More

    ಉರಗ ಸಂರಕ್ಷಕ ಈ ಗೃಹರಕ್ಷಕ!

    ನರಗುಂದ: ಹಾವುಗಳು ಕಂಡರೆ ಮಾರುದ್ದ ದೂರ ಓಡುವ ಜನರ ಮಧ್ಯೆ ಪಟ್ಟಣದ ಗೃಹರಕ್ಷಕ ದಳದ ನೌಕರರೊಬ್ಬರು ನೂರಾರು ಹಾವುಗಳನ್ನು ಸಂರಕ್ಷಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಸೆರೆ ಹಿಡಿದಿರುವ ಹಾವುಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಎಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.

    ಪಟ್ಟಣದ ಕಸಬಾ ಬಡಾವಣೆ ನಿವಾಸಿ ಬಿ.ಆರ್. ಸುರೇಬಾನ ಅವರು ತಾಲೂಕಿನಾದ್ಯಂತ ಹಾವು ಹಿಡಿಯುವ ಬುಡ್ಡಾ ಎಂದೇ ಚಿರಪರಿಚಿತರು. 11 ವರ್ಷಗಳಿಂದ ಗೃಹ ರಕ್ಷಕದಳದಲ್ಲಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಟ್ಟಣದ ಯಾವುದೇ ಬಡಾವಣೆಯ ಮನೆ, ಕಚೇರಿ, ಶಾಲೆ, ದೇವಸ್ಥಾನಗಳಲ್ಲಿ ಹಾವುಗಳು ಕಂಡರೆ ಜನರಿಗೆ ತಕ್ಷಣ ನೆನಪಾಗುವ ಹೆಸರು ಬುಡ್ಡಾ. ನಾಲ್ಕೈದು ವರ್ಷಗಳಿಂದ ವೃತ್ತಿಯೊಂದಿಗೆ ಉರಗ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ ಬುಡ್ಡಾ ಅವರು ಇಲ್ಲಿಯತನಕ ವಿವಿಧ ಜಾತಿಯ 300ಕ್ಕೂ ಅಧಿಕ ಹಾವುಗಳನ್ನು ಸೆರೆಹಿಡಿದು ಕಾಡಿಗೆ ಬಿಟ್ಟಿದ್ದಾರೆ.

    ಕೊಳಕು ಮಂಡಲ ಅಥವಾ ದಾಸರ ಹಾವು (ರಸ್ಸೆಲ್ಸ್ ವೈಪರ್) ಇದು ಅತ್ಯಂತ ವಿಷಕಾರಿ ಹಾವು. ಉರಗ ರಕ್ಷಕ ಎಷ್ಟೇ ಅನುಭವಿಯಾಗಿದ್ದರೂ ಇಂಥ ಹಾವು ಹಿಡಿಯುವುದು ಸುಲಭವಲ್ಲ. ಆದರೆ, ಸುರೇಬಾನ ಅವರು ರಸ್ಸೆಲ್ಸ್ ವೈಪರ್ ರಕ್ಷಣೆಯಲ್ಲಿ ಪರಿಣತರು. ಇಲ್ಲಿಯವರೆಗೆ 10ಕ್ಕೂ ಅಧಿಕ ರಸ್ಸೆಲ್ಸ್ ವೈಪರ್​ಗಳನ್ನು ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಲಾಕ್​ಡೌನ್ ಸಂದರ್ಭದಲ್ಲಿ 100ಕ್ಕೂ ಅಧಿಕ ಹಾವುಗಳನ್ನು ರಕ್ಷಿಸಿದ್ದು, ಇದರಲ್ಲಿ ನಾಗರ ಹಾವುಗಳೇ ಹೆಚ್ಚು. ಮಧ್ಯರಾತ್ರಿಯೇ ಆಗಲಿ ಉರಗ ಕಂಡುಬಂದಿದೆ ಎಂದು ಫೋನ್ ಕರೆ ಮಾಡಿದರೆ ತಕ್ಷಣ ಸ್ಥಳಕ್ಕಾಗಮಿಸಿ ಹಾವುಗಳನ್ನು ಹಿಡಿಯುತ್ತಾರೆ. ಪರಿಸರ ಸಮತೋಲನದಲ್ಲಿ ಹಾವುಗಳ ಮಹತ್ವವನ್ನು ಜನರಿಗೆ ತಿಳಿಸಿ ಜಾಗೃತಿ ಕೂಡ ಮೂಡಿಸುತ್ತಿದ್ದಾರೆ.

    ವಿಶಿಷ್ಟ ವಿಧಾನ

    ಪ್ಲಾಸ್ಟಿಕ್ ಚೀಲದಲ್ಲಿ ತುಂಬಾ ಸರಳ, ಸುರಕ್ಷೆ ಸಂರಕ್ಷಣಾ ವಿಧಾನ ಮೂಲಕ ಹಾವುಗಳನ್ನು ರಕ್ಷಿಸುತ್ತಾರೆ. (ಪೈಪ್-ಇನ್-ಬ್ಯಾಗ್ ಮೆಥಡ್). ಅನಿವಾರ್ಯವಿದ್ದಾಗ ಕೈಯಿಂದ ಹಿಡಿದು ಬ್ಯಾಗ್​ನಲ್ಲಿ ಹಾಕುತ್ತಾರೆ. ಬಹುತೇಕ ಸಂದರ್ಭದಲ್ಲಿ ಕಾಟನ್ ಬಟ್ಟೆ ಚೀಲದ ಬಾಯಿಗೆ 4 ಇಂಚು ಸುತ್ತಳತೆಯ 5 ಅಡಿ ಉದ್ದದ ಪೈಪ್ ಕಟ್ಟಿ ಹಾವಿನ ಎದುರಿಗಿಡುತ್ತಾರೆ. ಆಗ ಹಾವು ತಾನಾಗಿಯೇ ಒಳಗೆ ಸೇರಿಕೊಳ್ಳುತ್ತದೆ. ಈ ವಿಧಾನ ಬಳಸಿಕೊಂಡು ನೂರಾರು ಹಾವುಗಳನ್ನು ರಕ್ಷಿಸಿದ್ದಾರೆ.

    ಉರಗ ಪ್ರೇಮಿ ಬುಡ್ಡಾ ಸುರೇಬಾನ್ ಅವರನ್ನು ಮೂರು ವರ್ಷಗಳಿಂದ ನೋಡುತ್ತಿದ್ದೇನೆ. ನಾನು ಅದೆಷ್ಟೋ ಆಸಕ್ತರಿಗೆ ಉರಗ ಸಂರಕ್ಷಣೆ ತರಬೇತಿ ನೀಡಿದ್ದೇನೆ. ಇವರಲ್ಲಿ ನಾ ಕಂಡ ಅತ್ಯದ್ಭುತ ಉರಗ ಸಂರಕ್ಷಕರಲ್ಲಿ ಬುಡ್ಡಾ ಒಬ್ಬರು. ತರಬೇತಿ ಪಡೆಯದ ಇವರು ಹಾವುಗಳನ್ನು ರಕ್ಷಿಸುತ್ತಾರೆ. ಅಲ್ಲದೆ, ಜನರಿಗೆ ಉರಗಗಳ ಬಗೆಗಿನ ಮೂಢನಂಬಿಕೆ, ತಪ್ಪು ಕಲ್ಪನೆಗಳನ್ನು ನಿವಾರಿಸಿ, ಅವುಗಳ ಮಹತ್ವ ತಿಳಿಸಿ ಅರಿವು ಮೂಡಿಸುತ್ತಿದ್ದಾರೆ.

    | ಮಂಜುನಾಥ ನಾಯಕ, ಉರಗ ತಜ್ಞ, ನರಗುಂದ

    ಪರಿಸರ ಸಮತೋಲನದಲ್ಲಿ ಉರಗಗಳು ಮಹತ್ವದ ಪಾತ್ರ ವಹಿಸುತ್ತವೆ. ಮಾನವನ ಹಸ್ತಕ್ಷೇಪದಿಂದ ಅದೆಷ್ಟೋ ಜೀವಿಗಳು ನಾಶವಾಗಿವೆ. ಹಲವಾರು ಜೀವಿಗಳು ಅಳಿವಿನಂಚಿನಲ್ಲಿವೆ. ಮನುಷ್ಯರಂತೆ ಪ್ರತಿ ಪ್ರಾಣಿ, ಪಕ್ಷಿಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಅದನ್ನರಿತು ಹೀಗೆ ಅಳಿಲು ಸೇವೆ ಮಾಡುತ್ತಿದ್ದೇನೆ. ಇದರಿಂದ ನನಗೆ, ಸೇವೆ ಸಲ್ಲಿಸುತ್ತಿರುವ ಇಲಾಖೆಗೂ ಗೌರವ ಬಂದಿದೆ.

    | ಬಿ.ಆರ್. ಸುರೇಬಾನ (ಬುಡ್ಡಾ), ನರಗುಂದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts