More

    ಇಸ್ರೇಲ್ ಮಾದರಿಯಲ್ಲಿ ಕಲ್ಲಂಗಡಿ ಬೆಳೆ

    ಸುಭಾಸ ಧೂಪದಹೊಂಡ ಕಾರವಾರ

    ಇಸ್ರೇಲ್ ಮಾದರಿಯ ಕೃಷಿ ಕಾರವಾರದಲ್ಲಿ ಕ್ರಾಂತಿ ಮಾಡುತ್ತಿದೆ. ಪ್ಲಾಸ್ಟಿಕ್ ಮುಚ್ಚಿಗೆ ಮಾಡಿ ಕಲ್ಲಂಗಡಿ ಬೆಳೆಯುವ ಪದ್ಧತಿ ಕಳೆದ ಎರಡು ವರ್ಷಗಳಿಂದ ತಾಲೂಕಿನಲ್ಲಿ ಪ್ರಚಲಿತವಾಗಿದ್ದು, ಈ ಅವಧಿಯಲ್ಲಿ ತಾಲೂಕಿನಲ್ಲಿ ಸುಮಾರು 200 ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಿಸಿದೆ.

    ಮೊದಲಿನಿಂದಲೂ ಎರಡನೇ ಬೆಳೆಯಾಗಿ ಕಾರವಾರದ ಕೆಲವೆಡೆ ಕಲ್ಲಂಗಡಿ ಬೆಳೆಯಲಾಗುತ್ತಿತ್ತು. ಆದರೆ, ಕಾರ್ವಿುಕರ ಕೊರತೆ, ಬೆಲೆಯ ಅಸ್ಥಿರತೆಯಿಂದ ಹಲವರು ಬೆಳೆಯುವುದನ್ನು ಬಿಟ್ಟಿದ್ದರು. ಜಮೀನುಗಳು ಪಾಳು ಬಿದ್ದಿದ್ದವು. ಆದರೆ, ಈ ಹೊಸ ಪದ್ಧತಿ ಪ್ರಸಿದ್ಧವಾಗುತ್ತಿದ್ದಂತೆ ತಾಲೂಕಿನ ಮುಡಗೇರಿ, ಉಳಗಾ, ಭೈರೆ ಭಾಗದಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ರೈತರು ಬೆಳೆಯಲಾರಂಭಿಸಿದ್ದು, ಬೇರೆಯವರ ಗದ್ದೆಯನ್ನು ಹಲವರು ಗೇಣಿಗೆ ಪಡೆದು ಕೃಷಿ ಆರಂಭಿಸಿದ್ದಾರೆ. ಕಾರವಾರದಿಂದಲೇ ಕಳೆದ ವರ್ಷ 2 ಸಾವಿರ ಟನ್​ಗೂ ಅಧಿಕ ಕಲ್ಲಂಗಡಿ ಹೊರ ರಾಜ್ಯಗಳಿಗೆ ರವಾನೆಯಾಗಿದೆ. ಈ ವರ್ಷ ಬೆಳೆಯ ಪ್ರದೇಶ ಗಣನೀಯವಾಗಿ ಹೆಚ್ಚಿದ್ದರಿಂದ ಮತ್ತಷ್ಟು ಇಳುವರಿಯ ನಿರೀಕ್ಷೆ ಇದೆ.

    ಏನಿದು ಇಸ್ರೇಲಿ ತಂತ್ರಜ್ಞಾನ?: ಗದ್ದೆಯನ್ನು ಹಸನು ಮಾಡಿದ ನಂತರ ಸಗಣಿ ಗೊಬ್ಬರ ಹಾಕಿ, ಸಸಿ ಮಡಿ ಸಿದ್ಧ ಮಾಡಲಾಗುತ್ತದೆ. ಇದರಲ್ಲಿ ಪ್ರತಿ ಒಂದು ಅಡಿಗೆ ಒಂದರಂತೆ ಹನಿ ನೀರಾವರಿ ಪೈಪ್ ಅಳವಡಿಸಲಾಗುತ್ತದೆ. ಬೀಜ ಹಾಕಿದ ನಂತರ ಮೇಲಿಂದ ಪ್ಲಾಸ್ಟಿಕ್ ಹಾಳೆಯೊಂದನ್ನು ಸಸಿ ಮಡಿಗೆ ಮುಚ್ಚಿ, ಗಿಡ ಬೆಳೆಯುವಷ್ಟೇ ಜಾಗದಲ್ಲಿ 3 ರಿಂದ 4 ಸೆಂಮೀ ಗಾತ್ರದ ರಂಧ್ರ ಮಾಡಲಾಗುತ್ತದೆ. ನಂತರ ಎರಡು ದಿನಕ್ಕೊಮ್ಮೆ ಅರ್ಧದಿಂದ ಮುಕ್ಕಾಲು ಗಂಟೆ ನೀರು ಬಿಟ್ಟರೆ ಸಾಕು. ಎರಡು ತಿಂಗಳಲ್ಲಿ 5 ರಿಂದ 10 ಕೆಜಿ ಗಾತ್ರದ ಕಲ್ಲಂಗಡಿ ಹಣ್ಣುಗಳು ಸಿದ್ಧವಾಗುತ್ತವೆ.

    ತಿಂಗಳಲ್ಲಿ ಎರಡು ಬಾರಿ ಗೊಬ್ಬರವನ್ನು ಹನಿ ನೀರಾವರಿ ಮೂಲಕವೇ ನೀಡಲಾಗುತ್ತದೆ. ಈ ಪದ್ಧತಿ ಯಿಂದ ನೀರು ಕಡಿಮೆ ಸಾಕಾಗುತ್ತದೆ. ಕಳೆ ಬಾರದು. ಹನಿ ನೀರಾವರಿಯ ಮೂಲಕವೇ ಗೊಬ್ಬರ ನೀಡುವುದರಿಂದ ಕಾರ್ವಿುಕರ ವೆಚ್ಚವೂ ಕಡಿಮೆಯಾಗುತ್ತದೆ. ರೋಗವೂ ಕಡಿಮೆ ಎಂಬುದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಬೆಳೆಗಾರರ ಅಭಿಪ್ರಾಯ. ಸದ್ಯ ಹನಿ ನೀರಾವರಿ ಪದ್ಧತಿಗೆ ಶೇ. 90ರಷ್ಟು ಸಹಾಯಧನವಿದೆ. ಪ್ಲಾಸ್ಟಿಕ್ ಮುಚ್ಚಿಗೆಗೆ ಶೇ. 50ರಷ್ಟು, ಅಂದರೆ ಹೆಕ್ಟೇರ್​ಗೆ ಗರಿಷ್ಠ 16 ಸಾವಿರ ರೂ.ವರೆಗೆ ಸಹಾಯಧನವಿದೆ.

    ಕೇರಳ, ತಮಿಳುನಾಡಲ್ಲಿ ಮಾರುಕಟ್ಟೆ: ಇಲ್ಲಿನ ಕಲ್ಲಂಗಡಿಗೆ ಕೇರಳ, ತಮಿಳುನಾಡು, ಬೆಂಗಳೂರು ಭಾಗದಲ್ಲಿ ಬೆಲೆ ಇದೆ. 3 ಕೆಜಿ ಮೇಲೆ ಬೆಳೆದ ಕಲ್ಲಂಗಡಿಯನ್ನು ಎ ಗ್ರೇಡ್ ಎಂದು ಪರಿಗಣಿಸಿ ಒಂದು ಬೆಲೆ ನೀಡಿದರೆ, ಅದಕ್ಕಿಂತ ಕಡಿಮೆ ಇರುವ ಹಣ್ಣುಗಳಿಗೆ ಕಡಿಮೆ ಬೆಲೆ ಸಿಗುತ್ತದೆ.

    ಕಾಳಜಿಯಿಂದ ನೋಡಿಕೊಂಡರೆ ಯಾವ ನಷ್ಟವಿಲ್ಲ: ಮುಡಗೇರಿಯ ಅನಿಲ ದೇಸಾಯಿ ಅವರ 5 ಎಕರೆ ಜಮೀನನ್ನು ಕಳೆದ ಹಲವು ವರ್ಷಗಳಿಂದ ಪಾಳು ಬಿಟ್ಟಿದ್ದರು. ಗೋವಾದಲ್ಲಿ ಉದ್ಯಮ ಮಾಡಿಕೊಂಡಿದ್ದರು. ಐದು ವರ್ಷದ ಹಿಂದೆ ಕೃಷಿಯ ಬಗ್ಗೆ ಆಸಕ್ತಿ ಮೂಡಿ ಕಲ್ಲಂಗಡಿ ಬೆಳೆ ಪ್ರಾರಂಭಿಸಿದರು. ನಾಲ್ಕು ವರ್ಷದಿಂದ ಇಸ್ರೇಲಿ ತಂತ್ರಜ್ಞಾನದಲ್ಲಿ ವರ್ಷಕ್ಕೆರಡು ಕಲ್ಲಂಗಡಿ ಬೆಳೆ ತೆಗೆಯುತ್ತಿದ್ದಾರೆ. ಐದು ಎಕರೆಗೆ ಒಮ್ಮೆಗೆ ಮೂರ್ನಾಲ್ಕು ಲಕ್ಷ ರೂಪಾಯಿಯ ಹೂಡಿಕೆ ಬೇಕು. ಆದರೆ, ಕಾಳಜಿಯಿಂದ ನೋಡಿಕೊಂಡರೆ ಯಾವುದೇ ನಷ್ಟವಿಲ್ಲ ಎಂಬುದು ಅವರ ಅನುಭವ.

    ಬಿಸಿಲು ಜಾಸ್ತಿ ಬಿದ್ದಂತೆ ಕಲ್ಲಂಗಡಿ ಹೆಚ್ಚು ಸಿಹಿಯಾಗುತ್ತದೆ. ಕಾರವಾರದಲ್ಲಿ ಹೆಚ್ಚು ರಾಸಾಯನಿಕ ಉಪಯೋಗಿಸದೇ ಸಾವಯವ ಮಾದರಿಯಲ್ಲಿ ಬೆಳೆಯುವ ಉತ್ತಮ ಗುಣಮಟ್ಟದ ಕಲ್ಲಂಗಡಿ ಸಿಗುತ್ತದೆ. ಇದರಿಂದ ನಾನು ಇಲ್ಲಿನ ಹಲವು ರೈತರಿಂದ ಖರೀದಿಸಿ ಹೊರ ರಾಜ್ಯಕ್ಕೆ ಮಾರುತ್ತೇನೆ. | ಎಸ್.ಸಿ.ಹಿರೇಮಠ (ಸ್ವಾಮಿ) ಕಲ್ಲಂಗಡಿ ಖರೀದಿದಾರ

    ಕಲ್ಲಂಗಡಿ ಕೇವಲ 2 ತಿಂಗಳ ಬೆಳೆ. ಹನಿ ಬೀಳದ ಹೆಚ್ಚು ಸೆಕೆ ಇರುವ ತಂಪನೆಯ ರಾತ್ರಿ ಇರುವ ಕಾರವಾರ ಭಾಗದ ವಾತಾವರಣ ಈ ಬೆಳೆಗೆ ಸೂಕ್ತ. ಸರ್ಕಾರದಿಂದ ಸಬ್ಸಿಡಿಯೂ ಇದೆ. ಇದರಿಂದ ಈಗ ಸಾಂಪ್ರದಾಯಿಕ ಪದ್ಧತಿ ಬಿಟ್ಟು ಹೊಸ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳುತ್ತಿದ್ದಾರೆ. | ದಯಾನಂದ ಸಹಾಯಕ ತೋಟಗಾರಿಕೆ

    ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts