More

    ಎಂಟು ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ

    ಬೆಳಗಾವಿ: ಜಿಲ್ಲೆಯ ಎಂಟು ಸಕ್ಕರೆ ಕಾರ್ಖಾನೆಗಳ ತೂಕದ ಯಂತ್ರಗಳ ಮೇಲೆ ಸಕ್ಕರೆ ಇಲಾಖೆಯ ಆಯುಕ್ತರ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸುವ ಮೂಲಕ ಮಾಲೀಕರಿಗೆ ಬಿಸಿ ಮುಟ್ಟಿಸಿದೆ.

    ಚಿಕ್ಕೋಡಿ ತಾಲೂಕಿನ ಜೈನಾಪುರ ಅರಿಹಂತ ಶುಗರ್ಸ್‌ ಇಂಡಸ್ಟ್ರೀಸ್ ಲಿ., ಅಥಣಿ ತಾಲೂಕಿನ ಅಥಣಿ ಶುಗರ್ಸ್‌ ಲಿ., ಬೆಳಗಾವಿ ತಾಲೂಕಿನ ಹುದಲಿ ಗ್ರಾಮದ ಬೆಳಗಾಂ ಶುಗರ್ಸ್‌ ಪ್ರೈ ಲಿ., ಸವದತ್ತಿ ತಾಲೂಕಿನ ಹರ್ಷ ಶುಗರ್ಸ್‌ ಲಿ., ಖಾನಾಪುರ ತಾಲೂಕಿನ ಕುಪ್ಪಟಗಿರಿಯ ಲೈಲಾ ಶುಗರ್ಸ್‌, ಕಾಗವಾಡ ತಾಲೂಕಿನ ಶಿರಗುಪ್ಪಿ ಶುಗರ್ಸ್‌ ವರ್ಕ್ಸ್ ಲಿ., ಚಿಕ್ಕೋಡಿ ತಾಲೂಕಿನ ಬೇಡಕಿಹಾಳ ವೆಂಕಟೇಶ್ವರ ಪವರ್ ಪ್ರಾಜೆಕ್ಟ್ ಲಿ., ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯ ವಿಶ್ವರಾಜ ಶುಗರ್ಸ್‌ ಇಂಡಸ್ಟ್ರೀಸ್ ಲಿ. ಮೇಲೆ ದಾಳಿ ನಡೆದಿದೆ.

    ಸಕ್ಕರೆ ಕಾರ್ಖಾನೆಗಳು ಕಬ್ಬಿನ ತೂಕದಲ್ಲಿ ಮೋಸ ಮಾಡುತ್ತಿದ್ದು, ಪ್ರತಿ ಲೋಡ್‌ನಲ್ಲಿ 1.5 ರಿಂದ 2.5 ಟನ್ ವ್ಯತ್ಯಾಸ ಬರುತ್ತಿದೆ. ಈ ಕುರಿತು ತನಿಖೆ ನಡೆಸುವಂತೆ ರೈತರು ನಿರಂತರವಾಗಿ ದೂರು ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ಏಕಕಾಲಕ್ಕೆ ಬೆಳಗಾವಿ ಜಿಲ್ಲೆಯ ಎಂಟು ಸಕ್ಕರೆ ಕಾರ್ಖಾನೆಗಳ ಮೇಲೆ ಸಕ್ಕರೆ ಇಲಾಖೆಯ ಆಯುಕ್ತ ಶಿವಾನಂದ ಎಚ್.ಕಲಕೇರಿ ನೇತೃತ್ವದಲ್ಲಿ 30 ಅಧಿಕಾರಿ, ಸಿಬ್ಬಂದಿ ಒಳಗೊಂಡ 16 ತಂಡಗಳು ದಾಳಿ ನಡೆಸಿವೆ. ಸಾರಿಗೆ ಇಲಾಖೆ, ತೂಕ ಮತ್ತು ಅಳತೆ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಕಾರ್ಯಾಚರಣೆಯಲ್ಲಿದ್ದರು.

    ಪ್ರಥಮ ಹಂತದಲ್ಲಿ ಜಿಲ್ಲೆಯ ಎಂಟು ಸಕ್ಕರೆ ಕಾರ್ಖಾನೆಗಳ ಪೈಕಿ ಕೆಲವೊಂದು ಸಕ್ಕರೆ ಕಾರ್ಖಾನೆಗಳ ತೂಕದ ವ್ಯತ್ಯಾಸ ಕಂಡು ಬಂದಿದ್ದು, ಅಧಿಕಾರಿಗಳಿಂದ ಪರಿಶೀಲನೆ ಕಾರ್ಯ ಮುಂದುವರಿದಿದೆ. ಈ ಸಾಲಿನ ಕಬ್ಬು ಕಟಾವು ಹಂಗಾಮು ಮುಗಿಯುವವರೆಗೂ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts