More

    ಉತ್ತರ ಕನ್ನಡ ಜಿಲ್ಲೆಯಲ್ಲಿ 69 ಮಂದಿಗೆ ಕರೊನಾ

    ಕಾರವಾರ: ಜಿಲ್ಲೆಯ 69 ಜನರಿಗೆ ಭಾನುವಾರ ಕೋವಿಡ್-19 ಖಚಿತವಾಗಿದೆ. ಪ್ರಮುಖ ಸಂಗತಿ ಎಂದರೆ ಒಂದೇ ದಿನ 100ಕ್ಕೂ ಹೆಚ್ಚು ಜನರು ಕರೊನಾ ಮುಕ್ತರಾಗಿದ್ದಾರೆ. ಭಟ್ಕಳದಲ್ಲಿ 75, ಕುಮಟಾದಲ್ಲಿ 4, ಹಳಿಯಾಳದಲ್ಲಿ 2, ಸಿದ್ದಾಪುರದಲ್ಲಿ 1, ಶಿರಸಿಯಲ್ಲಿ 17, ಯಲ್ಲಾಪುರದಲ್ಲಿ 14 ಜನರನ್ನು ಬಿಡುಗಡೆ ಮಾಡಲಾಗಿದೆ. ಏಳು ಮಕ್ಕಳು, 69 ವರ್ಷದ ವೃದ್ಧ, ಮೂವರು ಮಹಿಳೆಯರು ಹಾಗೂ ಮೂವರು ಪುರುಷರು ಗುಣ ಹೊಂದಿ ತಾಲೂಕು ಆಸ್ಪತ್ರೆಯಿಂದ ತೆರಳಿದರು. ಡಾ. ದೀಪಕ್ ಭಟ್ಟ, ಡಾ. ಸೌಮ್ಯ ಕೆ.ವಿ., ಎಸ್.ಟಿ. ಭಟ್ಟ ಅವರು ಸೋಂಕು ಮುಕ್ತರಾದವರಿಗೆ ಪ್ರಮಾಣಪತ್ರ ನೀಡಿದರು.

    ಎಲ್ಲೆಲ್ಲಿ ಎಷ್ಟು?: ಅಂಕೋಲಾದಲ್ಲಿ 10, ಭಟ್ಕಳದಲ್ಲಿ 6, ಹಳಿಯಾಳದಲ್ಲಿ 1, ಹೊನ್ನಾವರದಲ್ಲಿ 4, ಜೊಯಿಡಾದಲ್ಲಿ 2, ಕಾರವಾರದಲ್ಲಿ 6, ಕುಮಟಾದಲ್ಲಿ 17, ಮುಂಡಗೋಡಿನಲ್ಲಿ 6, ಸಿದ್ದಾಪುರದಲ್ಲಿ 3, ಶಿರಸಿಯಲ್ಲಿ 2, ಯಲ್ಲಾಪುರದಲ್ಲಿ 2 ಜನರಿಗೆ ಕರೊನಾ ಇರುವುದು ದೃಢಪಟ್ಟಿದೆ.

    ಹೊರ ಊರುಗಳಿಂದ ಬಂದ ಏಳು ಜನರಲ್ಲಿ, ಏಳು ಮಕ್ಕಳಲ್ಲಿ ಎಂಟು ಜನ ವೃದ್ಧರಲ್ಲಿ ಸೋಂಕು ಕಂಡುಬಂದಿದೆ. ಇನ್ನು 39 ಜನರ ಸೋಂಕಿನ ಮೂಲವೇ ಪತ್ತೆಯಾಗಿಲ್ಲ. ಜ್ವರದ ಬಾಧೆ ಇದ್ದ ಎಂಟು ಜನರಲ್ಲೂ ಕರೊನಾ ವೈರಾಣು ಕಾಣಿಸಿಕೊಂಡಿದೆ.

    ಒಂದೇ ಕುಟುಂಬದ 10 ಜನರಿಗೆ: ಕುಮಟಾದಲ್ಲಿ ಕರೊನಾ ಪ್ರಸರಣ ಮುಂದುವರಿದಿದೆ. ಒಂದೇ ದಿನ 17 ಜನರಿಗೆ ರೋಗ ಪತ್ತೆಯಾಗಿದೆ. ಮಾಸ್ತಿಹಳ್ಳದ ಮಾವಳ್ಳಿಯಲ್ಲಿ ಒಂದೇ ಕುಟುಂಬದ 10 ಜನರಲ್ಲಿ ಸೋಂಕು ಖಚಿತವಾಗಿದೆ. ಕೊಡಂಬಳ್ಳಿಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರಿಂದ ರೋಗ ಬಂದಿರುವ ಶಂಕೆ ಇದೆ. ಇನ್ನು ವೈದ್ಯರ ಸಂಪರ್ಕದಿಂದ ಮೂವರು ಸೇರಿ ಒಟ್ಟು ಏಳು ಜನರಿಗೆ ಪ್ರಾಥಮಿಕ ಸಂಪರ್ಕದಿಂದ ರೋಗ ಬಂದಿದೆ.

    ಹಳಿಯಾಳ ಸಿಪಿಐ ಕಚೇರಿ ಕಾನ್ಸ್​ಟೇಬಲ್​ಗೆ ಸೋಂಕು
    ಹಳಿಯಾಳ ಸಿಪಿಐ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಕಲಘಟಗಿ ಮೂಲದ ಕಾನ್ಸ್​ಟೇಬಲ್ ಒಬ್ಬರಿಗೆ ಸೋಂಕು ತಗುಲಿದೆ. ಅಲ್ಲದೆ, ಶನಿವಾರ ಬಿ.ಕೆ. ಹಳ್ಳಿ ಹಾಗೂ ಮುಂಡವಾಡದಲ್ಲೂ ತನ್ನ ಖಾತೆ ತೆರೆದಿದೆ. ಜುಲೈ 13 ರಂದು ಕರೊನಾ ಧೃಡಪಟ್ಟಿದ್ದ ಪಟ್ಟಣದ ದೇಶಪಾಂಡೆ ಆಶ್ರಯ ನಗರದ 60 ವರ್ಷದ ವ್ಯಕ್ತಿಯ ಕುಟುಂಬದ ನಾಲ್ವರಿಗೆ, ಹುಬ್ಬಳ್ಳಿಯ ಎಸ್​ಡಿಎಂನಲ್ಲಿ ಚಿಕಿತ್ಸೆ ಪಡೆದು ಬಂದ ಮಹಿಳೆಗೆ ಕರೊನಾ ಬಂದಿದೆ. ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಬಾಣಸಗೇರಿ ಮುರಾರ್ಜಿ ಶಾಲೆಯ ಹೊಸ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಲಾಗಿದೆ. ಮೊದಲ ದಿನ ಸೋಂಕಿತರನ್ನು ಆಂಬುಲೆನ್ಸ್​ನಲ್ಲಿ ಕರೆದೊಯ್ಯುವಲ್ಲಿ ಹಾಗೂ ಊಟ, ವಸತಿ ವ್ಯವಸ್ಥೆ ಮಾಡುವಲ್ಲಿ ಕೆಲ ಗೊಂದಲ ಉಂಟಾಗಿದೆ ಎಂಬ ದೂರು ಕೇಳಿ ಬಂದಿದೆ. ಕಾಳಗಿನಕೊಪ್ಪದ ಬಾಣಂತಿಯಲ್ಲಿ ಸೋಂಕು ದೃಢಪಟ್ಟ ಬಗ್ಗೆ ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದರು. ಆದರೆ, ಭಾನುವಾರವಾದರೂ ಆಕೆಯನ್ನು ಕರೆದೊಯ್ಯಲು ಯಾರೂ ಬಾರದೇ ಇರುವುದು ಆತಂಕ ಹೆಚ್ಚಲು ಕಾರಣವಾಗಿತ್ತು. ತಾಲೂಕು ಆಡಳಿತದ ನಿರ್ಲಕ್ಷ್ಯದ ಬಗ್ಗೆ ಮುಖಂಡ ಅಶೋಕ ಮೇಟಿ ಕಾರವಾರ ಉಪವಿಭಾಗಾಧಿಕಾರಿಗೆ ದೂರು ನೀಡಿದ್ದಾಗಿ ತಿಳಿಸಿದ್ದಾರೆ. ಭಾನುವಾರ ಅವರನ್ನು ಹಳಿಯಳ ಕೋವಿಡ್ ಕೇಂದ್ರಕ್ಕೆ ಸಾಗಿಸಲಾಗಿದೆ.

    ಕೈಗಾ ಸುರಕ್ಷಿತ: ಕೈಗಾ ಅಣು ಸ್ಥಾವರಕ್ಕೆ ಸದ್ಯಕ್ಕೆ ಸೋಂಕಿನ ಭಯ ಇಲ್ಲ ಎಂದು ಎನ್​ಪಿಸಿಐಎಲ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕೈಗಾ ಉದ್ಯೋಗಿಗಳು ವಾಸವಿರುವ ಮಲ್ಲಾಪುರ ಟೌನ್​ಶಿಪ್​ನಲ್ಲಿ ಒಬ್ಬರಿಗೆ ಸೋಂಕು ಖಚಿತವಾಗಿತ್ತು. ಅವರು ಗುಣವಾಗಿದ್ದಾರೆ. ಮತ್ಯಾರಿಗೂ ಕರೊನಾ ದೃಢಪಟ್ಟಿಲ್ಲ. ಘಟಕಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿವೆ ಎಂದಿದ್ದಾರೆ.

    ಕ್ವಾರಂಟೈನ್​ನಲ್ಲಿದ್ದವರಿಗೆ ವಿಶ್ವಾಸ ತುಂಬಿದ ಆಡಳಿತ
    ಶಿರಸಿ:
    ಕೋವಿಡ್ 19 ವೈರಸ್ ಕಾರಣಕ್ಕೆ ಹೋಂ ಕ್ವಾರಂಟೈನ್​ನಲ್ಲಿದ್ದ ಜನರ ಮನೆಗಳಿಗೆ ತೆರಳಿ ಧೈರ್ಯ ತುಂಬುವ ಜತೆಗೆ ಸುತ್ತಮುತ್ತಲ ಸಾರ್ವಜನಿಕರಿಗೆ ಸೋಂಕಿತರ ಬಗ್ಗೆ ಅನುಕಂಪದಿಂದ ವರ್ತಿಸುವಂತೆ ಇಲ್ಲಿನ ತಾಲೂಕು ಆಡಳಿತದ ವತಿಯಿಂದ ಭಾನುವಾರ ಮನವಿ ಮಾಡಲಾಯಿತು. ತಹಸೀಲ್ದಾರ್ ಎಂ. ಆರ್. ಕುಲಕರ್ಣಿ, ತಾಲೂಕು ಆರೋಗ್ಯಾಧಿಕಾರಿ ವಿನಾಯಕ ಭಟ್ಟ, ನಗರಸಭೆ ಪೌರಾಯುಕ್ತ ರಮೇಶ ನಾಯಕ ಹಾಗೂ ಇತರರು ರಾಮನಬೈಲ್, ಕೆಎಚ್​ಬಿ ಕಾಲನಿ, ಗುಡ್ಡದಮನೆ, ರಾಮನತಗ್ಗು ಪ್ರದೇಶಗಳಿಗೆ ಭೇಟಿ ನೀಡಿ ಕ್ವಾರಂಟೈನ್​ನಲ್ಲಿರುವವರಿಗೆ ಧೈರ್ಯ ತುಂಬಿದರು. ಅಲ್ಲದೆ, ಅವರಿಗೆ ನಿತ್ಯ ಬೇಕಾಗುವ ಸಾಮಗ್ರಿಗಳ ಪೂರೈಕೆ, ಆರೋಗ್ಯ ಕಾಳಜಿಗೆ ಸಂಬಂಧಿಸಿ ಬೇಕಾದ ಸೌಲಭ್ಯ ಕಲ್ಪಿಸುವಂತೆ ಭರವಸೆ ನೀಡಿದರು. ಜತೆಗೆ, ಕ್ವಾರಂಟೈನ್​ನಲ್ಲಿದ್ದವರಿಗೆ ಬೇಕಾದ ಸಾಮಗ್ರಿ ನೀಡುವಂತೆ ಹತ್ತಿರದ ಕಿರಾಣಿ ಅಂಗಡಿ ಮಾಲೀಕರಿಗೆ ಸೂಚಿಸಲಾಯಿತು. ಈ ವೇಳೆ ಎಂ.ಆರ್. ಕುಲಕರ್ಣಿ ಮಾತನಾಡಿ, ಸುತ್ತಮುತ್ತಲ ಸಾರ್ವಜನಿಕರು ಹೋಮ್ ಕ್ವಾರಂಟೈನ್​ನಲ್ಲಿರುವವರನ್ನು ಗೌರವದಿಂದ ನೋಡಬೇಕು. ಅವರ ಭಾವನೆಗಳಿಗೆ ಸ್ಪಂದಿಸುವ ಕಾರ್ಯ ಸಮಾಜದ ಪ್ರತಿಯೊಬ್ಬರಿಂದ ಆಗಬೇಕು. ಹಾಗಾದಾಗ ಮಾತ್ರ ಈ ರೋಗವನ್ನು ದೂರಗೊಳಿಸಬಹುದು ಎಂದರು.

    ಬ್ಯಾಂಕ್ ನೌಕರನಿಗೆ ತಗುಲಿದ ವೈರಾಣು
    ಸಿದ್ದಾಪುರದಲ್ಲಿ ಸಿಂಡಿಕೇಟ್ ಬ್ಯಾಂಕ್ ನೌಕರರೊಬ್ಬರಿಗೆ, ಬೆಂಗಳೂರಿನಿಂದ ಬಂದ ಹೊಸೂರಿನ ಯುವಕ, ಹೆಗ್ಗಾರಳ್ಳಿಯ ವೃದ್ಧರೊಬ್ಬರಿಗೆ ಕರೊನಾ ದೃಢಪಟ್ಟಿದೆ. ಯಲ್ಲಾಪುರದ ಕಿರವತ್ತಿಯ 9 ಜನರಲ್ಲಿ ಹಾಗೂ ಪಟ್ಟಣದ ಒಬ್ಬರಲ್ಲಿ ಸೋಂಕು ಖಚಿತವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇನ್ನಿಬ್ಬರಲ್ಲಿ ಎರಡನೇ ಬಾರಿ ಪರೀಕ್ಷೆಯಲ್ಲೂ ಪಾಸಿಟಿವ್ ಬಂದಿದೆ. ಕಾರವಾರದಲ್ಲಿ ಅಂಡಮಾನ್​ನಿಂದ ಬಂದಿದ್ದ ಯುವತಿಗೂ ಸೋಂಕು ತಗುಲಿದೆ. ನಗರದಲ್ಲಿ ಒಬ್ಬರಿಗೆ, ಗ್ರಾಮೀಣ ಭಾಗಗಳಲ್ಲಿ ಹಲವರಿಗೆ ಕರೊನಾ ಖಚಿತವಾಗಿದೆ.

    ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಸೈನಿಕನ ವಿರುದ್ಧ ಪ್ರಕರಣ ದಾಖಲು
    ತತ್ವಣಗಿ ಗ್ರಾಮಕ್ಕೆ ಕಾಶ್ಮೀರದಿಂದ ಮರಳಿರುವ ಯೋಧನಲ್ಲಿ ಮೂರು ದಿನಗಳ ಹಿಂದೆ ವೈರಸ್ ಪತ್ತೆಯಾಗಿತ್ತು. ಅವರ ಸಂಪರ್ಕಕ್ಕೆ ಬಂದ ನಾಲ್ಕು ಜನರಲ್ಲಿ ರೋಗ ಇರುವುದು ಕಂಡುಬಂದಿದೆ. ಕಳೆದ ವಾರ ತತ್ವಣಗಿ ಗ್ರಾಮದಲ್ಲಿ ಕಾರ್ಯಕ್ರಮ ಏರ್ಪಡಿಸಿ ಸೇನೆಯ ಲೆಫ್ಟಿನೆಂಟ್ ಒಬ್ಬರನ್ನು ಸನ್ಮಾನಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕಾಶ್ಮೀರದಿಂದ ವಾಪಸಾದ ಯೋಧ ಸಹ ಭಾಗವಹಿಸಿ ಸನ್ಮಾನ ನೆರವೇರಿಸಿದ್ದ. ಮರುದಿನವೇ ಯೋಧನಲ್ಲಿ ಕರೊನಾ ಇರುವುದು ಖಚಿತವಾಗಿದೆ. ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಬಗ್ಗೆ ಯೋಧನ ವಿರುದ್ಧ ತಾಲೂಕು ಆಡಳಿತ ಪ್ರಕರಣ ದಾಖಲಿಸಿಕೊಂಡಿದೆ. ಮುಂಜಾಗ್ರತೆ ಕ್ರಮವಾಗಿ ತತ್ವಣಗಿ ಗ್ರಾಮವನ್ನು ಸೀಲ್​ಡೌನ್ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts