More

    ಇದ್ದೂ ಇಲ್ಲದಂತೆ ಆದ ಪ್ರಾಥಮಿಕ ಆರೋಗ್ಯ ಕೇಂದ್ರ, ದಾಬಸ್‌ಪೇಟೆಯಲ್ಲಿ ಸಿಬ್ಬಂದಿ ಕೊರತೆ ರಾತ್ರಿ 9ಕ್ಕೆ ಆಸ್ಪತ್ರೆಗೆ ಬೀಗ

    ಬರಗೇನಹಳ್ಳಿ ಚಿಕ್ಕರಾಜು ದಾಬಸ್‌ಪೇಟೆ
    ದಾಬಸ್‌ಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದರೂ ವೈದ್ಯರ ಕೊರತೆಯಿಂದ ರೋಗಿಗಳ ಪಾಲಿಗೆ ಇಲ್ಲದಂತಾಗಿದೆ. ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಕೊರತೆಯಿಂದಾಗಿ ರಾತ್ರಿ 9ಕ್ಕೆ ಆಸ್ಪತ್ರೆಯನ್ನು ಮುಚ್ಚಲಾಗುತ್ತದೆ. ಮರುದಿನ ಬೆಳಗ್ಗೆ 9 ಗಂಟೆಗೆ ತೆರೆಯಲಾಗುತ್ತದೆ.

    ಇದರಿಂದಾಗಿ ಜನರಿಗೆ ತುರ್ತು ಸೇವೆ ದೊರೆಯದಂತಾಗಿ, ಪ್ರಾಣಕ್ಕೆ ಸಂಚಕಾರ ಉಂಟಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
    ತೊಂದರೆಯನ್ನು ಜನರು ತಾಲೂಕು ಆರೋಗ್ಯಾಧಿಕಾರಿ ಹರೀಶ್ ಅವರ ಗಮನಕ್ಕೆ ತಂದಿದ್ದಾರೆ. ಆದರೂ, ಆಸ್ಪತ್ರೆಗೆ ಅಗತ್ಯ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ನೇಮಿಸಲು ಕ್ರಮ ಕೈಗೊಳ್ಳುವ ಬದಲು ಇರುವಷ್ಟೇ ಸಿಬ್ಬಂದಿಯಿಂದ ಜನರಿಗೆ ತೊಂದರೆ ಆಗದಂತೆ ಕಾರ್ಯನಿರ್ವಹಿಸಲು ಪ್ರಯತ್ನಿಸುತ್ತಿದ್ದೇವೆ. ನಿಮಗೆ ಯಾರಾದರೂ ಎಂಬಿಬಿಎಸ್ ಮಾಡಿದವರು ಪರಿಚಯವಿದ್ದರೆ ಕರೆತನ್ನಿ. ಅವರನ್ನೇ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳುತ್ತೇವೆ ಎಂಬ ಉಡಾೆ ಉತ್ತರ ಕೊಡುತ್ತಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

    ಡಿ ಗ್ರೂಪ್ ನೌಕರರು ಬೇಕು: ಪಿಎಚ್‌ಸಿಯಲ್ಲಿ ಮುಖ್ಯವಾಗಿ ಡಿ ಗ್ರೂಪ್ ನೌಕರರ ಕೊರತೆ ಇದೆ. ಸ್ವಚ್ಛತೆ ಕೊರತೆ ಮತ್ತು ಭದ್ರತೆ ಇಲ್ಲದಿರುವ ಕಾರಣ ಸ್ಟ್ಾ ನರ್ಸ್‌ಗಳು ರಾತ್ರಿ ವೇಳೆ ಆಸ್ಪತ್ರೆಯಲ್ಲಿ ತಂಗಲು ನಿರಾಕರಿಸುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳು ಸರಿ ಹೋದರೆ, ಜನರಿಗೆ 24 ಗಂಟೆ ಆರೋಗ್ಯ ಸೇವೆ ಒದಗಿಸಲು ಅನುಕೂಲವಾಗುತ್ತದೆ ಎಂಬುದು ವೈದ್ಯಕೀಯ ಸಿಬ್ಬಂದಿ ಸಲಹೆಯಾಗಿದೆ.

    ವೇಗವಾಗಿ ಬೆಳೆಯುತ್ತಿದೆ ದಾಬಸ್‌ಪೇಟೆ: ದಾಬಸ್‌ಪೇಟೆಯ ಭಾಗದಲ್ಲಿ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆಗೊಳ್ಳುತ್ತಿವೆ. ಅದಕ್ಕೆ ತಕ್ಕುದಾಗಿ ಇಲ್ಲಿ ಜನಸಂಖ್ಯೆಯೂ ಹಿಗ್ಗುತ್ತಿದೆ. ಇದಕ್ಕೆ ತಕ್ಕಂತೆ ಆರೋಗ್ಯ ಸೇವೆ ಲಭಿಸುತ್ತಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿದರೆ, ಜನರಿಗೆ ಆರೋಗ್ಯ ಸೇವೆ ಒದಗಿಸಲು ಅನುಕೂಲವಾಗುತ್ತದೆ. ಆದರೆ, ಈ ವಿಷಯವಾಗಿ ಸ್ಥಳೀಯ ಜನಪ್ರತಿನಿಧಿಗಳು ನಿರುತ್ಸಾಹ ತೋರುತ್ತಿದ್ದು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂಬುದು ಜನರ ದೂರಾಗಿದೆ.

    ಅಪಘಾತವಾದರೆ ಕೇಳುವವರೇ ಇಲ್ಲ: ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದೆ. ಈ ರಸ್ತೆಯಲ್ಲಿ ಆಗಾಗ್ಗೆ ಅಪಘಾತ ಸಂಭವಿಸುವುದು ಸಾಮಾನ್ಯ. ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆತಂದರೆ, ಪ್ರಾಥಮಿಕ ಚಿಕಿತ್ಸೆಯೂ ಸಿಗದ ಸ್ಥಿತಿ ಇದೆ.

    ಕರೊನಾ ಚಿಕಿತ್ಸೆಗೂ ಬರ: ಕರೊನಾ 2ನೇ ಅಲೆಯ ಅಬ್ಬರ ಜೋರಾಗಿದೆ. ಸೋಂಕಿಗೆ ತುತ್ತಾದವರಿಗೆ ಪಿಎಚ್‌ಸಿಯಲ್ಲಿ ಸೂಕ್ತ ಚಿಕಿತ್ಸೆ ದೊರೆಯದಂತಾಗಿದೆ. ಇದರಿಂದಾಗಿ ದೂರದ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯುವ ಸ್ಥಿತಿ ಇದೆ. ಬಡವರಿಗೆ ಅಷ್ಟು ದೂರದ ಆಸ್ಪತ್ರೆಗೆ ಹೋಗಲು ಸಾಧ್ಯವಾಗದೆ ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಸಂಗಗಳೇ ಹೆಚ್ಚಾಗಿವೆ ಎಂದು ಸಾರ್ವಜನಿಕರು ದೂರಿದರು.

    ದಾಬಸ್‌ಪೇಟೆ ಆರೋಗ್ಯ ಕೇಂದ್ರದಲ್ಲಿ ಗ್ರೂಪ್ ಡಿ ಸಿಬ್ಬಂದಿ ಇಲ್ಲ. ಡಿಎಚ್‌ಒ ಅವರ ಗಮನಕ್ಕೆ ತಂದಿದ್ದೇವೆ. ಇನ್ನೆರಡು ದಿನದಲ್ಲಿ ವೈದ್ಯರು ಬರುವ ಭರವಸೆ ಇದ್ದು, ಹಂತಹಂತವಾಗಿ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ.
    ಡಾ.ಶಶಿಕುಮಾರ್
    ದಾಬಸ್‌ಪೇಟೆ ಆಸ್ಪತ್ರೆ ಆಡಳಿತಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts