More

    ಇನ್ನೂ ನನಸಾಗಿಲ್ಲ ಸ್ವಂತ ಸೂರಿನ ಭಾಗ್ಯ!

    ಹೊಳೆಆಲೂರ: ಕಳೆದ ವರ್ಷ ಆಗಸ್ಟ್​ನಲ್ಲಿ ಉಂಟಾದ ಭೀಕರ ಮಲಪ್ರಭಾ ಪ್ರವಾಹದಿಂದ ಮನೆ ಕಳೆದುಕೊಂಡು ನಿರಾಶ್ರಿತರಾದ ಹೋಬಳಿ ವ್ಯಾಪ್ತಿಯ ಸಂತ್ರಸ್ತರ ಸ್ವಂತ ಸೂರಿನ ಕನಸು ಇದುವರೆಗೂ ನನಸಾಗಿಲ್ಲ.

    ಮಲಪ್ರಭಾ ಪ್ರವಾಹದಿಂದ ನರಗುಂದ ಮತಕ್ಷೇತ್ರದ 17 ಗ್ರಾಮಗಳ ಜನರು ಸರ್ವಸ್ವವನ್ನು ಕಳೆದುಕೊಂಡು ನಿರ್ಗತಿಕರಾಗಿದ್ದರು. ಆಗ ಮನೆ ಕಳೆದುಕೊಂಡವರಿಗೆ ಸರ್ಕಾರ ಕರುಣೆ ತೋರಿ ಐದು ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ವಿುಸಿಕೊಳ್ಳಲು ಆದೇಶ ನೀಡಿತು. ಆದರೆ, ಅದು ಒಂದಿಲ್ಲೊಂದು ಗೊಂದಲದಿಂದ ವಿಳಂಬವಾಗುತ್ತಲೇ ಇದೆ.

    ಗ್ರಾ.ಪಂ., ಕಂದಾಯ ಇಲಾಖೆ, ತಾ.ಪಂ. ಹಾಗೂ ಜಿಲ್ಲಾ ಪಂಚಾಯಿತಿಯ ಸಹಯೋಗದಲ್ಲಿ ಹತ್ತು ಹಲವು ಸರ್ವೆ ನಂತರ ಹೊಳೆಆಲೂರಿನಲ್ಲಿ 274 ಮನೆ ನಿರ್ವಿುಸಿಕೊಳ್ಳಲು ಜಿಲ್ಲಾಡಳಿತ ಮಂಜೂರಾತಿ ನೀಡಿತ್ತು. ಆದರೆ, ತಾಲೂಕು ಆಡಳಿತದ ನಿಧಾನ ಗತಿಯ ಧೋರಣೆಯಿಂದಾಗಿ ಕೇವಲ 140 ಮನೆ ನಿರ್ಮಾಣ ಕಾಮಗಾರಿ ಮಾತ್ರ ಪ್ರಗತಿಯಲ್ಲಿದ್ದು ಇನ್ನುಳಿದ 134 ನಿರಾಶ್ರಿತರು ತಾಂತ್ರಿಕ ಸಮಸ್ಯೆಯಿಂದ ಹೈರಾಣಾಗುತ್ತಿದ್ದಾರೆ.

    ಪ್ರವಾಹದ ನಂತರ ಜಿಲ್ಲಾಧಿಕಾರಿಗಳು ಈ ಭಾಗದಲ್ಲಿ ಚುರುಕಿನ ಸಂಚಾರ ಮಾಡಿ ಶೀಘ್ರವೇ ಫಲಾನುಭವಿಗಳು ಮನೆ ನಿರ್ವಿುಸಿಕೊಳ್ಳುವಂತೆ ಸೂಚಿಸಿದ್ದರು. ಸರ್ಕಾರದ ಸಹಾಯ ಧನವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸ್ವಂತ ಜಾಗವಿದ್ದವರು ಸರ್ಕಾರದ ಅನುದಾನದಲ್ಲಿ ಮನೆ ನಿರ್ವಿುಸಿಕೊಳ್ಳಬೇಕು ಎಂದು ತಿಳಿಸಿದ್ದರು. ಹೀಗಾಗಿ 20 ಫಲಾನುಭವಿಗಳು ತಮ್ಮ ಜಾಗದಲ್ಲಿ ಮನೆ ಕಟ್ಟಿಸಿಕೊಳ್ಳುತ್ತಿದ್ದು ಮೊದಲ ಹಂತದ ಬಿಲ್​ಗಾಗಿ ಕಾಯುತ್ತಿದ್ದಾರೆ. ಈ ಪೈಕಿ ಇದುವರೆಗೆ 4 ಜನರನ್ನು ಹೊರತುಪಡಿಸಿ ಇನ್ನುಳಿದವರಿಗೆ ನೈಯಾಪೖಸೆ ಜಮೆಯಾಗಿಲ್ಲ.

    ಇನ್ನು ಅಧಿಕಾರಿಗಳು ಫಲಾನುಭವಿಗಳಿಂದ ಎಲ್ಲ ದಾಖಲೆ ಪಡೆದುಕೊಂಡು ಕಂಪ್ಯೂಟರ್​ಗೆ ಎಂಟ್ರಿ ಮಾಡಿಕೊಳ್ಳುವಾಗ ತಾವೇ ತಪ್ಪು ಮಾಡಿದ್ದಾರೆ. ಒಂದೇ ಖಾತೆಗೆ ಇಬ್ಬರ ಹೆಸರು ಅಥವಾ ಗಂಡನ ಹೆಸರಿನ ಜಾಗದಲ್ಲಿ ತಂದೆಯ ಹೆಸರು ಎಂಟ್ರಿ ಮಾಡಿದ್ದಾರೆ. ಹೀಗಾಗಿ ತಾಂತ್ರಿಕ ಸಮಸ್ಯೆಯಿಂದ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗುತ್ತಿಲ್ಲ. ಅದನ್ನು ಸರಿಪಡಿಸಬೇಕಾದವರು ಅಸಡ್ಡೆ ತೋರುತ್ತಿದ್ದಾರೆ. 120 ಪಲಾನುಭವಿಗಳ ಮನೆ ಜಿಪಿಎಸ್ ಮಾಡಿಕೊಂಡು ಹೋದರೂ ಇದುವರಿಗೆ ಹಣ ಜಮೆಯಾಗಿಲ್ಲ. ಅರ್ಧಕ್ಕೆ ಮನೆ ಕಟ್ಟಿಸಿಕೊಂಡು ಕಂತಿನ ಹಣಕ್ಕಾಗಿ ಕಾಯುತ್ತಿರುವ ಕೆಲ ನಿರಾಶ್ರಿತರು ಕಚೇರಿಗೆ ಅಲೆದಾಡುತ್ತಿದ್ದರೂ ಅವರಿಗೆ ತಾಲೂಕು ಆಡಳಿತ ಸ್ಪಂದಿಸುತ್ತಿಲ್ಲ.

    ಒಂದೆಡೆ ಮನೆ ಇಲ್ಲದೆ ಅತಂತ್ರ ಬದುಕು, ಇನ್ನೊಂದೆಡೆ ಕರೊನಾದಿಂದಾಗಿ ಕಂಗಾಲಾಗಿ ಮಳೆಗಾಲ ಸಮೀಪಿಸುತ್ತಿದ್ದರೂ ಬದುಕು ಅತಂತ್ರವಾಗಿರುವುದರಿಂದ ನಿರಾಶ್ರಿತರು ದಿಕ್ಕು ತೋಚದೆ ಕಂಗಾಲಾಗಿದ್ದಾರೆ. ಶೀಘ್ರವೇ ಸಮಸ್ಯೆ ಪರಿಹರಿಸದಿದ್ದರೆ ಜಿಲ್ಲಾಧಿಕಾರಿ ಕಾರ್ಯಾಲಯದ ಮುಂದೆ ಧರಣಿ ನಡೆಸುತ್ತೇವೆ ಎನ್ನುತ್ತಿದ್ದಾರೆ ನಿರಾಶ್ರಿತರು.

    ಮಲಪ್ರಭಾ ರುದ್ರ ನರ್ತನಕ್ಕೆ ನನ್ನ ಮನೆ ಸಂಪೂರ್ಣ ನೆಲ ಕಚ್ಚಿದೆ. ಜಿಲ್ಲಾಧಿಕಾರಿಯವರು ಸ್ವತಃ ನನ್ನ ಮನೆಗೆ ಭೇಟಿ ನೀಡಿ ಮನೆ ಕಟ್ಟಿಸಿಕೊಳ್ಳಲು ತಕ್ಷಣ ಅನುಮತಿ ನೀಡಿದರು. ಆದರೆ, ತಾಲೂಕು ಆಡಳಿತ ತಾಂತ್ರಿಕ ಸಮಸ್ಯೆಯ ನೆಪವೊಡ್ಡಿ ಇದುವರೆಗೂ ನನಗೆ ನಯಾ ಪೈಸೆಯನ್ನೂ ನೀಡಿಲ್ಲ. ಹತ್ತಾರು ಬಾರಿ ತಹಸೀಲ್ದಾರ್ ಅವರನ್ನು ಭೇಟಿಯಾದರೂ ಪರಿಹಾರ ಸಿಕ್ಕಿಲ್ಲ.
    | ಶಂಕ್ರಪ್ಪ ಹುಚ್ಚಪ್ಪ ಗಂಗೂರ, ನಿರಾಶ್ರಿತರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts