More

    ಉಚಿತ ಭಾಗ್ಯಗಳನ್ನು ಸ್ಥಗಿತಗೊಳಿಸಿ


    ಸರ್ಕಾರಕ್ಕೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಸಲಹೆ


    ಅರಸೀಕೆರೆ: ದುಡಿಯುವ ಕೈಗಳಿಗೆ ಕೆಲಸ ನೀಡುವುದರ ಜತೆಗೆ ಉಚಿತ ಭಾಗ್ಯಗಳನ್ನು ಸರ್ಕಾರ ಕೂಡಲೇ ಸ್ಥಗಿತಗೊಳಿಸಬೇಕು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.


    ನಗರದ ಕಸ್ತೂರ ಬಾ ಸೇವಾಶ್ರಮ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮನ್ನಾಳುವ ಸರ್ಕಾರಗಳು ಉಚಿತ ಭಾಗ್ಯಗಳನ್ನು ನೀಡುತ್ತಿರುವ ಪರಿಣಾಮ ದುಡಿಯವ ವರ್ಗದವರ ಸಂಖ್ಯೆ ಕ್ಷೀಣಿಸುತ್ತಿದೆ. ಇಂತಹ ಧೋರಣೆಯಿಂದ ಹೊರ ಬಂದು ಉದ್ಯೋಗಾವಕಾಶಗಳ ಸೃಷ್ಟಿಗೆ ಉತ್ತೇಜನ ನೀಡುವತ್ತ ಕೇಂದ್ರ ಹಾಗೂ ರಾಜ್ಯ ಸರ್ಕಾರ ಆಲೋಚನೆ ನಡೆಸಬೇಕಿದೆ ಎಂದರು.


    ಮದ್ಯ ಮಾರಾಟ ಆದಾಯದಿಂದ ದೇಶ ಮುನ್ನಡೆಸುತ್ತೇವೆ ಎಂಬ ಭ್ರಮೆಯಿಂದ ಹೊರಬರಬೇಕು. ಆರೋಗ್ಯಕರ ಸಮಾಜ ನಿರ್ಮಾಣವಾಗಬೇಕಾದರೆ ಮೊದಲು ಮದ್ಯಪಾನ ನಿಷೇಧ ಮಾಡಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ದೇಶದ ಭವಿಷ್ಯಕ್ಕೆ ಧಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.


    ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿವಿಟಿ ಬಸವರಾಜು ಮಾತನಾಡಿ, ದೇಶದ ದಾಸ್ಯ ವಿಮೋಚನೆಗೆ ಮಹಾತ್ಮಾ ಗಾಂಧಿ ಸಂಘಟಿತ ಹೋರಾಟ ನಡೆಸಿದರೆ, ಪ್ರಧಾನಿಯಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಸೈನಿಕ ಹಾಗೂ ಅನ್ನದಾತನ ಬಗೆಗೆ ವಿಶೇಷ ಕಾಳಜಿ ವಹಿಸಿದ್ದರು ಎಂದರು.


    ನಗರಸಭೆ ಸದಸ್ಯ ಸಿ.ಗಿರೀಶ್ ಮಾತನಾಡಿ, ಉಭಯ ಮಹನೀಯರ ತತ್ವ, ಚಿಂತನೆ, ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಗೌರವ ನೀಡೋಣ ಎಂದರು.
    ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕಾಟೀಕೆರೆ ಪ್ರಸನ್ನಕುಮಾರ್, ತಹಸೀಲ್ದಾರ್ ವಿಭಾ ವಿ ರಾಥೋಡ್, ಆರ್.ಅನಂತಕು ಮಾರ್, ಆಶ್ರಮದ ಉಸ್ತುವಾರಿ ಉಷಾ ಅಬ್ರಾಲ್ ಮಾತನಾಡಿದರು. ಇದಕ್ಕೂ ಮುನ್ನ ಗಾಂಧಿ ಚಿತಾ ಭಸ್ಮಕ್ಕೆ ಗಣ್ಯರು ಗೌರವ ಸಲ್ಲಿಸಿದರು. ವಿವಿಧ ಇಲಾಖೆ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ಕನ್ನಡ ಸಾಹಿತ್ಯ ಪರಿಷತ್ ಹಾಗೂ ರೈತ ಸಂಘದ ಮುಖಂಡರ ವತಿಯಿಂದ ಉಭಯ ಮಹನೀಯರ ಜಯಂತಿಯನ್ನು ಸರಳವಾಗಿ ಆಚರಿಸಿ ಗೌರವ ಸಮರ್ಪಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts