದಲ್ಲಿ ಕಡಿಮೆ ಕಾರ್ಯಕರ್ತರು ಸೇರಬೇಕಾದ್ದರಿಂದ ರಾಜ್ಯಾದ್ಯಂತ ಎಂಟು ಸಾವಿರ ಕಡೆ ಜನರಿಗೆ ನೇರವಾಗಿ ವೀಕ್ಷಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

    ಗುರುವಾರ ಏರ್ಪಡಿಸಿದ್ದ ಪದಗ್ರಹಣ ಸಮಾರಂಭದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ನೇರ ವೀಕ್ಷಣೆಗೆ ಎಲ್ಲೆಡೆ ಸಿದ್ಧತೆ ಮಾಡಲಾಗುತ್ತಿದೆ. ನಗರಸಭೆ, ಪುರಸಭೆ, ಗ್ರಾಪಂ ಮಟ್ಟದಲ್ಲಿ ನೇರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು ಎಂದರು.

    ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಡಿ.ಕೆ. ಶಿವಕುಮಾರ ಪದಗ್ರಹಣ ಕಾರ್ಯಕ್ರಮ ಮುಂಬರುವ ಗ್ರಾಪಂ, ತಾಪಂ, ಜಿಪಂ ಚುನಾವಣೆಗೆ ಸ್ವರೂಪ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಸಂಘಟನೆಗೊಳ್ಳುವ ಮೂಲಕ ಬೇರು ಮಟ್ಟದಿಂದ ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದರು.

    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ ಮಾತನಾಡಿ, ಕೆಪಿಸಿಸಿ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ವೀಕ್ಷಣೆಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರ ಮನೆ, ಸಾರ್ವಜನಿಕ ಸ್ಥಳಗಳಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು. ಈಗಾಗಲೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಸೂಚನೆ ನೀಡಲಾಗಿದೆ. ನಗರಸಭೆ ಹಂತದಲ್ಲಿ 5, ಪುರಸಭೆ 3, ಗ್ರಾಪಂ ಮಟ್ಟದಲ್ಲಿ ಕನಿಷ್ಠ 1 ಕಡೆಯಲ್ಲಿ ಸಮಾರಂಭ ವೀಕ್ಷಣೆಗೆ ಸಿದ್ಧತೆ ನಡೆದಿದೆ ಎಂದರು.

    ಮಾಜಿ ಸಚಿವರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಮನೋಹರ ತಹಶೀಲ್ದಾರ್, ವಿಪ ಸದಸ್ಯ ಶ್ರೀನಿವಾಸ ಮಾನೆ, ಬಿ.ಎಚ್. ಬನ್ನಿಕೋಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಪ್ರಕಾಶಗೌಡ ಪಾಟೀಲ, ಜಿಪಂ ಅಧ್ಯಕ್ಷ ಬಸನಗೌಡ ದೇಸಾಯಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪ್ರೇಮಾ ಪಾಟೀಲ, ಜಿಪಂ ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ, ಆರ್.ಎಂ. ಕುಬೇರಪ್ಪ, ಎಸ್.ಆರ್. ಪಾಟೀಲ, ಪ್ರಕಾಶ ಕೋಳಿವಾಡ, ಎಸ್​ಎಫ್​ಎನ್ ಗಾಜಿಗೌಡ್ರ, ಸಂಜೀವಕುಮಾರ ನೀರಲಗಿ, ರಾಜೇಶ್ವರಿ ಪಾಟೀಲ ಇತರರಿದ್ದರು.

    ಜೆಡಿಎಸ್ ಜತೆ ಹೊಂದಾಣಿಕೆಗೆ ಮನಸ್ಸು

    ಮೇಲ್ಮನೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ವಿಚಾರದಲ್ಲಿ ಮಾತುಕತೆ ನಡೆಸಲಾಗುತ್ತಿದೆ. ಹೊಂದಾಣಿಕೆ ಆದರೆ ಹೆಚ್ಚು ಸ್ಥಾನ ಗೆಲ್ಲಬಹುದು. ಈ ಕುರಿತು ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ. ಪಕ್ಷದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದ ಯಶಸ್ಸಿಗೆ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಬೆಂಗಳೂರಿನ ಸಮಾರಂಭದಲ್ಲಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸುತ್ತೇವೆ. ಅದರ ಜೊತೆಗೆ ಜಿಲ್ಲೆ, ತಾಲೂಕು ಮಟ್ಟದಲ್ಲೂ ಸಂವಾದ ಸಭೆ ಆಯೋಜಿಸಿ, ಪಕ್ಷ ಸಂಘಟನೆ ಮತ್ತು ಪಕ್ಷದ ರೂಪುರೇಷೆಗಳನ್ನು ತಿಳಿಸಲು ಸಭೆ ನಡೆಸಲಾಗುತ್ತಿದೆ ಎಂದು ಸತೀಶ ಜಾರಕಿಹೊಳಿ ತಿಳಿಸಿದರು.

    ಅಂತರ ಮರೆತ ಕೈ ನಾಯಕರು

    ಸತೀಶ ಜಾರಕಿಹೊಳಿಯವರ ಸಭೆಯಲ್ಲಿ ಪಾಲ್ಗೊಂಡಿದ್ದ ನಾಯಕರು ಸೇರಿ ಎಲ್ಲ ಕಾರ್ಯಕರ್ತರು ಪರಸ್ಪರ ಅಂತರ ಮೆರೆತು ಒಂದೇ ಕಡೆ ನೂರಾರು ಜನ ಸೇರಿದ್ದರು. ಕೆಲವರು ಮಾಸ್ಕ್ ಕೂಡ ಹಾಕಿರಲಿಲ್ಲ. ಜನಸಮಾನ್ಯರಿಗೆ ವೈರಸ್ ಕುರಿತು ಜಾಗೃತಿ ಮೂಡಿಸಬೇಕಾದ ನಾಯಕರೇ ಈ ರೀತಿ ವರ್ತಿಸಿರುವುದು ಅಚ್ಚರಿ ಮೂಡಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts