More

    ಉಳ್ಳಾಗಡ್ಡಿ, ಹತ್ತಿ, ಗೋವಿನಜೋಳ, ಸೂರ್ಯಕಾಂತಿ, ಶೇಂಗಾ ಬೆಳೆಗಳಿಗೆ ಹಳದಿ ರೋಗ

    ಸಂತೋಷ ಮುರಡಿ ಮುಂಡರಗಿ

    ತಾಲೂಕಿನಲ್ಲಿ ಆಗಾಗ ಸುರಿಯುತ್ತಿರುವ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಳವಾಗಿದೆ. ಇದರಿಂದ ವಿವಿಧ ಬೆಳೆ ರೋಗ ಬಾಧೆಯಿಂದ ನಲುಗುತ್ತಿದ್ದು, ರೈತರು ಆತಂಕದಲ್ಲಿ ದಿನಕಳೆಯುವಂತಾಗಿದೆ.

    ಪಟ್ಟಣ ಸೇರಿ ತಾಲೂಕಿನ ಡಂಬಳ, ಡೋಣಿ, ಯಕ್ಲಾಸಪುರ, ಹಿರೇವಡ್ಡಟ್ಟಿ, ಕಲಕೇರಿ, ತಿಪ್ಪಾಪುರ ಮೊದಲಾದೆಡೆ ಆಗಾಗ ಮಳೆಯಾಗುತ್ತಿದೆ. ತೇವಾಂಶ ಹೆಚ್ಚಳದಿಂದ ಉಳ್ಳಾಗಡ್ಡಿ ಬೆಳೆಗೆ ಹಳದಿ, ಸುಳಿತಿರುಪು ರೋಗಗಳು ತಗುಲಿದ್ದು, ಫಸಲು ನೆಲಕಚ್ಚುತ್ತಿದೆ. ಹತ್ತಿ, ಗೋವಿನಜೋಳ, ಸೂರ್ಯಕಾಂತಿ, ಶೇಂಗಾ ಬೆಳೆಗಳಿಗೂ ಹಳದಿ ರೋಗ ಬಾಧಿಸುತ್ತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

    ತಾಲೂಕಿನಲ್ಲಿ ಅಂದಾಜು 4000 ಹೆಕ್ಟೇರ್ ಪ್ರದೇಶದಲ್ಲಿ ಉಳ್ಳಾಗಡ್ಡಿ, 2362 ಹೆಕ್ಟೇರ್​ನಲ್ಲಿ ಹತ್ತಿ, 6173 ಹೆಕ್ಟೇರ್​ನಲ್ಲಿ ಶೇಂಗಾ, 20192 ಹೆಕ್ಟೇರ್​ನಲ್ಲಿ ಗೋವಿನಜೋಳ ಬೆಳೆಯಲಾಗಿದೆ. ಮಳೆಯಿಂದಾಗಿ ಬಹುತೇಕ ಕಡೆ ಉಳ್ಳಾಗಡ್ಡಿ ಬೆಳೆಗೆ ರೋಗ ಕಾಣಿಸಿದೆ. ಹತ್ತಿ ಬೆಳೆಯಲ್ಲಿ ಕಾಯಿ ಕೊಳೆಯುತ್ತಿದ್ದು, ಮೋಡ ಕವಿದ ವಾತಾವರಣದಿಂದ ಹೂವುಗಳು ಉದುರುತ್ತಿವೆ. ಶೇಂಗಾ ಬೆಳೆ ಮೈತುಂಬಿಕೊಂಡಿದೆ. ಆದರೆ, ಕಾಯಿ ಹಿಡಿಯದೆ ಹಳದಿ ರೋಗಕ್ಕೆ ತಿರುಗಿದೆ. ಗೋವಿನಜೋಳಕ್ಕೆ ಹಳದಿ ರೋಗ ಕಾಣಿಸಿಕೊಳ್ಳುತ್ತಿದೆ. ಕಟಾವಿಗೆ ಬಂದ ಸೂರ್ಯಕಾಂತಿ, ಸಜ್ಜೆ ಬೆಳೆಗಳಂತೂ ಮಳೆಗೆ ನೆಲಕಚ್ಚುತ್ತಿವೆ.

    ವಾಡಿಕೆಗಿಂತ ಹೆಚ್ಚು ಮಳೆ: ಮುಂಡರಗಿ ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಜುಲೈನಲ್ಲಿ 69 ಮಿಮೀ ವಾಡಿಕೆ ಮಳೆ. ಆದರೆ, 136 ಮಿಮೀ ಸುರಿದಿದೆ. ಆಗಸ್ಟ್​ನಲ್ಲಿ 83 ಮಿಮೀ ವಾಡಿಕೆ ಮಳೆ ಇದ್ದು, 102 ಮಿಮೀ ಮಳೆಯಾಗಿದೆ. ಸೆ.1ರಿಂದ 11ರವರೆಗೆ 30 ಮಿಮೀ ವಾಡಿಕೆ ಮಳೆ ಇದ್ದು, 78 ಮಿಮೀ ಮಳೆ ಸುರಿದಿದೆ. ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿರುವುದರಿಂದ ತೇವಾಂಶ ಹೆಚ್ಚಳವಾಗಿ ಬೆಳೆಗಳಿಗೆ ತೊಂದರೆಯಾಗಿದೆ.

    ಎರಡು ತಿಂಗಳಿಂದ ಮೋಡ ಕವಿದ ವಾತಾವರಣ, ಭೂಮಿಯಲ್ಲಿನ ತೇವಾಂಶ ಹೆಚ್ಚಳದಿಂದ ಹತ್ತಿ ಬೆಳೆ ಸರಿಯಾಗಿ ಹೂ ಕಟ್ಟುತ್ತಿಲ್ಲ. ಉಳ್ಳಾಗಡ್ಡಿ ಬೆಳೆ ಕೊಳೆಯುತ್ತಿದೆ. ಗಾಳಿ-ಮಳೆಗೆ ಸೂರ್ಯಕಾಂತಿ, ಸಜ್ಜೆ ಬೆಳೆ ನೆಲಕಚ್ಚುತ್ತಿವೆ. ವಿವಿಧ ಬೆಳೆಗೆ ರೋಗಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ರೈತರು ಅಪಾರ ನಷ್ಟ ಅನುಭವಿಸುವಂತಾಗಿದೆ.

    | ಶಿವಾನಂದಪ್ಪ ಇಟಗಿ, ಮುಂಡರಗಿ ರೈತ, ಮಹೇಶ ಹೆಬ್ಬಾಳ, ತಿಪ್ಪಾಪುರ ರೈತ

    ಹತ್ತಿ, ಗೋವಿನಜೋಳ ಬೆಳೆಗಳಲ್ಲಿ ಹಳದಿ ರೋಗ ನಿಯಂತ್ರಿಸಲು ಪ್ರತಿ ಲೀಟರ್ ನೀರಿಗೆ 4-5 ಗ್ರಾಂ ಪೊಟ್ಯಾಸಿಯಂ ನೈಟ್ರೇಟ್ ಮಿಶ್ರಣ ಮಾಡಿ ಬೆಳೆಗೆ ಸಿಂಪಡಿಸಬೇಕು ಅಥವಾ ಪ್ರತಿ ಲೀಟರ್ ನೀರಿಗೆ ಶೇ. 2ರಷ್ಟು ಯೂರಿಯಾ ಮಿಶ್ರಣ ಮಾಡಿ ಬೆಳೆಗಳಿಗೆ ಸಿಂಪಡಿಸಬೇಕು.

    | ರವಿಕುಮಾರ ಹಾವನೂರ, ಕೃಷಿ ಅಧಿಕಾರಿ ಮುಂಡರಗಿ

    ತೇವಾಂಶ ಹೆಚ್ಚಳದಿಂದ ಉಳ್ಳಾಗಡ್ಡಿ ಬೆಳೆ ಕೊಳೆಯುತ್ತಿರುವ ಕುರಿತು ಮಾಹಿತಿ ನೀಡುವಂತೆ ಮೇಘಧಿಕಾರಿಗಳು ತಿಳಿಸಿದ್ದಾರೆ. ಜಮೀನುಗಳನ್ನು ಪರಿಶೀಲಿಸಲಾಗುವುದು. ರೈತರು ಉಳ್ಳಾಗಡ್ಡಿ ಬೆಳೆ ಹಾಳಾಗಿರುವ ಕುರಿತು ಅರ್ಜಿ ಸಲ್ಲಿಸಿದರೆ ಮೇಲಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು.

    | ವೈ.ಎಚ್. ಜಾಲವಾಡಗಿ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ, ಮುಂಡರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts