More

    ಉಚಿತ ಆರೋಗ್ಯ ಸೇವೆ ಒದಗಿಸುವ ನಮ್ಮ ಕ್ಲಿನಿಕ್

    ಚಿಕ್ಕಮಗಳೂರು: ನಗರ ಪ್ರದೇಶದ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲಕ ರಾಜ್ಯ ಸರ್ಕಾರ ಯೋಜನೆ ರೂಪಿಸಿ ನಮ್ಮ ಕ್ಲಿನಿಕ್ ಉಚಿತ ಆರೋಗ್ಯ ಸೇವೆ ಆರಂಭಿಸಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹೇಳಿದರು.

    ನರಿಗುಡ್ಡನಹಳ್ಳಿ ವೃತ್ತದ ಎಂಎಲ್​ಎಂಎನ್ ಕಾಲೇಜು ಎದುರು ಬುಧವಾರ ನಮ್ಮ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದ ಅವರು, ಜನರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸಲು ಸರ್ಕಾರ ಮುಂದಾಗಿದ್ದು, ಜಿಲ್ಲಾ ಅಥವಾ ತಾಲೂಕು ಕೇಂದ್ರಗಳಿಂದ ಆಸ್ಪತ್ರೆಗಳು ಬಹಳಷ್ಟು ದೂರವಿದ್ದಾಗ ತಕ್ಷಣ ಚಿಕಿತ್ಸೆ ನೀಡಲು ಚಿಕ್ಕಮಗಳೂರು ಸೇರಿದಂತೆ ಜಿಲ್ಲೆಯ ಕಡೂರು, ತರೀಕೆರೆ, ಬೀರೂರಲ್ಲಿ ನಮ್ಮ ಕ್ಲಿನಿಕ್ ಆರಂಭಿಸಲಾಗಿದೆ ಎಂದರು.

    ಜಿಪಂ ಸಿಇಓ ಜಿ.ಪ್ರಭು ಮಾತನಾಡಿ, ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶದ ಜನರಿಗೆ ಇಂದು ಹರ್ಷದ ದಿನ. ಆರೋಗ್ಯ ಸೇವೆಗಳ ಗುಣಮಟ್ಟ ಕಾಯ್ದಿರಿಸಿಕೊಂಡು ಉತ್ತಮ ಸೇವೆ ಕಲ್ಪಿಸುವ ದೃಷ್ಟಿಯಿಂದ 4 ಕಡೆ ನಮ್ಮ ಕ್ಲಿನಿಕ್ ಆರಂಭಿಸಲಾಗಿದೆ. ಜನ ಸಾಮಾನ್ಯರಿಗೆ 12 ಸೇವೆಗಳು ದೊರೆಯಲಿದ್ದು 14 ರೀತಿಯ ವಿವಿಧ ಪ್ರಯೋಗ ಶಾಲಾ ಪರೀಕ್ಷೆಗಳಿಂದ ತಪಾಸಣೆ ಮಾಡಲಾಗುತ್ತದೆ. ಓರ್ವ ವೈದ್ಯ ಸೇರಿದಂತೆ 3 ಸಿಬ್ಬಂದಿ ಉಚಿತ ತಪಾಸಣೆ ಮಾಡಿ ಔಷಧಿ ವಿತರಿಸಲಿದ್ದಾರೆ ಎಂದು ಹೇಳಿದರು.

    ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಯೋಜನೆ ರೂಪಿಸಿದ್ದಾರೆ. ಇಲ್ಲಿನ ವೈದ್ಯರು ಹಾಗೂ ಸಿಬ್ಬಂದಿಗಳು ನಾಗರಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ರಾಜ್ಯದಲ್ಲಿ 438 ನಮ್ಮ ಕ್ಲಿನಿಕ್ ಸ್ಥಾಪನೆಗೆ ಸಿದ್ಧತೆ ನಡೆಸಿದ್ದು, ಇಂದು 144 ಕ್ಲಿನಿಕ್​ಗೆ ಚಾಲನೆ ನೀಡಲಾಗಿದೆ. ಜಿಲ್ಲೆಯಲ್ಲೂ 4 ಕ್ಲಿನಿಕ್ ತೆರೆಯಲಾಗಿದೆ ಎಂದರು.

    ನಗರಸಭೆ ಉಪಾಧ್ಯಕ್ಷೆ ಉಮಾದೇವಿ ಕೃಷ್ಣಪ್ಪ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವಥ್ ಬಾಬು, ಜಿಲ್ಲಾ ಸರ್ಜನ್ ಡಾ.ಮೋಹನ್​ಕುಮಾರ್, ಡಾ.ಮಂಜುನಾಥ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಗೀತಾ, ಡಾ.ಚಂದ್ರಶೇಖರ ಸಾಲಿಮಠ್, ತಾಲೂಕು ವೈದ್ಯಾಧಿಕಾರಿ ಡಾ.ಸೀಮಾ, ಗಂಗಾಧರ್, ಮಲ್ಲಿಕಾರ್ಜುನ್, ಡಾ.ಹರೀಶ್​ಬಾಬು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts