More

    ಇದ್ದೂ ಇಲ್ಲದಂತಾಗಿದೆ ವಡ್ಡಿ ಘಟ್ಟ ರಸ್ತೆ

    ಕಾರವಾರ: ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ಒಂದೂವರೆ ವರ್ಷ ವಾಹನ ಸಂಚಾರ ನಿಷೇಧಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಕರಾವಳಿ ಹಾಗೂ ಮಲೆನಾಡನ್ನು ಸಂರ್ಪಸುವ ಸಮೀಪದ ವಡ್ಡಿ ಘಟ್ಟ ರಸ್ತೆ ಇದ್ದರೂ ಇಲ್ಲದಂತಾಗಿದೆ.

    ಗೋಕರ್ಣ-ಮಾದನಗೇರಿ-ಅಚವೆ-ದೇವನಹಳ್ಳಿ-ಮತ್ತಿಘಟ್ಟ-ಶಿರಸಿ ರಾಜ್ಯ ಹೆದ್ದಾರಿ 143 ಇದಾಗಿದೆ. ಸುಮಾರು 70 ಕಿಮೀಯಲ್ಲಿ ಶಿರಸಿ ಹಾಗೂ ಅಂಕೋಲಾ ತಾಲೂಕನ್ನು ಜೋಡಿಸುತ್ತದೆ. ಕುಮಟಾಕ್ಕೂ ತೆರಳಲು ಇದು ಸಮೀಪದ ಮಾರ್ಗವಾಗಿದೆ. ಆದರೆ, ಘಟ್ಟ ಪ್ರದೇಶದ ಸುಮಾರು 18 ಕಿಮೀ ರಸ್ತೆ ಸಂಪೂರ್ಣ ಹಾಳಾಗಿದ್ದು, ಸಂಚಾರ ದುಸ್ತರವಾಗಿದೆ. ದೊಡ್ಡ ಹೊಂಡಗಳು ಬಿದ್ದಿದ್ದು, ಇಲ್ಲಿ ಹೋದರೆ, ವಾಹನ ಹಾಳಾಗುವುದು ಖಂಡಿತ ಎಂಬ ಪರಿಸ್ಥಿತಿ ಇದೆ. ಸಂಪೂರ್ಣ ಕಾಡಿನ ಹಾದಿ ಇದಾಗಿದ್ದು, ವಾಹನಗಳು ಹಾಳಾದರೆ ಸವಾರರು ಅತಂತ್ರರಾಗುವುದು ಖಂಡಿತ. ಮೊಬೈಲ್ ಸಿಗ್ನಲ್ ಕೂಡ ಸಿಗದ ಹಲವು ಪ್ರದೇಶಗಳು ಇರುವುದರಿಂದ ಜನ ತೊಂದರೆಗೆ ಈಡಾಗುವ ಸಾಧ್ಯತೆ ಇದೆ.

    ಎರಡು ವಿಭಾಗಕ್ಕೆ: ವಡ್ಡಿ ಘಟ್ಟ ರಸ್ತೆಯು ಅರ್ಧ ಭಾಗ ಶಿರಸಿ ಲೋಕೋಪಯೋಗಿ ವಿಭಾಗಕ್ಕೆ ಸೇರಿದ್ದರೆ ಇನ್ನರ್ಧ ಕಾರವಾರ ವಿಭಾಗಕ್ಕೆ ಸೇರಿದೆ. ಘಟ್ಟ ಪ್ರದೇಶದಲ್ಲಿ ಕಾರವಾರ ವಿಭಾಗದ 6 ಕಿಮೀ ಸಂಪೂರ್ಣ ಹಾಳಾಗಿದೆ. ಅದರ ಅಭಿವೃದ್ಧಿಗೆ ಪ್ರಸ್ತಾವನೆ ಕಳಿಸಲಾಗಿದ್ದು, ಹಣ ಮಂಜೂರಾದರೆ ಕಾಮಗಾರಿ ನಡೆಸಲಾಗುವುದು ಎಂದು ಲೋಕೋಪಯೋಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಶಿರಸಿ ವಿಭಾಗದಲ್ಲಿ ಘಟ್ಟ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ 14 ಕಿಮೀ ಕಾಮಗಾರಿ ನಡೆಯುತ್ತಿದೆ. ಇನ್ನೂ 3 ಕಿಮೀಯಷ್ಟು ದೂರ ರಸ್ತೆ ಅಭಿವೃದ್ಧಿ ಬಾಕಿ ಇದೆ. ಮಳೆಗಾಲ ಮುಗಿದ ತಕ್ಷಣ ಕಾಮಗಾರಿ ಮಾಡಲಾಗುವುದು ಎಂದು ಲೋಕೋಪಯೋಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಹೊರತಾಗಿಯೂ ಇನ್ನೂ 12 ಕಿಮೀ ರಸ್ತೆ ಅಭಿವೃದ್ಧಿಗೆ ಟೆಂಡರ್ ಕರೆಯುವುದು ಬಾಕಿ ಇದೆ.

    ಅರಣ್ಯ ಇಲಾಖೆ ಆಕ್ಷೇಪಣೆ..? : ವಡ್ಡಿ ಘಟ್ಟ ರಸ್ತೆಯಲ್ಲಿ 21 ಹೇರ್ ಪಿನ್ ಕರ್ವ್ ಇದೆ. 500 ಮೀಟರ್​ಗಳಷ್ಟು ದೂರ ಅತಿ ದುರ್ಗಮ ಘಟ್ಟದಲ್ಲಿ ರಸ್ತೆ ಹೋಗುತ್ತದೆ. ಹಲವೆಡೆ ಅತಿ ಅಪಾಯಕಾರಿ ಕಂದಕಗಳಿವೆ. ಸದ್ಯ ಈ ರಸ್ತೆಯಲ್ಲಿ ದಿನಕ್ಕೆ ಒಂದು ಬಸ್ ಮಾತ್ರ ಓಡಾಡುತ್ತದೆ. ರಸ್ತೆ ಅಭಿವೃದ್ಧಿ ಮಾಡಿಕೊಟ್ಟಲ್ಲಿ ಎನ್​ಡಬ್ಲ್ಯುಕೆಆರ್​ಟಿಸಿ ಬಸ್ ಓಡಿಸಲು ಸಿದ್ಧವಿದೆ. ಆದರೆ, ರಸ್ತೆ ಅಭಿವೃದ್ಧಿಗೆ ಕೋಟ್ಯಂತರ ಹಣ ಬೇಕು ಅಲ್ಲದೆ, ಅರಣ್ಯ ಇಲಾಖೆಯ ಅನುಮೋದನೆಯೂ ಕಷ್ಟವಾಗುವ ದೃಷ್ಟಿಯಿಂದ ಆ ಬಗ್ಗೆ ಯೋಜಿಸಿಲ್ಲ ಎಂಬುದು ಹಿರಿಯ ಅಧಿಕಾರಿಯೊಬ್ಬರ ಅಭಿಪ್ರಾಯ.

    ಪರ್ಯಾಯ ಮಾರ್ಗ ಗುರುತಿಸಿದ ನಂತರವೇ ಹೆದ್ದಾರಿ ಕಾಮಗಾರಿ ಆರಂಭ: ಸ್ಥಳೀಯರಿಗೆ ಓಡಾಡಲು ಪರ್ಯಾಯ ಮಾರ್ಗ ಗುರುತಿಸಿದ ನಂತರವೇ ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕೆಲಸ ಪ್ರಾರಂಭಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದಾಗಿ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ.ತಿಳಿಸಿದ್ದಾರೆ. ಅ. 12 ರಿಂದ ಶಿರಸಿ-ಕುಮಟಾ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಮಾಡಿ, ಅವರು ಶುಕ್ರವಾರ ಆದೇಶಿಸಿದ್ದಾರೆ. ಈ ಸಂಬಂಧ ಮಾಧ್ಯಮಗಳ ಜತೆ ಮಾತನಾಡಿದ ಅವರು, ಜನರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಆದೇಶ ಮಾಡಲಾಗಿದೆ. ಅ.12 ರಂದು ಶಿರಸಿ ಹಾಗೂ ಕುಮಟಾ ಉಪವಿಭಾಗಾಧಿಕಾರಿಗಳು ಪಿಡಬ್ಲ್ಯುಡಿ, ಎನ್​ಎಚ್​ಎಐ ಹಾಗೂ ಗುತ್ತಿಗೆದಾರರ ಸಭೆ ನಡೆಸಿ ತಮ್ಮ ವ್ಯಾಪ್ತಿಯ ಜನರಿಗೆ ಓಡಾಟ ಮಾಡಲು ಅನುಕೂಲವಾಗುವಂತೆ ಪರ್ಯಾಯ ಮಾರ್ಗ ಗುರುತಿಸುವಂತೆ ಸೂಚಿಸಿದ್ದೇನೆ. ಅದರ ವ್ಯವಸ್ಥೆಯಾದ ನಂತರ ಕಾಮಗಾರಿ ಶುರುವಾಗಲಿದೆ ಎಂದಿದ್ದಾರೆ.

    ಶಿರಸಿ-ಕುಮಟಾ ರಸ್ತೆಲ್ಲಿ ವಾಹನ ಸಂಚಾರ ಬಂದಾದರೆ ಲಘು ವಾಹನಗಳು ಮಾತ್ರ ವಡ್ಡಿ ಘಟ್ಟ ರಸ್ತೆಯಲ್ಲಿ ಸಂಚರಿಸಬಹುದು ಎಂದು ನಾವು ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿದ್ದೇವೆ. ದೊಡ್ಡ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿಗಳನ್ನೇ ಶಿಫಾರಸು ಮಾಡಿದ್ದೇವೆ. | ಸತೀಶ ಜಹಗೀರದಾರ್ ಪಿಡಬ್ಲ್ಯುಡಿ ಇಇ ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts