More

    ಇದ್ದೂ ಇಲ್ಲದಂತಾದ ನರೇಗಲ್ಲ ಸಿಎಚ್​ಸಿ

    ನರೇಗಲ್ಲ: ಜಿಲ್ಲೆಯ ಅತಿ ದೊಡ್ಡ ಹೋಬಳಿ ಕೇಂದ್ರವಾಗಿರುವ ನರೇಗಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು (ಪಿಎಚ್​ಸಿ) ಇತ್ತೀಚೆಗೆ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರವಾಗಿ (ಸಿಎಚ್​ಸಿ) ಮೇಲ್ದರ್ಜೆಗೇರಿಸಲಾಗಿದೆ. 2 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ವಿುಸಲಾಗಿದೆ. ಆದರೆ, ನೂತನ ಕೇಂದ್ರಕ್ಕೆ ಅಗತ್ಯ ವೈದ್ಯಕೀಯ ಸಲಕರಣೆ, ಸಿಬ್ಬಂದಿ ಇಲ್ಲದಿರುವುದರಿಂದ ಕೋಟ್ಯಂತರ ರೂಪಾಯಿ ವ್ಯಯಿಸಿ ನಿರ್ವಿುಸಲಾದ ಆಸ್ಪತ್ರೆ ಪ್ರಯೋಜನವಿಲ್ಲದಂತಾಗಿದೆ.

    ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ 2 ಕೋಟಿ ವೆಚ್ಚದಲ್ಲಿ 6 ಹಾಸಿಗೆಗಳಿಂದ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ಕಟ್ಟಲಾಗಿದೆ. ಪ್ರಯೋಗಾಲಯ, ಎಕ್ಸ್​ರೇ ವಿಭಾಗ, ಔಷಧ ವಿತರಣೆ ವಿಭಾಗ, ಶಸ್ತ್ರ ಚಿಕಿತ್ಸಾ ವಿಭಾಗ, ಪ್ರಸೂತಿ ವಿಭಾಗ, ಕರ್ತವ್ಯ ನಿರತ ವೈದ್ಯಾಧಿಕಾರಿಗಳ ಕೊಠಡಿ, ಲಘು ಶಸ್ತ್ರ ಚಿಕಿತ್ಸಾ ವಿಭಾಗ, ಪೂರ್ವ ತಯಾರಿ ವಿಭಾಗ, ಶುಶ್ರೂಷಕಿಯರ ವಿಶ್ರಾಂತಿ ಕೊಠಡಿ ಹಾಗೂ 30 ಹಾಸಿಗೆ ಆಸ್ಪತ್ರೆಗೆ ಅವಶ್ಯವಿರುವ ಎಲ್ಲ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಯಾವುದೇ ವಿಭಾಗಕ್ಕೆ ಬೇಕಾದ ಸಲಕರಣೆಗಳನ್ನು ಪೂರೈಕೆ ಮಾಡಲಾಗಿಲ್ಲ. ಕುರ್ಚಿ, ಕಾಟ್, ಬೇಡ್, ಟೇಬಲ್ ಸೇರಿ ಅವಶ್ಯವಿರುವ ಇತರೆ ಯಾವುದೇ ಸೌಲಭ್ಯಗಳು ಇಲ್ಲದಿರುವುದರಿಂದ ಆಸ್ಪತ್ರೆ ಇದ್ದೂ ಇಲ್ಲದಂತಾಗಿದೆ.

    ಪಟ್ಟಣ ಸೇರಿ ಜಕ್ಕಲಿ, ಹಾಲಕೆರೆ, ಬೂದಿಹಾಳ, ಮಾರನಬಸರಿ, ಕೋಡಿಕೊಪ್ಪ, ಕೋಚಲಾಪೂರ, ತೋಟಗಂಟಿ, ದ್ಯಾಂಪೂರ, ಮಲ್ಲಾಪೂರ ಗ್ರಾಮಗಳ ಸುಮಾರು 30 ಸಾವಿರ ಜನರ ಹಾಗೂ ವ್ಯಾಪ್ತಿಯ ಹೊರತಾಗಿ ಪಕ್ಕದ ಗದಗ ತಾಲೂಕಿನ ಕೋಟುಮಚಗಿ, ಯಲಬುರ್ಗಾ ತಾಲೂಕಿನ ಬಂಡಿಹಾಳ, ತೊಂಡಿಹಾಳ ಗ್ರಾಮಗಳ ರೋಗಿಗಳಿಗೆ ಇಲ್ಲಿ ನಿತ್ಯ 100 ರಿಂದ 150 ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಮಳೆಗಾಲದಲ್ಲಿ ಡೆಂಘ, ಮಲೇರಿಯಾದಂಥ ಸಾಂಕ್ರಾಮಿಕ ರೋಗಗಳಲ್ಲದೆ, ಜ್ವರ, ಶೀತ ಮತ್ತಿತರ ಕಾಯಿಲೆಗಳಿಗೆ ಚಿಕಿತ್ಸೆಗೆಂದು ಬರುವ ರೋಗಿಗಳ ಸಂಖ್ಯೆ ಹೆಚ್ಚಿರುತ್ತದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಆಸ್ಪತ್ರೆಯ ನಿರ್ಮಾಣ ಮತ್ತು ಉದ್ಘಾಟನೆಗೆ ವಹಿಸಿದ ಕಾಳಜಿಯನ್ನು ಅದಕ್ಕೆ ಬೇಕಾಗಿರುವ ಸೌಲಭ್ಯ, ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ಖಾಲಿ ಹುದ್ದೆಗಳು

    33 ಸಿಬ್ಬಂದಿ ಕಾರ್ಯನಿರ್ವಹಿಸಬೇಕಿದ್ದ ಆಸ್ಪತ್ರೆಯಲ್ಲಿ ಕೇವಲ ಒಬ್ಬ ವೈದ್ಯರು, ಸೀನಿಯರ್ ಪುರುಷ ಹೆಲ್ತ್ ಎಜುಕೇಟರ್, ಪ್ರಥಮ ದರ್ಜೆ ಸಹಾಯಕಿ, ಹಿರಿಯ ಆರೋಗ್ಯ ನಿರೀಕ್ಷಕ, ಕಿರಿಯ ಆರೋಗ್ಯ ನಿರೀಕ್ಷಕ, ಫಾರ್ವಸಿಸ್ಟ್, ಕಿರಿಯ ಪ್ರಯೋಗ ಶಾಲಾ ತಂತ್ರಜ್ಞ, 1 ಗ್ರುಪ್ ಡಿ ನೌಕರರು ಸೇರಿ 10 ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಸ್​ಎಂಒ(ಸಿನಿಯರ್ ಮೆಡಿಕಲ್ ಆಫೀಸರ್), ತಜ್ಞ ವೈದ್ಯರು 5, ಶುಶ್ರೂಷಕಿಯರು ಆರು ಜನ, ವಾಹನ ಚಾಲಕರು ಇಬ್ಬರು, ಗ್ರುಪ್ ಡಿ ಹತ್ತು ಜನ, ನೇತ್ರಾಧಿಕಾರಿ, ಕ್ಷಕಿರಣ ತಂತ್ರಜ್ಞ, ಎಕ್ಸ್​ರೇ ವಿಭಾಗದ ಸಹಾಯಕ, ಪ್ರಯೋಗಾಲಯ ಸಹಾಯಕ, ಕಚೇರಿ ಅಧೀಕ್ಷಕರು, ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳು ಖಾಲಿ ಇವೆ.

    ಕಟ್ಟಡ ಕಾಮಗಾರಿ ಕಳಪೆ ಆರೋಪ

    2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ವಣವಾಗಿರುವ ನೂತನ ಆಸ್ಪತ್ರೆಯ ಕಟ್ಟಡದ ಗುಣಮಟ್ಟದ ಬಗ್ಗೆ ಸ್ಥಳೀಯರು ಕಾಮಗಾರಿ ಪ್ರಗತಿ ಹಂತದಲ್ಲಿಯೇ ಆರೋಪಿಸಿದ್ದರು. ತಾಲೂಕು ವೈದ್ಯಾಧಿಕಾರಿ, ಸ್ಥಳೀಯ ವೈದ್ಯಾಧಿಕಾರಿಗಳು ಕಾಮಗಾರಿ ಗುಣಮಟ್ಟ ಪರೀಕ್ಷಿಸುವಂತೆ ಆರೋಗ್ಯ ಇಲಾಖೆಯ ಇಂಜಿನಿಯರ್​ಗೆ ಪತ್ರ ಬರೆದಿದ್ದರು. ಆದರೂ, ಅಧಿಕಾರಿಗಳ ಪತ್ರಕ್ಕೆ ಸ್ಪಂದಿಸದೆ ತರಾತುರಿಯಲ್ಲಿ ಆಸ್ಪತ್ರೆ ಉದ್ಘಾಟಿಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

    ನರೇಗಲ್ಲ ನೂತನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಗತ್ಯವಿರುವ ಸಿಬ್ಬಂದಿ ಹಾಗೂ ಸಲಕರಣೆಗಳನ್ನು ಪೂರೈಕೆ ಮಾಡಿದ ನಂತರ ಆಸ್ಪತ್ರೆ ಉದ್ಘಾಟಿಸಬೇಕಾಗಿತ್ತು. ಖಾಲಿ ಕಟ್ಟಡದ ಉದ್ಘಾಟನೆಯಿಂದ ಯಾವುದೇ ಪ್ರಯೋಜನವಿಲ್ಲ. ಜನಪ್ರತಿನಿಧಿಗಳ, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಆಸ್ಪತ್ರೆ ಇದ್ದೂ ಇಲ್ಲದಂತಾಗಿದೆ.

    | ಅಶೋಕ ಬೇವಿನಕಟ್ಟಿ, ಸಾಮಾಜಿಕ ಹೋರಾಟಗಾರರು, ನರೇಗಲ್ಲ

    ಸಮುದಾಯ ಆರೋಗ್ಯ ಕೇಂದ್ರದ ಅಗತ್ಯ ಸಿಬ್ಬಂದಿ, ಸಲಕರಣೆಗಳ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆರ್ಥಿಕ ಇಲಾಖೆಯ ಅನುಮೋದನೆ ಸಿಕ್ಕ ನಂತರ ಎಲ್ಲ ಸಿಬ್ಬಂದಿ ಹಾಗೂ ಅವಶ್ಯವಿರುವ ಎಲ್ಲ ವ್ಯವಸ್ಥೆ ಮಾಡಲಾಗುವುದು.

    | ಡಾ. ಸತೀಶ ಬಸರಿಗಿಡದ ಡಿಎಎಚ್​ಒ, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts