More

    ಉಳಿತಾಯ ಮಾಡಿದರೂ ಸಿಕ್ಕಿಲ್ಲ ಪರಿಹಾರ

    ಸುಭಾಸ ಧೂಪದಹೊಂಡ ಕಾರವಾರ

    ಉಳಿತಾಯ ಹಾಗೂ ಪರಿಹಾರ ಯೋಜನೆಯಡಿ ಜಿಲ್ಲೆಯ ಮೀನುಗಾರರಿಗೆ ವಿತರಿಸುವ ಸುಮಾರು 11 ಕೋಟಿಗೂ ಹೆಚ್ಚು ಹಣ ನಾಲ್ಕು ವರ್ಷಗಳಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಬಿಡುಗಡೆಗೆ ಬಾಕಿ ಇದೆ. ದುಡಿಮೆ ಇಲ್ಲದ ಸಮಯದಲ್ಲಿ ತಮಗೆ ಆಸರೆಯಾಗಬಲ್ಲದು ಎಂದು ಕೂಡಿಟ್ಟ ಹಣವನ್ನು ಸೊಸೈಟಿಗೆ ಕಟ್ಟಿರುವ ಬಡ ಮೀನುಗಾರರು ನೆರವು ಸಿಗದೆ ಕಂಗಾಲಾಗಿದ್ದಾರೆ.

    ದೊಡ್ಡ ದೋಣಿಗಳಲ್ಲಿ ಕಾರ್ವಿುಕರಾಗಿ ದುಡಿಯುವುದು, ದೋಣಿಗಳಿಂದ ಮೀನು ಬುಟ್ಟಿ ಇಳಿಸುವುದು, ಒಣ ಮೀನು ತಯಾರಿಸುವುದು, ಮೀನು ಮಾರಾಟ ಮಾಡುವುದು ಮುಂತಾದ ಕಾರ್ಯಗಳನ್ನು ಮಾಡಿಕೊಂಡು ಜೀವನ ಸಾಗಿಸುವ ಸಾವಿರಾರು ಬೆಸ್ತರು ಕರಾವಳಿಯಲ್ಲಿದ್ದಾರೆ.

    ಪ್ರತಿ ದಿನದ ದುಡಿಮೆ ಅವರಿಗೆ ಅಂದಿನ ಅನ್ನ ನೀಡುತ್ತದೆ. ಆದರೆ, ಮಳೆಗಾಲದ ಎರಡು ತಿಂಗಳು ಆಳ ಸಮುದ್ರ ಮೀನುಗಾರಿಕೆಗೆ ನಿಷೇಧವಿರುವುದರಿಂದ ಫಿಶಿಂಗ್​ಗೆ ಸಂಬಂಧಿಸಿ ಉಪ ಕಸುಬು ಮಾಡುವವರು ಉದ್ಯೋಗ ಇಲ್ಲದೇ ಊಟಕ್ಕೂ ಕಷ್ಟ ಪಡಬೇಕಾಗುತ್ತದೆ.

    ಮೀನುಗಾರರ ಈ ಸಂಕಷ್ಟ ತಪ್ಪಿಸಲು ಸರ್ಕಾರ ‘ಉಳಿತಾಯ ಮತ್ತು ಪರಿಹಾರ’ ಯೋಜನೆಯನ್ನು ಬಹಳ ಹಿಂದೆಯೇ ಜಾರಿಗೆ ತಂದಿದೆ. ‘ನೀವು ಉಳಿತಾಯ ಮಾಡಿ, ನಾವು ಪರಿಹಾರ ನೀಡುತ್ತೇವೆ’ ಎಂದು ಭರವಸೆ ನೀಡಿದ್ದ ಸರ್ಕಾರ ಮಾತು ತಪ್ಪಿದೆ. ಮೀನುಗಾರರು ತಮ್ಮ ಪಾಲಿನ ಹಣವನ್ನು ಸರ್ಕಾರಕ್ಕೆ ಕಟ್ಟಿದರೂ ಪರಿಹಾರ ನೀಡುವುದನ್ನು ಮರೆತಿದೆ.

    ಆಸಕ್ತಿ ಕಡಿಮೆ: ಸರ್ಕಾರ ಸಕಾಲದಲ್ಲಿ ಹಣ ನೀಡದ ಕಾರಣ ಉಳಿತಾಯ ಮತ್ತು ಪರಿಹಾರ ಯೋಜನೆಯಡಿ ನೋಂದಣಿ ಮಾಡಿಕೊಳ್ಳುವ ಮೀನುಗಾರರ ಸಂಖ್ಯೆ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ. 2016-17ನೇ ಸಾಲಿನ ಹಣ ಇತ್ತೀಚೆಗಷ್ಟೇ ಪಾವತಿಯಾಗಿದೆ. ಅಲ್ಲಿಂದ ನಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುದಾನ ಇದುವರೆಗೂ ಬಿಡುಗಡೆಯಾಗಿಲ್ಲ ಎನ್ನುತ್ತಾರೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳು.

    2018-19ರಲ್ಲಿ ಜಿಲ್ಲೆಯಲ್ಲಿ ಈ ಯೋಜನೆಯಡಿ 9,500 ಮೀನುಗಾರರು ಹೆಸರು ನೋಂದಾಯಿಸಿದ್ದರು. 2019ರಲ್ಲಿ ಇವರ ಸಂಖ್ಯೆ 8,500 ಕ್ಕೆ ಇಳಿದಿತ್ತು. 2020-21ನೇ ಸಾಲಿಗೆ ಈ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡವರ ಸಂಖ್ಯೆ 7,500ಕ್ಕೆ ಇಳಿಕೆಯಾಗಿದೆ.

    ಉಳಿತಾಯ ಮತ್ತು ಪರಿಹಾರ ಯೋಜನೆಯಡಿ ಹೆಸರು ನೋಂದಾಯಿಸಿದ ಮೀನುಗಾರರಿಗೆ ಸರ್ಕಾರದ ಪಾಲಿನ ಹಣ ಕೆಲ ವರ್ಷದಿಂದ ಬಿಡುಗಡೆಗೆ ಬಾಕಿ ಇದೆ. ಈ ಬಗ್ಗೆ ಇಲಾಖೆಗೆ ಪತ್ರ ಬರೆದಿದ್ದೇವೆ. ಈ ಬಾರಿ ಕೋವಿಡ್ ಲಾಕ್​ಡೌನ್​ಗಾಗಿ ಸರ್ಕಾರ ಘೋಷಿಸಿದ ತಲಾ 3 ಸಾವಿರ ರೂ. ವಿಶೇಷ ಸಹಾಯಧನ ಇದೇ ಯೋಜನೆಯ ಫಲಾನುಭವಿಗಳಿಗೆ ಹೆಚ್ಚುವರಿಯಾಗಿ ದೊರೆಯಲಿದೆ.
    | ಪಿ. ನಾಗರಾಜು ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ

    ಸರ್ಕಾರ ಉಳಿತಾಯ ಮತ್ತು ಪರಿಹಾರ ಯೋಜನೆಯ ಕೋಟ್ಯಂತರ ರೂ. ಹಣ ಕೊಡುವುದು ಬಾಕಿ ಇಟ್ಟುಕೊಂಡಿರುವ ಸರ್ಕಾರ ಈಗ ಅದಕ್ಕಿಂತ ಕಡಿಮೆ ಮೊತ್ತದ ಹಣವನ್ನು ಲಾಕ್​ಡೌನ್ ಪರಿಹಾರ ಎಂದು ಘೋಷಿಸಿರುವುದು ಮೋಸ. ಮೊದಲು ಬಾಕಿ ಹಣ ಪಾವತಿಸಲಿ. ನಂತರ ಹೆಚ್ಚುವರಿ ಪರಿಹಾರ ಘೋಷಿಸಲಿ.
    | ವಿನಾಯಕ ಹರಿಕಂತ್ರ ಮೀನುಗಾರರ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts