More

    ಊಟ-ಉಪಾಹಾರಕ್ಕಾಗಿ ಪರದಾಟ!

    ಗದಗ: ಬಸ್ ಸಂಚಾರ ಆರಂಭವಾಗಿರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಿದೆ. ಆದರೆ, ಬಸ್ ಚಾಲಕರು, ನಿರ್ವಾಹಕರು ಊಟ, ಉಪಾಹಾರ ಇಲ್ಲದೆ ಪರದಾಡುತ್ತಿದ್ದಾರೆ. ಮಂಗಳೂರಿನಿಂದ ಗದಗ ನಗರಕ್ಕೆ ಆಗಮಿಸಿದ್ದ ಬಸ್ ಚಾಲಕ ಹಾಗೂ ನಿರ್ವಾಹಕರು ಗುರುವಾರ ಊಟ-ಉಪಾಹಾರಕ್ಕಾಗಿ ಪರದಾಡಿದರು.

    ಬಸ್ ಸಂಚಾರ ಆರಂಭವಾಗಿ ಮೂರು ದಿನ ಕಳೆದಿದ್ದು, ವಿವಿಧ ಜಿಲ್ಲೆಗಳಿಂದ ಆಗಮಿಸುವ ಬಸ್ ಚಾಲಕರಿಗೆ, ನಿರ್ವಾಹಕರಿಗೆ ಅಧಿಕಾರಿಗಳು ಊಟ, ಉಪಾಹಾರ ವ್ಯವಸ್ಥೆ ಕಲ್ಪಿಸದಿರುವುದರಿಂದ ತೊಂದರೆ ಅನುಭವಿಸುವಂತಾಯಿತು.

    ಬುಧವಾರ ಬೆಳಗ್ಗೆ ಮಂಗಳೂರಿನಿಂದ ಹೊರಟ ಬಸ್ ರಾತ್ರಿ 7 ಹೊತ್ತಿಗೆ ನಗರದ ಹೊಸ ಬಸ್ ನಿಲ್ದಾಣಕ್ಕೆ ಬಂದಿದೆ. ಸಂಜೆ ಏಳಕ್ಕೆ ಎಲ್ಲ ಅಂಗಡಿ-ಮುಂಗಟ್ಟುಗಳು ಬಂದ್ ಆಗುತ್ತವೆ. ಅಲ್ಲಲ್ಲಿ ತೆರೆದಿದ್ದ ಹೋಟೆಲ್​ಗಳು ಸಹ ಬಂದ್ ಆಗಿದ್ದರಿಂದ ಚಾಲಕ, ನಿರ್ವಾಹಕರಿಗೆ ರಾತ್ರಿ ಉಟ ಸಿಗಲಿಲ್ಲ. ಹೀಗಾಗಿ, ಅವರು ನೀರು ಕುಡಿದು ಉಪವಾಸ ಮಲಗಿದರು. ಬೆಳಗ್ಗೆ ಎದ್ದು ಉಪಾಹಾರ ಮಾಡಿಕೊಂಡು ಹೊರಡಬೇಕು ಎಂದರೆ, ಅಷ್ಟು ಬೇಗನೆ ಯಾವುದೇ ಹೋಟೆಲ್ ತೆರೆದಿರಲಿಲ್ಲ. ಇದರಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಚಾಲಕ ಮತ್ತು ನಿರ್ವಾಹಕರು, ‘ಉಪವಾಸ ಮಾಡಿ ಬಸ್ ಓಡಿಸಬೇಕಾಗಿದೆ. ನಮ್ಮ ಸಮಸ್ಯೆಗೆ ಸ್ಪಂದಿಸುವವರೇ ಇಲ್ಲ. ಅಧಿಕಾರಿಗಳು ಸಿಬ್ಬಂದಿಗೆ ಊಟ-ಉಪಾಹಾರದ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ನಾವು ಊಟಕ್ಕಾಗಿ ಅಲೆಯಬೇಕಾಗಿದೆ’ ಎಂದು ದೂರಿದರು.

    ಇದು ಮಂಗಳೂರು ಗದಗ ಬಸ್ ಸಿಬ್ಬಂದಿ ಸಮಸ್ಯೆ ಮಾತ್ರವಲ್ಲ. ಬೇರೆ ಜಿಲ್ಲೆಯಿಂದ ಬಂದಿರುವ ಎಲ್ಲ ಬಸ್​ಗಳ ಸಿಬ್ಬಂದಿ ಕತೆಯೂ ಇದೆ ಆಗಿತ್ತು. ಅಂತರ ಜಿಲ್ಲೆಗಳಿಂದ ಬಂದ ಎಲ್ಲ ಚಾಲಕರು ಹಾಗೂ ಕಂಡಕ್ಟರ್​ಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕಂಡು ಬಂದಿತು. ಸಾರಿಗೆ ಸಿಬ್ಬಂದಿ ಊಟ-ಉಪಾಹಾರಕ್ಕಾಗಿ ತೊಂದರೆ ಅನುಭವಿಸುತ್ತಿದ್ದಾರೆ ಎಂಬ ವಿಷಯ ತಿಳಿದ ಕೂಡಲೇ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು, ಶುಕ್ರವಾರದಿಂದ ನಗರಕ್ಕೆ ಬರುವ ಅಂತರ ಜಿಲ್ಲೆ ಸಾರಿಗೆ ಸಿಬ್ಬಂದಿಗೆ ಊಟ ಮತ್ತು ಉಪಾಹಾರದ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು. ನಂತರ ಹೋಟೆಲ್​ನಿಂದ ಉಪಾಹಾರ ತರಿಸಿ ಸಾರಿಗೆ ಸಿಬ್ಬಂದಿಗೆ ನೀಡಲಾಯಿತು.

    ಬಸ್ ನಿಲ್ದಾಣದಲ್ಲಿ ಹೆಜ್ಜೇನು ದಾಳಿ

    ಗದಗ: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಗೂಡು ಕಟ್ಟಿರುವ ಹೆಜ್ಜೇನುಗಳು ಗುರುವಾರ ನಸುಕಿನ ಜಾವ ಸಾರಿಗೆ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದರಿಂದ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣ ವಾಗಿತ್ತು. ಆಕಸ್ಮಿಕವಾಗಿ ಗೂಡಿನಿಂದ ಎದ್ದ ಹೆಜ್ಜೇನುಗಳು ಬಸ್ ನಿಲ್ದಾಣದಲ್ಲಿದ್ದ ಗೋವಾ ಬಸ್ ಪ್ರಯಾಣಿಕರು ಮತ್ತು ಸಿಬ್ಬಂದಿ ಮೇಲೆ ಮುಗಿಬಿದ್ದವು. ಇದನ್ನು ಅರಿತ ಜನರು ಬಸ್ ನಿಲ್ದಾಣದಿಂದ ಹೊರಗೆ ಓಡಿ ಹೋಗಿ ಬಚಾವಾದರು. ಕೆಲ ಹೊತ್ತಿನ ನಂತರ ಜೇನು ನೊಣಗಳು ಗೂಡು ಸೇರಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts