More

    ಇನ್ನೂ ನಗರ ಸಂಚಾರದ ಹುಚ್ಚು ಬಿಟ್ಟಿಲ್ಲ

    ಹುಬ್ಬಳ್ಳಿ: ಕರೊನಾ ಸೋಂಕು ಪಟ್ಟಿಯಲ್ಲಿ ಧಾರವಾಡ ಜಿಲ್ಲೆಯನ್ನು ಕೇಂದ್ರ ಸರ್ಕಾರ ಹಾಟ್​ಸ್ಪಾಟ್ ಎಂದು ಘೊಷಿಸಿದ್ದರೂ ನಗರದಲ್ಲಿ ಅನಗತ್ಯ ಸಂಚರಿಸುವವರ ಸಂಖ್ಯೆ ಕಡಿಮೆಯಾಗಿಲ್ಲ.

    ಗುರುವಾರ ಬೆಳಗ್ಗೆಯಿಂದಲೇ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್, ಕಾರು ಹಾಗೂ ಆಟೋಗಳ ಸಂಚಾರ ಸಾಮಾನ್ಯವಾಗಿತ್ತು.

    ಪ್ರಮುಖ ರಸ್ತೆಗಳನ್ನು ಸೇರುವ ಒಳ ರಸ್ತೆಗಳಿಗೆ ಅಡ್ಡವಾಗಿ ಪೊಲೀಸರು ಬ್ಯಾರಿಕೇಡ್ ಕಟ್ಟಿದ್ದರೂ ಒಳ ರಸ್ತೆಗಳನ್ನು ಹುಡುಕಿಕೊಂಡು ಬೈಕ್ ಸವಾರರು ಪ್ರಮುಖ ರಸ್ತೆಗಳಲ್ಲಿ ಓಡಾಡುತ್ತಿದ್ದರು.

    ಚನ್ನಮ್ಮ ವೃತ್ತ, ಸ್ಟೇಷನ್ ರಸ್ತೆ, ಲ್ಯಾಮಿಂಗ್ಟನ್ ರಸ್ತೆ, ಸವೋದಯ ವೃತ್ತ, ವಿದ್ಯಾನಗರ, ಗೋಕುಲ ರಸ್ತೆ, ಉಣಕಲ್ಲನಲ್ಲಿ ಬೈಕ್ ಸವಾರರ ಸಂಖ್ಯೆ ಹೆಚ್ಚು ಕಾಣಿಸಿತು. ಆಟೋ, ಕಾರುಗಳು ಸಹ ರಸ್ತೆಯಲ್ಲಿ ಕಂಡುಬಂದವು.

    ಅನಗತ್ಯವಾಗಿ ಸಂಚರಿಸುವವರನ್ನು ತಡೆದು ವಿಚಾರಿಸುವ ಅಥವಾ ವಾಪಸ್ ಕಳಿಸುವ ಕೆಲಸವನ್ನೂ ಪೊಲೀಸರು ಮಾಡದಿರುವುದು ಅಚ್ಚರಿ ಮೂಡಿಸುವಂತಿತ್ತು.

    ಪೊಲೀಸರೊಂದಿಗೆ ವಾದ: ಕೇಶ್ವಾಪುರದ ಬೆಂಗೇರಿ ಸಂತೆ ಮೈದಾನದ ಬಳಿ ನಿರ್ವಿುಸಿರುವ ಚೆಕ್​ಪೋಸ್ಟ್​ನಲ್ಲಿ ಛತ್ತಿಸಗಢ ಮೂಲದವನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಪೊಲೀಸರೊಂದಿಗೆ ವಾದ ನಡೆಸಿದ. ಬೈಕ್​ನಲ್ಲಿ ಶಾಂತಿನಗರ. ಚರ್ಚ್ ಕಡೆಯಿಂದ ಬಂದ ವ್ಯಕ್ತಿ, ಒಂದು ಬಾರಿ ಎಟಿಎಂಗೆ ಹೋಗುವುದಾಗಿ, ಮತ್ತೊಂದು ಬಾರಿ ತೆಂಗಿನಕಾಯಿ ಖರೀದಿಸುವುದಿದೆ ಎಂದು ಓಡಾಡುತ್ತಿದ್ದ. ಅನಗತ್ಯವಾಗಿ ಸಂಚರಿಸದಂತೆ ಕರ್ತವ್ಯನಿರತ ಕೇಶ್ವಾಪುರ ಠಾಣೆ ಹಾಗೂ ಪೂರ್ವ ಸಂಚಾರ ಠಾಣೆ ಪೊಲೀಸರು ತಿಳಿಹೇಳಿದರೂ ಅವರ ಮಾತು ಕೇಳದೆ ವಾದಕ್ಕೆ ಇಳಿದ. ನಂತರ ಪೊಲೀಸರು ಆತನ ಬೈಕ್ ವಶಪಡಿಸಿಕೊಂಡು, ಪೂರ್ವ ಸಂಚಾರ ಠಾಣೆಗೆ ತೆಗೆದುಕೊಂಡು ಹೋದರು.

    ಛತ್ತಿಸಗಢದಲ್ಲಿ ತನಗೆ ಐಪಿಎಸ್ ಅಧಿಕಾರಿ ಪರಿಚಯ, ಅಲ್ಲಿನ ಮಂತ್ರಿ ಪರಿಚಯ ಎಂದು ಹೇಳುತ್ತ ಕೆಲವರಿಗೆ ಮೊಬೈಲ್ ಕರೆ ಮಾಡಲು ಯತ್ನಿಸಿದ. ಕೊನೆಗೆ ಪೊಲೀಸರು ಆತನನ್ನು ಬೆದರಿಸಿ ಕಳುಹಿಸಿದರು.

    ಓಡಾಡುವ ಹುಚ್ಚು ಬಿಟ್ಟಿಲ್ಲ: ಜನರಿಗೆ ಇನ್ನೂ ನಗರ ಸಂಚಾರದ ಹುಚ್ಚು ಬಿಟ್ಟಿಲ್ಲ. ಎಚ್ಚೆತ್ತುಕೊಳ್ಳಬೇಕಿದ್ದ ಜನರಿಗೆ ಅದ್ಯಾವ ರೀತಿ ಹೇಳಬೇಕೆಂಬುದೇ ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ನಗರದಲ್ಲಿ ಬೆಳ್ಳಂಬೆಳಗ್ಗೆ ಜನರು ವಾಹನ ಸಮೇತ ರಸ್ತೆಗೆ ಇಳಿಯುತ್ತಿದ್ದಾರೆ. ಪೊಲೀಸರು ಆರಂಭದಲ್ಲಿ ಚುರುಕುಗೊಳ್ಳುತ್ತಾರೆ. ಆದರೆ ತಾಪಮಾನ ಏರುತ್ತಿದ್ದಂತೆ ನೆರಳು ಆಶ್ರಯಿಸಿ ದೂರ ಸರಿಯುತ್ತಿದ್ದಾರೆ. ಇದು ವಾಹನ ಸವಾರರಿಗೆ ಓಡಾಡಲು ಮತ್ತಷ್ಟು ಅನುಕೂಲ ಮಾಡಿಕೊಟ್ಟಂತಾಗಿದೆ.

    ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ಹೊರಗಡೆ ಬಾರದಂತೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಜನರು ಹೊರಗಡೆ ಸಂಚರಿಸುವುದು ನಿಲ್ಲಿಸಿಲ್ಲ.

    ಅಗತ್ಯ ವಸ್ತು ಮತ್ತು ಅಧಿಕೃತ ವಾಹನ ಸಂಚಾರಕ್ಕೆ ಅಡೆತಡೆ ಇಲ್ಲ. ಆದರೆ, ಅನಗತ್ಯ ಓಡಾಡುವವರಿಗೆ ಕಡಿವಾಣ ಹಾಕಲು ಇದುವರೆಗೆ ಸಾಧ್ಯವಾಗಿಲ್ಲ. ಇದರಿಂದ ಮತ್ತಷ್ಟು ಕರೊನಾ ಸೋಂಕಿತರು ಮತ್ತು ಶಂಕಿತರ ಸಂಖ್ಯೆ ಹೆಚ್ಚಳವಾಗಲು ಕಾರಣವಾಗಲಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಕರೊನಾ ಸೋಂಕು ದೂರ ಮಾಡಬೇಕು ಎನ್ನುವ ಪರಿಜ್ಞಾನ ಯಾರಿಗೂ ಬಂದಂತೆ ಕಾಣುತ್ತಿಲ್ಲ.

    ಕರೊನಾ ಸೋಂಕಿತನಿಂದ ಆಹಾರ ಧಾನ್ಯ ವಿತರಣೆ
    ಹುಬ್ಬಳ್ಳಿ:
    ಕಮರಿಪೇಟ ಮುಲ್ಲಾ ಓಣಿಯ ಕರೊನಾ ಸೋಂಕಿತ ವ್ಯಕ್ತಿ (ಪಿ 236) ತನ್ನ ಗೆಳೆಯರು, ಬಂಧುಗಳ ಜತೆಗೂಡಿ ಮಾ. 27 ರಂದು ಮುಲ್ಲಾ ಓಣಿಯ ಡಾಕಪ್ಪಾ ಸರ್ಕಲ್ ನಿಂದ ಕಾಳಮ್ಮನ ಅಗಸಿಯವರೆಗೆ ವಾಸ್ತವ್ಯ ಹೊಂದಿರುವ ಸಾರ್ವಜನಿಕರಿಗೆ ಆಹಾರ ಧಾನ್ಯ ವಿತರಿಸಿರುವುದು ಜಿಲ್ಲಾಡಳಿತ ಗಮನಕ್ಕೆ ಬಂದಿದೆ. ಸಾರ್ವಜನಿಕರಿಗೆ 5 ಕೆಜಿ ಅಕ್ಕಿ, 2ಕೆಜಿ ತೊಗರಿ ಬೇಳೆ, 1 ಕೆಜಿ ಸಕ್ಕರೆ, 2 ಕೆಜಿ ಗೋದಿ, 250 ಗ್ರಾಂ ಚಹಾಪುಡಿ ವಿತರಿಸಿದ್ದಾರೆ ಎಂದು ಅಧಿಕಾರಿಳ ಪರಿಶೀಲನೆ ವೇಳೆ ದೃಢಪಟ್ಟಿರುತ್ತದೆ. ಆಹಾರ ಧಾನ್ಯ ಪಡೆದ ಸಾರ್ವಜನಿಕರಿಗೆ ಕರೊನಾ ಸೋಂಕು ತಗಲುವ ಸಾಧ್ಯತೆ ಇದ್ದು, ಸಂಬಂಧಪಟ್ಟವರು ಕೂಡಲೇ ಕರೊನಾ ಸಹಾಯವಾಣಿ 1077ಗೆ ಕರೆಮಾಡಿ ಪರೀಕ್ಷೆಗೆ ಒಳಪಡಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts