More

    ಉತ್ತಮ ಆಡಳಿತ-ಸಮಾಜ ನಿರ್ಮಾಣಕ್ಕೆ ನೆರವು

    ಬಾಗಲಕೋಟೆ: ಒಂದು ಛಾಯಾಚಿತ್ರ ಇಡೀ ವ್ಯವಸ್ಥೆಯನ್ನು ಪರಿಚಯಿಸಿದರೆ ಸುದ್ದಿ ಅದನ್ನು ವಿಶ್ಲೇಷಿಸಿ ಅದಕ್ಕೆ ಶಕ್ತಿ ತುಂಬುತ್ತದೆ. ಹೀಗಾಗಿ ಛಾಯಾಚಿತ್ರ ಮತ್ತು ಸುದ್ದಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಭದ್ರ ಬುನಾದಿಯಾಗಿದೆಯಲ್ಲದೆ, ಉತ್ತಮ ಆಡಳಿತ ಮತ್ತು ಸಮಾಜ ನಿರ್ಮಾಣಕ್ಕೆ ನೆರವಾಗಿದೆ ಎಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಹೇಳಿದರು.
    ನವನಗರದ ಪತ್ರಿಕಾ ಭವನದಲ್ಲಿ ಬಾಗಲಕೋಟೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಶುಕ್ರವಾರ ವಿಶ್ವ ಛಾಯಾಗ್ರಹಣ ದಿನಾಚರಣೆ ಮತ್ತು ಹೋಳಿ ಉತ್ಸವದಲ್ಲಿ ಉತ್ತಮ ಛಾಯಾಚಿತ್ರ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
    ಛಾಯಾಚಿತ್ರ ತೆಗೆಯುವುದು ಒಂದು ಕಲೆ, ಅದನ್ನು ಕರಗತ ಮಾಡಿಕೊಂಡಿರುವ ಛಾಯಾಗ್ರಾಹಕರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸೇರಿದಂತೆ ಆಯಾ ಕ್ಷೇತ್ರಗಳ ಛಾಯಾಚಿತ್ರ ತೆಗೆಯುವ ಮೂಲಕ ಇಡೀ ವ್ಯವಸ್ಥೆಯ ಚಿತ್ರಣವನ್ನು ಒಂದು ಛಾಯಾಚಿತ್ರ ಮೂಲಕ ಕಟ್ಟಿಕೊಡುತ್ತಾರೆ ಎಂದರು.
    ಛಾಯಾಗ್ರಾಹಕರು ಎಲೆ ಮರೆಯ ಕಾಯಿ ಇದ್ದಂತೆ. ಅವರ ಪ್ರತಿಭೆಗಳಿಗೆ ಅವಕಾಶ ಸಿಗಬೇಕು. ಜಿಲ್ಲೆಯಲ್ಲಿ ಪ್ರವಾಹದ ಸಂದರ್ಭದಲ್ಲಿ ಸಂತ್ರಸ್ತನೋರ್ವ ದೇವರನ್ನು ಹೊತ್ತು ವ್ಯಕ್ತಿ ಸಾಗುತ್ತಿದ್ದ ಚಿತ್ರ ವೈರಲ್ ಆಗಿತ್ತು. ಈ ಚಿತ್ರವು ಪ್ರವಾಹದ ನೈಜ ಚಿತ್ರಣ ಬಿಡಿಸಿಟ್ಟಿತು. ಪತ್ರಕರ್ತರು, ಛಾಯಾಗ್ರಾಹಕರು ಕ್ರಿಯಾಶೀಲರಾಗಿ ಕೆಲಸ ಮಾಡಿದಷ್ಟು ಸಮಾಜಕ್ಕೆ ಸಹಾಯವಾಗುತ್ತದೆ. ಯುವತಿಯರು ಮಾಧ್ಯಮ ಕ್ಷೇತ್ರದಲ್ಲಿ ಹೆಜ್ಜೆ ಹಾಕಿ ಸಾಧನೆ ಮಾಡಬೇಕು. ಬಾಗಲಕೋಟೆ ಹಿಂದುಳಿದ ಜಿಲ್ಲೆ ಎಂಬ ಭಾವಿಸದೇ ಪುರುಷರಷ್ಟೆ ನಮಗೂ ಸಾಧನೆಯ ಕೌಶಲ್ಯ ಇದೆ ಎಂಬ ಆತ್ಮವಿಶ್ವಾಸದೊಂದಿಗೆ ಯುವತಿಯರು ಹೆಜ್ಜೆ ಇಡಬೇಕು, ಅವಕಾಶ ಸಿಕ್ಕಾಗ ಪ್ರತಿಭೆಯನ್ನು ಅನಾವರಣಗೊಳಿಸಬೇಕು ಎಂದರು ಹೇಳಿದರು.
    ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಛಾಯಾಗ್ರಾಹಕರಲ್ಲಿ ನಿರಂತರ ಕುತೂಹಲ ಹೆಚ್ಚು ಇರುತ್ತದೆ. ಕಳೆದು ಹೋದ ಸವಿ ನೆನಪುಗಳನ್ನು ನೀಡುವ ಛಾಯಾಚಿತ್ರಗಳು, ಅವುಗಳನ್ನು ಸೆರೆ ಹಿಡಿದಿರುವ ಛಾಯಾಗ್ರಾಹಕರ ಸೇವೆ ಅನನ್ಯವಾದದ್ದು ಎಂದು ಹೇಳಿದರು..
    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ ಮಾತನಾಡಿ, ಬಾಗಲಕೋಟೆ ಜಿಲ್ಲೆಯಲ್ಲಿ ಛಾಯಾಗ್ರಾಹಕ್ಕೆ ಸಾಕಷ್ಟು ಅವಕಾಶಗಳಿವೆ. ಪ್ರಕೃತಿ ಸೊಬಗು ಇಲ್ಲಿದೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಛಾಯಾಚಿತ್ರ ಪ್ರದರ್ಶನದಲ್ಲಿ ಛಾಯಾಚಿತ್ರಗಳು ಗಮನ ಸೆಳೆದವು. ಹೋಳಿ ಉತ್ಸವದ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ರೂಪಶ್ರೀ ಎಸ್. ಹಂಜಗಿ, ದ್ವಿತೀಯ ಬಹುಮಾನ ಪಡೆದ ಇಳಕಲ್ಲದ ಮಂಜು ನೀಲಿ, ತೃತೀಯ ಬಹುಮಾನ ಪಡೆದ ಸಂತೋಷ ಹಂಜಗಿ ಹಾಗೂ ನೆರಳು – ಬೆಳಕು ವಿಶೇಷ ಪ್ರಶಸ್ತಿಯನ್ನು ಸಂತೋಷ ಹಂಜಗಿ ಅವರಿಗೆ ನೀಡಿ ಗೌರವಿಸಲಾಯಿತು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆನಂದ ಧಲಬಂಜನ ಅಧ್ಯಕ್ಷತೆ ವಹಿಸಿದ್ದರು. ಶಂಕರ ಎಸ್. ಕಲ್ಯಾಣಿ ಸ್ವಾಗತಿಸಿದರು.ಚಂದ್ರು ಅಂಬಿಗೇರ ನಿರೂಪಿಸಿದರು. ಜಗದೀಶ ಗಾಣಿಗೇರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts