More

    ಉತ್ಸವ ಮೂರ್ತಿಗಳಂತಾದ ಸದಸ್ಯರು!

    ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಮುಗಿದು 5 ತಿಂಗಳು ಗತಿಸಿದರೂ ಆಯ್ಕೆಯಾದ 58 ಪಾಲಿಕೆ ಸದಸ್ಯರಿಗೆ ಅಧಿಕಾರ ಚಲಾಯಿಸುವ ಭಾಗ್ಯ ಇನ್ನೂ ಲಭಿಸಿಲ್ಲ. ಗೆದ್ದು ಬಂದಿರುವ ಪಾಲಿಕೆ ಸದಸ್ಯರು ಕೇವಲ ಉತ್ಸವ ಮೂರ್ತಿಗಳಾಗಿಯೇ ಉಳಿದಿದ್ದಾರೆ.

    ಐದು ತಿಂಗಳ ಹಿಂದೆಯೇ ಪಾಲಿಕೆ ಸದಸ್ಯರಾಗಿ ಚುನಾಯಿತರಾದರೂ ಪ್ರಮಾಣವಚನ ಪ್ರಕ್ರಿಯೆ ನಡೆಯದ ಕಾರಣ ಈವರೆಗೂ ಅವರು ಅಧಿಕೃತವಾಗಿ ಪಾಲಿಕೆ ಸದಸ್ಯರಾಗಿಲ್ಲ. ಮಾರ್ಚ್‌ನಲ್ಲಿ ಪಾಲಿಕೆ ಬಜೆಟ್ ಮಂಡನೆಯಾಗುವುದಿದೆ. ವಾರ್ಡ್‌ಗಳಿಗೆ ಏನೇನು ಬೇಕು, ಏನೇನು ಅಭಿವೃದ್ಧಿ ಕಾರ್ಯಗಳೇನಾಗಬೇಕು ಎಂಬ ಬಗ್ಗೆ ಪಟ್ಟಿ ಮಾಡಿ, ಅಧಿಕಾರಿಗಳ ಅವಗಾಹನೆಗೆ ತರುವುದಿರುತ್ತದೆ. ಆದರೆ, ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿದ ಮೇಲೆ ಇವರ ಅಧಿಕಾರ ಚಲಾವಣೆಗೆ ಬರಲಿದೆ. ಹೀಗಾಗಿ ಬಜೆಟ್ ಹಿತದೃಷ್ಟಿಯಿಂದ ಪ್ರಮಾಣವಚನ ಸ್ವೀಕಾರ ಪ್ರಕ್ರಿಯೆ ಆಗಬೇಕೆನ್ನುವ ಆಶಯ ವ್ಯಕ್ತವಾಗಿದೆ.

    ಅಧಿಕಾರಿಗಳಿಂದಲೇ ಬಜೆಟ್?: ಸದಸ್ಯರು ಪ್ರಮಾಣ ವಚನ ಸ್ವೀಕಾರ ಹಾಗೂ ಪಾಲಿಕೆ ಮಹಾಪೌರ, ಉಪಮಹಾಪೌರ ಆಯ್ಕೆ ನಡೆಯಬೇಕಿದೆ. ಇದಾದ ಬಳಿಕ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ನಡೆಯಬೇಕಿದೆ. ಆಯ್ಕೆಯಾಗುವ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರೇ ಬಜೆಟ್ ಮಂಡನೆ ಮಾಡಬೇಕು. ಆದರೆ, ಇಷ್ಟೆಲ್ಲ ಪ್ರಕ್ರಿಯೆಗಳು ಮಾರ್ಚ್ ತಿಂಗಳ ವೇಳೆಗೆ ನಡೆಯುತ್ತವೆ ಎನ್ನುವ ಲಕ್ಷಣಗಳು ಗೋಚರಿಸುತ್ತಿಲ್ಲ. ವಿಳಂಬವಾದರೆ ಅಧಿಕಾರಿಗಳೇ ಬಜೆಟ್ ಮಂಡನೆ ಮಾಡಬೇಕಾಗುತ್ತದೆ. ಹೀಗಾಗಿ, ಮತ್ತೆ ಅಧಿಕಾರಿಗಳೇ ಪಾಲಿಕೆ ಆಡಳಿತ ರಥ ಎಳೆಯುತ್ತಾರೋ ಎಂಬ ಅನುಮಾನ ಕಾಡತೊಡಗಿದೆ.

    ತ್ವರಿತ ಕ್ರಮವಾಗಲಿ: ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳ ಪಾತ್ರ ದೊಡ್ಡದಾಗಿರುತ್ತದೆ. ಚುನಾವಣೆಯಲ್ಲಿ ಆಯ್ಕೆಯಾದರೂ ಅವರ ಕೈಗೆ ಅಧಿಕಾರ ಲಭಿಸದಿರುವುದು ಎಷ್ಟರ ಮಟ್ಟಿಗೆ ಸರಿ? ಪಾಲಿಕೆ ಆಡಳಿತವನ್ನು ಅಧಿಕಾರಿಗಳು ನಡೆಸುವುದಾರೆ, ಪಾಲಿಕೆ ಚುನಾವಣೆ ನಡೆಸುವುದಾದರೂ ಏತಕ್ಕೆ ? ಎಂಬ ಪ್ರಶ್ನೆಗಳು ಉದ್ಭವವಾಗಿವೆ. ಈಗಾಗಲೇ 5 ತಿಂಗಳುಗಟ್ಟಲೇ ವಿಳಂಬವಾಗಿದೆ. ಇನ್ನಾದರೂ ಶೀಘ್ರದಲ್ಲಿ ಪ್ರಮಾಣವಚನ ಬೋಧಿಸಿ, ಪಾಲಿಕೆ ಸದಸ್ಯರಿಗೆ ಜನಸೇವೆ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಪ್ರಜ್ಞಾವಂತರ ಆಶಯವಾಗಿದೆ.

    ಮೀಸಲಾತಿ ಕಾರಣ?: ಮೂಲಗಳ ಪ್ರಕಾರ ಮಹಾಪೌರ ಹಾಗೂ ಉಪಮಹಾಪೌರ ಆಯ್ಕೆ ವಿಳಂಬಕ್ಕೆ ಮೀಸಲಾತಿ ಕಾರಣ ಎನ್ನಲಾಗುತ್ತಿದೆ. ಈಗಿರುವ ಮೀಸಲಾತಿಗೆ ಬದಲಾವಣೆ ಆಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಸದಸ್ಯರ ಪ್ರಮಾಣವಚನ ಪ್ರಕ್ರಿಯೆ ನಡೆಯುತ್ತಿಲ್ಲ. ಆಡಳಿತ ನಡೆಸುತ್ತಿರುವ ಸರ್ಕಾರ ಅನುಕೂಲ ಆಗುವ ನಿಟ್ಟಿನಲ್ಲಿ ಮೀಸಲಾತಿ ತರಲಿದೆಯೇ ಎಂಬ ಅನುಮಾನವೂ ವ್ಯಕ್ತವಾಗತೊಡಗಿದೆ.

    ಅಭಿವೃದ್ಧಿಗೂ ಗ್ರಹಣ: ಆಯ್ಕೆಯಾದ ಪಾಲಿಕೆ ಸದಸ್ಯರು ಪ್ರಮಾಣವಚನ ಸ್ವೀಕರಿಸುವವರೆಗೆ ಅಧಿಕೃತವಾಗಿ ಅಧಿಕಾರ ಚಲಾಯಿಸುವುದಕ್ಕೆ ಬರುವುದಿಲ್ಲ. ಹೀಗಾಗಿ ವಾರ್ಡ್‌ಗಳಲ್ಲಿನ ಅಭಿವೃದ್ಧಿ ಕೆಲಸಗಳಿಗೆ ಗ್ರಹಣ ಹಿಡಿದಿವೆ. ಶಾಸನ ಬದ್ಧವಾದಂತಹ ಪಾಲಿಕೆಯಲ್ಲಿನ ಅಧಿಕಾರಕ್ಕಾಗಿ ಇವರೆಲ್ಲರೂ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಪಾಲಿಕೆ ಸದಸ್ಯರಿದ್ದರೂ ಪಾಲಿಕೆಯಲ್ಲಿ ಜಿಲ್ಲಾಧಿಕಾರಿಯೇ ಆಡಳಿತಾಧಿಕಾರಿ. ವಾರ್ಡ್‌ವಾರು ಪ್ರಗತಿ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡುತ್ತಿದ್ದಾರೆ. ಹೀಗಾಗಿ ಗೆದ್ದು ಬಂದಿರುವ ಪಾಲಿಕೆ ಸದಸ್ಯರು ಕೇವಲ ಉತ್ಸವ ಮೂರ್ತಿಗಳಾಗಿಯೇ ಇದ್ದಾರೆ. 5 ತಿಂಗಳು ಕಳೆದರೂ ಸದಸ್ಯರು ಜನರ ಆಶೋತ್ತರಗಳಿಗೆ ಸ್ಪಂದಿಸದಂತಾಗಿದೆ.

    ಒಂದು ವಾರ ಅಥವಾ 15 ದಿನದಲ್ಲಿ ಮೇಯರ್, ಉಪಮೇಯರ್ ಆಯ್ಕೆ ಆಗಬಹುದು. ಇವರ ಆಯ್ಕೆ ವಿಳಂಬವಾಗಿರುವ ಬಗ್ಗೆ ಗೊತ್ತಿಲ್ಲ. ಪಾಲಿಕೆ ಸದಸ್ಯರು ಪ್ರಮಾಣವಚನ ಸ್ವೀಕರಿಸುವವರೆಗೆ ಅಧಿಕೃತವಾಗಿ ಅಧಿಕಾರ ಚಲಾಯಿಸುವುದಕ್ಕೆ ಬರುವುದಿಲ್ಲ.
    | ರುದ್ರೇಶ ಘಾಳಿ ಮಹಾನಗರ ಪಾಲಿಕೆ ಆಯುಕ್ತ ಬೆಳಗಾವಿ

    | ಜಗದೀಶ ಹೊಂಬಳಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts