More

    ಈ ಬಾರಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ : ಮಾಜಿ ಸಚಿವ ಸೀತಾರಾಮ್ ವಿಶ್ವಾಸ

    ಚಾಮರಾಜನಗರ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದ್ದು, ಶಾಸಕ ಆರ್.ನರೇಂದ್ರ ಸಚಿವರಾಗಲಿದ್ದಾರೆ. ಹಾಗಾಗಿ ಅವರನ್ನು 20 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕಿದೆ. ಆದ್ದರಿಂದ ಸಮುದಾಯದ ಪ್ರತಿಯೊಬ್ಬರೂ ಕಾಂಗ್ರೆಸ್‌ಗೆ ಮತ ನೀಡಬೇಕು ಎಂದು ಮಾಜಿ ಸಚಿವ ಸೀತಾರಾಮ್ ಮನವಿ ಮಾಡಿದರು.


    ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲೇಮಾಳ ಹಾಗೂ ಶೆಟ್ಟಳ್ಳಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಶಾಸಕ ಆರ್.ನರೇಂದ್ರ ಪರ ಮತಯಾಚಿಸಿ ಮಾತನಾಡಿದರು.


    ದಿವಂಗತ ರಾಜೂಗೌಡ ಅವರ ಮನೆತನ ಜನರೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದು, 9 ಬಾರಿ ಜಯ ಗಳಿಸಿ ಕ್ಷೇತ್ರದ ಅಭಿವೃದ್ಧಿಗೆ ಉತ್ತಮ ಸೇವೆ ಸಲ್ಲಿಸಿದೆ. ಈ ದಿಸೆಯಲ್ಲಿ ಶಾಸಕ ಆರ್.ನರೇಂದ್ರ ಅವರು ಇದೇ ಧಾಟಿಯಲ್ಲಿ ಸಾಗುತ್ತಿದ್ದು, ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದಾರೆ. ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದು, ನೇರ ರಾಜಕಾರಣಿಯಾಗಿದ್ದಾರೆ.

    ಕ್ಷೇತ್ರದ ಅಭಿವೃದ್ಧಿಯಾಗಿರುವುದಕ್ಕೆ ಸತತ 3 ಬಾರಿ ಶಾಸಕರಾಗಿರುವುದೇ ಸಾಕ್ಷಿ. ಕಳೆದ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಹೆಚ್ಚಿನ ಅನುದಾನ ತಂದು ಅನೇಕ ಶಾಶ್ವತ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಯಾವುದೇ ಕ್ಷೇತ್ರದಲ್ಲಿ ಒಂದೇ ಅವಧಿಯಲ್ಲಿ 50ಕ್ಕೂ ಹೆಚ್ಚು ಸಮುದಾಯ ಭವನಗಳನ್ನು ನಿರ್ಮಿಸಿರುವುದನ್ನು ಕಂಡಿಲ್ಲ. ಆದರೆ ಈ ಕ್ಷೇತ್ರದಲ್ಲಿ 215 ಸಮುದಾಯ ಭವನಗಳನ್ನು ನಿರ್ಮಿಸಿರುವುದು ನರೇಂದ್ರ ಅವರ ಕಾರ್ಯವೈಖರಿ ಹಾಗೂ ಅಭಿವೃದ್ಧಿಗೆ ಅವರು ನೀಡಿರುವ ಪ್ರಾಮುಖ್ಯತೆ ಎಷ್ಟೆಂಬುದನ್ನು ತೋರಿಸುತ್ತದೆ ಎಂದರು.


    ನರೇಂದ್ರ ಅವರು ರಾಜಕೀಯಕ್ಕಷ್ಟೆ ಸೀಮಿತವಾಗದೆ ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಹಾಗೂ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಶೆಟ್ಟಳ್ಳಿಯಲ್ಲಿ 60 ಲಕ್ಷ ರೂ. ವೆಚ್ಚದ ಹಾಗೂ ಎಲ್ಲೇಮಾಳದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಬಲಿಜ ಸಮುದಾಯ ಭವನ ನಿರ್ಮಿಸಲಾಗಿದೆ.

    ಜತೆಗೆ ಕಳೆದ ಬಾರಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕ್ಷೇತ್ರದಲ್ಲಿ ಕೆ-ಶಿಪ್ ಯೋಜನೆಯಡಿ ರಸ್ತೆ ಅಭಿವೃದ್ಧಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನ. ಸಮುದಾಯ ಭವನಗಳ ನಿರ್ಮಾಣ, ಶಾಲಾ, ಕಾಲೇಜು ಹಾಗೂ ಹಾಸ್ಟೆಲ್‌ಗಳ ಸ್ಥಾಪನೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ.

    ಹಾಗಾಗಿ ಅಭಿವೃದ್ಧಿಯ ಹೆಸರಿನಲ್ಲಿ ಮತ ಕೇಳುತ್ತಿದ್ದೇನೆ. ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದರ ಮೂಲಕ ಮತ್ತೊಮ್ಮೆ ಸೇವೆ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದರು.


    ಅರಗು ಮತ್ತು ಬಣ್ಣದ ಕಾರ್ಖಾನೆ ಮಾಜಿ ಅಧ್ಯಕ್ಷ ವೆಂಕಟೇಶ್, ತಾಲೂಕು ಬಣಜಿಗ ಸಂಘದ ಗೌರವಾಧ್ಯಕ್ಷ ಗೋಪಾಲಕೃಷ್ಣ, ತಮಿಳುನಾಡಿನ ಊಟಿ ಶಾಸಕ ಗಣೇಶ್, ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಜಯರಾಮ್, ಪಪಂ ಉಪಾಧ್ಯಕ್ಷ ಗಿರೀಶ್, ಗ್ರಾಪಂ ಮಾಜಿ ಅಧ್ಯಕ್ಷ ಟಿ.ಮಹದೇವ, ರಾಜ್ಯ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಚೇತನ್, ಮುಖಂಡರಾದ ವಿಷ್ಣುಕುಮಾರ್, ನಿಂಗಶೆಟ್ಟಿ, ನಾಗೇಂದ್ರ, ಕೃಷ್ಣಪ್ಪ, ಎಸ್.ಮಹೇಶ್, ಕೆಂಪಣ್ಣ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts