More

    ಇನ್ನೂ ಅಡಿಪಾಯ ಹಾಕದವರಿಗೆ ನೋಟಿಸ್

    ಹಾನಗಲ್ಲ: ತಾಲೂಕಿನಲ್ಲಿ ಕಳೆದ ವರ್ಷದ ಅತಿವೃಷ್ಟಿ ಸಂದರ್ಭದಲ್ಲಿ ಮನೆ ಕಳೆದುಕೊಂಡು ಸಮಸ್ಯೆ ಯಲ್ಲಿರುವ ಕುಟುಂಬಗಳು ಮನೆ ನಿರ್ವಿುಸುವಲ್ಲಿ ಆಸಕ್ತಿ ತೋರದಿದ್ದರೆ ಅವರಿಗೆ ನೀಡಿರುವ ಆದೇಶವನ್ನು ರದ್ದುಪಡಿಸುವಂತೆ ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ ಸೂಚಿಸಿದರು.

    ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ತಾಲೂಕಿನ ಗ್ರಾಮೀಣ ಕುಡಿಯುವ ನೀರಿನ ಸಮಸ್ಯೆ ಹಾಗೂ ಕಳೆದ ವರ್ಷದ ಅತಿವೃಷ್ಟಿಯಲ್ಲಿ ಸೂರು ಕಳೆದುಕೊಂಡ ಕುಟುಂಬಗಳ ಮನೆ ನಿರ್ಮಾಣ ಕಾಮಗಾರಿ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.

    ‘ತಾಲೂಕಿನಲ್ಲಿ ಕಳೆದ ವರ್ಷ ಅತಿವೃಷ್ಟಿಯಿಂದ 19 ಗ್ರಾಪಂ ವ್ಯಾಪ್ತಿಯಲ್ಲಿ ಹಾನಿಯಾದ ಎ ಕೆಟಗರಿಯ 94 ಹಾಗೂ ಬಿ ಕೆಟಗರಿಯ 230 ಮನೆ ಸೇರಿ ಒಟ್ಟು 324 ಮನೆಗಳ ಮರು ನಿರ್ವಣಕ್ಕೆ ಹಣ ಬಿಡುಗಡೆಯಾಗಿದೆ. ಆದರೆ, ಹಣ ಪಡೆದುಕೊಂಡ ಕೆಲವು ಫಲಾನುಭವಿಗಳು ಒಂದು ವರ್ಷ ಕಳೆಯುತ್ತಿದ್ದರೂ ಅಡಿಪಾಯ ಹಾಕುವುದಕ್ಕು ಮುಂದಾಗುತ್ತಿಲ್ಲ. ಕೂಡಲ ಗ್ರಾಪಂ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಮನೆಗಳ ನಿರ್ಮಾಣ ಸ್ಥಗಿತಗೊಂಡಿವೆ. ಅಂಥವರಿಗೆ ಮೂರು ಬಾರಿ ನೋಟಿಸ್ ಜಾರಿಗೊಳಿಸಿ ಕಾಮಗಾರಿ ಆದೇಶವನ್ನು ರದ್ದುಗೊಳಿಸಿ. ಅಲ್ಲಾಪುರ ಗ್ರಾಮದಲ್ಲಿ 20 ಮನೆಗಳು, ಹಾನಗಲ್ಲ ಪಟ್ಟಣ ವ್ಯಾಪ್ತಿಯಲ್ಲಿ 9 ಮನೆಗಳ ಕಾಮಗಾರಿ ಸ್ಥಗಿತ ಗೊಂಡಿವೆ. ಇವರಿಗೆ ಕೂಡಲೇ ನೋಟಿಸ್ ಜಾರಿಗೊಳಿಸಿ. ಮನೆ ಬೇಡವಾಗಿದ್ದರೆ ಅವರ ಕಾಮಗಾರಿ ಆದೇಶ ಪತ್ರವನ್ನು ರದ್ದುಗೊಳಿಸಿ ವರದಿ ಸಲ್ಲಿಸಿ’ ಎಂದು ಪಿಡಿಒಗಳಿಗೆ ಸೂಚನೆ ನೀಡಿದರು.

    ಗ್ರಾಮೀಣ ಕುಡಿಯುವ ನೀರು-ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ಜಿ. ಶಿಂಧೆ ಮಾಹಿತಿ ನೀಡಿ, ‘ತಾಲೂಕಿನ ಡೊಮ್ಮನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಖಾಸಗಿ ಕೊಳವೆಬಾವಿಯನ್ನು ಬಾಡಿಗೆಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ. ಈ ಗ್ರಾಮದಲ್ಲಿ 120 ಕುಟುಂಬಗಳಿದ್ದು, ಈಗಾಗಲೇ 4 ಬೋರ್​ವೆಲ್ ಕೊರೆಸಲಾಗಿದ್ದರೂ ಅವುಗಳಲ್ಲಿ ನೀರಿಲ್ಲದೆ ಬರಿದಾಗಿವೆ. ಇದೇ ರೀತಿ ಹೇರೂರ ಗ್ರಾಪಂ ವ್ಯಾಪ್ತಿಯ ಕಲಕೇರಿ ತಾಂಡಾದಲ್ಲಿಯೂ ಸಮಸ್ಯೆ ಎದುರಾಗಿದೆ. ಬಾಡಿಗೆ ಆಧಾರದಲ್ಲೂ ಯಾವ ರೈತರೂ ನೀರು ನೀಡಲು ಮುಂದಾಗುತ್ತಿಲ್ಲ. ವಡಗೇರಿ, ಡೊಳ್ಳೇಶ್ವರ ಗ್ರಾಮಗಳಲ್ಲೂ ಸಮಸ್ಯೆ ಇದೆ’ ಎಂದು ತಿಳಿಸಿದರು.

    ನವೋದಯ ಶಾಲೆಯಲ್ಲೂ ನೀರಿನ ಸಮಸ್ಯೆ: ತಾಲೂಕಿನ ಮಹರಾಜಪೇಟೆಯಲ್ಲಿರುವ ನವೋದಯ ವಿದ್ಯಾಲಯ ದಲ್ಲಿರುವ ವಿದ್ಯಾರ್ಥಿಗಳಿಗೆ ಮೂರು ಕೊಳವೆ ಬಾವಿಗಳ ಅಗತ್ಯವಿದೆ. ಆದರೆ, ಈಗ ಒಂದೇ ಕೊಳವೆಬಾವಿಯಿಂದ ನೀರು ಪೂರೈಸಲಾಗುತ್ತಿದೆ. ಜಿಲ್ಲಾಡಳಿತ ಇನ್ನೆರಡು ಕೊಳವೆಭಾವಿ ಕೊರೆಸಲು ಅನುಮೋದನೆ ನೀಡಿದೆ. ಆದರೆ, ಸುತ್ತಲಿನ ರೈತರು ತಮ್ಮ ಬೋರ್​ಗಳ ಅಂತರ್ಜಲ ಕುಸಿತದ ಹಿನ್ನೆಲೆಯಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ಕೊಳವೆಭಾವಿ ಕೊರೆಯಲು ಬಂದ ವಾಹನವನ್ನೂ ವಾಪಸ್ ಕಳಿಸಿದ್ದಾರೆ ಎಂದು ಜಿಪಂ ಕಿರಿಯ ಇಂಜಿನಿಯರ್ ಆರ್.ಪಾಂಡುರಂಗಪ್ಪ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಹಾಯಕ ಇಂಜಿನಿಯರ್ ರಮೇಶ ಹೂಗಾರ, ಕಿರಿಯ ಇಂಜಿನಿಯರ್​ಗಳಾದ ಎನ್.ಎಂ. ಪಾಟೀಲ, ಬಾಬುರಾವ ಸಾಖರೆ, ಅಶ್ವಿನಿ ಲೋಖಂಡೆ, ವೀರಪ್ಪ ಉಗರಖೋಡ ಇತರರು ಪಾಲ್ಗೊಂಡಿದ್ದರು.

    ಸರ್ಕಾರಿ ಭೂಮಿ, ಅರಣ್ಯ ಭೂಮಿಗಳಲ್ಲಿ ಮನೆ ನಿರ್ವಣಕ್ಕೆ ಗ್ರಾಪಂ ಅಧಿಕಾರಿಗಳು ಪರವಾನಗಿ ನೀಡುವಂತಿಲ್ಲ. ಮಾಸನಕಟ್ಟಿ ಗ್ರಾಮದಲ್ಲಿ ರತ್ನವ್ವ ಆಡೋರಿ ಎಂಬುವವರಿಗೆ ಸರ್ಕಾರಿ ಭೂಮಿ ಮಂಜೂರು ಮಾಡಿರುವುದು ಬೆಳಕಿಗೆ ಬಂದಿದೆ. ಕಂದಾಯ ಇಲಾಖೆ ಭೂಮಿಯನ್ನು ಮಂಜೂರು ಮಾಡಲು ಗ್ರಾಪಂ.ಗೆ ಅಧಿಕಾರವಿಲ್ಲ. ಮುಂದೆ ಸಮಸ್ಯೆಯಾದರೆ ಅಧಿಕಾರಿಗಳೆ ಹೊಣೆ ಹೊರಬೇಕಾಗುತ್ತದೆ.
    | ಪಿ.ಎಸ್. ಎರ್ರಿಸ್ವಾಮಿ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts