More

    ಇನ್ನು ಮೂರು ದಿನ `ಕೋಟೆ’ಕಲರ್ ನಗರಿ

    ಬಾಗಲಕೋಟೆ: ದೇಶದಲ್ಲಿಯೇ ಗಮನ ಸೆಳೆದಿರುವ ಬಾಗಲಕೋಟೆಯ ಬಣ್ಣದೋಕಳಿ ಇಂದಿನಿಂದ ಮೂರು ದಿನಗಳ ಕಾಲ ಸಡಗರ, ಸಂಭ್ರಮದಿಂದ ನಡೆಯಲಿದೆ. ಮುಳಗಡೆಯಾದ ಬಳಿಕ ಸತತ ಮೂರನೇ ಸಾರಿ ವಿದ್ಯಾಗಿರಿ, ನವನಗರದಲ್ಲಿ ಬಣ್ಣದ ಬಂಡಿಗಳ ಮೆರವಣಿಗೆ, ಪರಸ್ಪರ ಸಮಾಗಮ ನಡೆಯುತ್ತಿರುವುದು ಈ ಸಾರಿ ವಿಶೇಷ.

    ಹೋಳಿ ಹುಣ್ಣಿಮೆ ಅಂಗವಾಗಿ ಭಾನುವಾರ ಬೆಳಗಿನ ಜಾವ ಹುಬ್ಬಾ ನಕ್ಷತ್ರ ಗೋಚರಿಸುತ್ತಿದ್ದಂತೆ ಬಹು ಕಾಲದಿಂದಲು ನಡೆದುಕೊಂಡು ಬಂದಿರುವ ಪರಂಪರೆಯಂತೆ ನಗರದ ಕಿಲ್ಲಾ ಓಣಿಯಲ್ಲಿ ದಲಿತ ಕುಟುಂಬದಿಂದ ತಂದ ಕಿಚ್ಚಿನಿಂದ ಮೊದಲು ಕಾಮದಹನ ಮಾಡಲಾಯಿತು. ತನ್ಮೂಲಕ ಹೋಳಿ ಉತ್ಸವಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು.

    ತುರಾಯಿ ಹಲಿಗೆ, ಗಂಟೆನಾದ, ಮಹಿಳೆಯರ ಆರತಿ, ನಿಶಾನೆಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿ ಮೊದಲು ಕಿಲ್ಲಾದಲ್ಲಿ ಕಾಮದಹನ ಕಾರ್ಯ ಮುಗಿದ ನಂತರ ಹಳಪೇಟ, ಜೈನ್‌ಪೇಟ, ಹೊಸಪೇಟ, ವೆಂಕಟಪೇಟಗಳಲ್ಲಿ ಕಾಮದಹನ ನಡೆಯಿತು. ಮಧ್ಯಾಹ್ನದಿಂದ ರಾತ್ರಿ ವರೆಗೂ ಬಾಗಲಕೋಟೆ, ವಿದ್ಯಾಗಿರಿ ಹಾಗೂ ನವನಗರದ ವಿವಿಧ ಕಡೆಗಳಲ್ಲಿ ಕಾಮದಹನ ಕಾರ್ಯ ಜರುಗಿತು. ಕಾಮದಹನ ಸಂದರ್ಭದಲ್ಲಿ ಯುವಪಡೆ ವಿಶಿಷ್ಟ ರೀತಿಯಲ್ಲಿ ಹಲಿಗೆ ಬಾರಿಸುತ್ತ ಬಾಯಿ ಬಡಿದುಕೊಳ್ಳುವ ಮೂಲಕ ಹೋಳಿ ಆಚರಣೆಗೆ ಮೆರಗು ಹೆಚ್ಚಿಸಿದರು. ಬೆಳ್ಳಂ ಬೆಳಗ್ಗೆಯಿಂದಲೇ ನಗರದ ಪ್ರಮುಖ ಗಲ್ಲಿ ಗಲ್ಲಿಗಳಲ್ಲಿ ಯುವಕರು, ಬಾಲಕರು ಹಲಿಗೆ ಹಿಡಿದುಕೊಂಡು ಬಗೆ ಬಗೆಯಲ್ಲಿ ಸ್ಪರ್ಧೆಗೆ ಇಳಿದಂತೆ ಹಲಿಗೆ ಬಾರಿಸಿ ಗಮನ ಸೆಳೆದರು. ಮಾ.೨೪ ರಂದು ಇಡೀ ದಿನ ಕಾಮದಹನ ಕಾರ್ಯ ನಡೆಯಿತು.

    ಇನ್ನು ಮಾ.೨೫, ೨೬, ೨೭ ನಗರದಲ್ಲಿ ಬಣ್ಣದೋಕಳಿಯ ಅಬ್ಬರ ಜೋರಾಗಲಿದೆ. ಓಕುಳಿಯ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ವಿವಿಧ ಬಣ್ಣಗಳ ಮಾರಾಟ ಜೋರಾಗಿಯೆ ನಡೆದಿದೆ. ಪಾಲಕರು ಮಕ್ಕಳಿಗಾಗಿ ಪಿಚಕಾರಿ ಕೊಂಡುಕೊಳ್ಳುವ ದೃಶ್ಯವೂ ಸಾಮಾನ್ಯವಾಗಿತ್ತು. ಯುವಕರು ಹೆಚ್ಚಿನ ಪ್ರಮಾಣದಲ್ಲಿ ನಾನಾ ಬಣ್ಣಗಳನ್ನು ಖರೀದಿಗೆ ಮುಗಿಬಿದ್ದಿದ್ದರು.

    ದೇಶದಲ್ಲಿ ಕೊಲ್ಕತ್ತ ನಂತರದಲ್ಲಿ ಅತಿ ಹೆಚ್ಚು ಬಣ್ಣದೋಕಳಿಗೆ ಹೆಸರುವಾಸಿಯಾಗಿರುವ ಬಾಗಲಕೋಟೆಯ ಬಣ್ಣದ ಆಟ, ಮೂರು ದಿನಗಳ ಕಾಲ ನಗರವನ್ನು ಆವರಿಸಲಿದೆ. ಸೋಮವಾರ ಬೆಳಗ್ಗೆಯಿಂದ ಅಽಕೃತವಾಗಿ ರಂಗೀನಾಟ ರಂಗೇರಲಿದೆ. ಸೋಗಿನ ಬಂಡಿ ಹಾಗೂ ಬಣ್ಣದ ಬಂಡಿಗಳು ಆಕರ್ಷಕ ಸಂಚಾರ ನೋಡುಗರ ಗಮನ ಸೆಳೆಯಲಿವೆ. ವಿವಿಧೆಡೆಯಿಂದ ಸಾವಿರಾರು ಜನ ಹೋಳಿ ನೋಡಲು ಆಗಮಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts