More

    ಉಚಿತ ವಿದ್ಯುತ್ ಹೆಸರಿನಲ್ಲಿ ಜನರನ್ನು ಮರುಳು ಮಾಡುತ್ತಿರುವ ಕಾಂಗ್ರೆಸ್- ಸಿಎಂ ಬೊಮ್ಮಾಯಿ ಟೀಕೆ

    ದಾವಣಗೆರೆ: ಇನ್ನೂರು ಯೂನಿಟ್‌ವರೆಗೆ ಉಚಿತ ವಿದ್ಯುತ್ ಕಲ್ಪಿಸುವ ಭರವಸೆ ಮೂಲಕ ಕಾಂಗ್ರೆಸ್ ಜನರನ್ನು ಮರುಳು ಮಾಡುವ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.

    ದಾವಣಗೆರೆಯ ಜಿಎಂಐಟಿ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ನಮ್ಮ ಸರ್ಕಾರ ಈಗಾಗಲೆ ಎಸ್ಸಿ ಎಸ್ಟಿ ಜನರಿಗೆ 75 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಯೋಜನೆ ಜಾರಿ ಮಾಡುತ್ತಿದೆ. ಕಾಂಗ್ರೆಸ್ಸಿನವರು ಕೇವಲ ಮಾತನಾಡುತ್ತಾರೆ. ನಾವು ಜಾರಿ ಮಾಡುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದರು.
    ಕಾಂಗ್ರೆಸ್ ನೀಡಿದ ಭರವಸೆಯಂತೆ ಮಾಡಲು ಆಗದು ಎಂಬುದು ಅವರಿಗೂ ಗೊತ್ತು. ಆದರೂ ಅವರು ಜನರನ್ನು ಏಮಾರಿಸುವ ಕೆಲಸ ಮಾಡುತ್ತಿದ್ದಾರೆ. ಕೇಜ್ರಿವಾಲ್ ದಾರಿಯಲ್ಲಿ ಹೋಗುತ್ತಿದ್ದಾರೆ. ಹತಾಷಗೊಂಡ ಕಾಂಗ್ರೆಸ್, ಮುಂದಿನ ಚುನಾವಣೆ ವೇಳೆಗೆ ಇನ್ನಷ್ಟು ಪ್ರಕಟಣೆಯನ್ನು ಮಾಡಬಹುದು ಎಂದು ಟೀಕಿಸಿದರು.
    ಡಿಸೆಂಬರ್‌ವರೆಗೆ ರಾಜ್ಯದಲ್ಲಿ ಕಂದಾಯದ ಎಲ್ಲ ಬಾಬತ್ತಿನಲ್ಲೂ ಗುರಿ ಮೀರಿದ ಸಂಗ್ರಹಣೆಯಾಗಿದೆ. ಆರ್ಥಿಕ ವ್ಯವಸ್ಥೆ ಅನುಗುಣವಾಗಿ ಮುಂದಿನ ಬಜೆಟ್ ಗಾತ್ರದ ತೀರ್ಮಾನದ ಬಗ್ಗೆ ಸಂಕ್ರಾಂತಿ ನಂತರದಲ್ಲಿ ಹಲವು ಸಭೆ ನಡೆಸಲಾಗುತ್ತಿದೆ. ಫೆಬ್ರವರಿ ಎರಡನೇ ವಾರದಲ್ಲಿ ಬಜೆಟ್ ಮಂಡಿಸಲಾಗುವುದು ಎಂದು ತಿಳಿಸಿದರು.
    ಕರ್ನಾಟಕ ರಾಜ್ಯದಿಂದಲೇ ಹೆಚ್ಚಿನ ಸಿದ್ಧ ಉಡುಪು ರಫ್ತಾಗುತ್ತಿದೆ. ಈ ಸ್ಥಾನವನ್ನು ಕಾಯ್ದುಕೊಳ್ಳುವ ದಿಸೆಯಲ್ಲಿ ಮುಂದಿನ ಬಜೆಟ್‌ನಲ್ಲಿ 25 ಟೆಕ್ಸ್‌ಟೈಲ್ಸ್ ಪಾರ್ಕ್ ಘೋಷಣೆ ಮಾಡುವ ಇಂಗಿತವಿದೆ. ಹತ್ತಜವಳಿ ಚಟುವಟಿಕೆ ಸರಿದೂಗಿಸುವುದು ಹಾಗೂ ಹಿಪ್ಪುನೇರಳೆಗೆೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
    ಮೀಸಲು ವಿಚಾರದಲ್ಲಿ ಸರ್ಕಾರ ಸುಳ್ಳು ಹೇಳುತ್ತಿದೆ ಎಂಬ ಬಸನಗೌಡ ಯತ್ನಾಳ್ ಹೇಳಿಕೆಗೆ ಉತ್ತರಿಸಿದ ಸಿಎಂ ‘ಮೀಸಲು ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಯತ್ನಾಳ್ ಅವರಿಗೆ ಅರ್ಥವಾಗಿಲ್ಲ ಎಂದರೆ ನಾನೇನು ಮಾಡಲಿ. ಇದರ ಬಗ್ಗೆ ಜನರು ತೀರ್ಮಾನ ಮಾಡುತ್ತಾರೆ’ ಎಂದು ಪ್ರತಿಕ್ರಿಯಿಸಿದರು.
    ಮೀಸಲು ವಿಚಾರವನ್ನು ಪರಿಶ್ಚೇದ 9ರ ವ್ಯಾಪ್ತಿಗೆ ಸೇರ್ಪಡೆಗೊಳಿಸುವ ಸಂಬಂಧ ಕೇಂದ್ರದೊಂದಿಗೆ ಚರ್ಚಿಸಲಾಗಿದ್ದು, ಅಗತ್ಯ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
    ಬಿಜೆಪಿ ಹೆಚ್ಚಿನ ಸೀಟು ಪಡೆಯುವುದಿಲ್ಲ ಎಂಬ ಯೋಗೇಶ್ವರ್ ಆಡಿಯೋ ಹೇಳಿಕೆ ನೀಡಿದ್ದಾರಲ್ಲ ಎಂಬ ಪ್ರಶ್ನೆಗೆ ಯಾವುದೇ ಆಡಿಯೋ ವಿಡಿಯೋಗಳ ಬಗ್ಗೆ ಉತ್ತರ ನೀಡುವುದಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts