More

    ಇಕೋ ಬೀಚ್​ಗೆ ಬ್ಲ್ಯೂ ಫ್ಲ್ಯಾಗ್ ಪ್ರಮಾಣಪತ್ರ

    ಕಾರವಾರ: ಹೊನ್ನಾವರ ಕಾಸರಕೋಡಿನ ಇಕೋ ಬೀಚ್​ಗೆ ಪ್ರತಿಷ್ಠಿತ ಬ್ಲ್ಯೂ ಫ್ಲ್ಯಾಗ್ ಪ್ರಮಾಣಪತ್ರ ಲಭಿಸಿದೆ. ದೇಶದ 65 ವಿವಿಧ ದೇಶಗಳ 60 ಸದಸ್ಯರನ್ನೊಳಗೊಂಡ ಡೆನ್ಮಾರ್ಕ್ ಮೂಲದ ಫೌಂಡೇಶನ್ ಫಾರ್ ಎನ್ವಿರಾನ್ಮೆಂಟಲ್ ಎಜುಕೇಶನ್ ಎಂಬ ಸರ್ಕಾರೇತರ ಸಂಸ್ಥೆ ಈ ಪ್ರಮಾಣಪತ್ರ ನೀಡಿದೆ. ರಾಜ್ಯದ ಉಡುಪಿಯ ಪಡುಬಿದ್ರಿ ಸೇರಿ ದೇಶದ ಒಟ್ಟು 8 ಕಡಲ ತೀರಗಳಿಗೆ ಇದೇ ಮೊದಲ ಬಾರಿಗೆ ಈ ಗರಿ ಲಭ್ಯವಾಗಿದೆ ಎಂದು ಬ್ಲ್ಯೂ ಫ್ಲ್ಯಾಗ್ ಬೀಚ್ ಯೋಜನೆಯ ಮುಖ್ಯಸ್ಥ ಸಂಜಯ ಝುಲ್ಲಾ ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ತಿಳಿಸಿದ್ದಾರೆ.

    1 ವರ್ಷಕ್ಕೆ ಸೀಮಿತ: ಸ್ವಚ್ಛತೆ, ನೀರಿನ ಗುಣಮಟ್ಟ ಹಾಗೂ ಸುತ್ತಲಿನ ಪರಿಸರವನ್ನು ಉತ್ತಮವಾಗಿ ನಿರ್ವಹಣೆ ಮಾಡಿದ ಕಡಲ ತೀರಗಳಿಗೆ ತಜ್ಞರ ಸಮಿತಿ ಪರಿಶೀಲನೆ ನಡೆಸಿ 1 ವರ್ಷಕ್ಕೆ ಸೀಮಿತವಾಗಿ ಈ ಪ್ರಮಾಣಪತ್ರ ನೀಡುತ್ತದೆ. ಈ ಪ್ರಮಾಣಪತ್ರದಿಂದ ಕಡಲ ತೀರಕ್ಕೆ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ದೊರೆಯಲಿದೆ. ಸ್ಥಳೀಯ ಆಡಳಿತ ಗುಣಮಟ್ಟವನ್ನು ಇದೇ ರೀತಿ ಕಾಯ್ದುಕೊಂಡಲ್ಲಿ ಮುಂದಿನ ವರ್ಷಕ್ಕೆ ಡೆನ್ಮಾರ್ಕ್​ನ ಸರ್ಕಾರೇತರ ಸಂಸ್ಥೆ ಪ್ರಮಾಣಪತ್ರವನ್ನು ನವೀಕರಣ ಮಾಡಲಿದೆ.

    ತಿಂಗಳಿಗೆ 5 ಲಕ್ಷ ರೂ. ಖರ್ಚು: ಕಾಸರಕೋಡು ಕಡಲ ತೀರವನ್ನು ಬ್ಲ್ಯೂ ಫ್ಲ್ಯಾಗ್ ಪ್ರಮಾಣಪತ್ರಕ್ಕೆ ಸಜ್ಜು ಮಾಡಲು ಕೇಂದ್ರ ಸರ್ಕಾರ ಯುರೇಖಾ ಫೋರ್ಬ್ಸ್ ಎಂಬ ಕಂಪನಿಗೆ ಗುತ್ತಿಗೆ ನೀಡಿದೆ. ಕಂಪನಿ ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ಇಲ್ಲಿನ ಪರಿಸರ ಸ್ನೇಹಿ ಶೌಚಗೃಹ ಹಾಗೂ ಸ್ನಾನಗೃಹ ನಿರ್ಮಾಣ ಮಾಡಿದೆ. ಅವುಗಳ ನೀರು ಸಮುದ್ರಕ್ಕೆ ಹೋಗದಂತೆ ತಡೆಯಲು ತ್ಯಾಜ್ಯ ಸಂಸ್ಕರಣ ಘಟಕ ಅಳವಡಿಸಲಾಗಿದೆ. ಸುತ್ತಲೂ ಉದ್ಯಾನ ನಿರ್ಮಾಣ ಮಾಡಿದ್ದು, ಸಂಸ್ಕರಿಸಿದ ನೀರನ್ನು ಮರು ಬಳಕೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಸೋಲಾರ್ ಘಟಕ ಅಳವಡಿಸಲಾಗಿದ್ದು, ಅದರಿಂದಲೇ ವಿದ್ಯುತ್ ಪಡೆಯಲಾಗುತ್ತದೆ. ನಿತ್ಯ ತೀರದ ಸ್ವಚ್ಛತೆ ಹಾಗೂ ನಿರ್ವಹಣೆಗಾಗಿ ಸದ್ಯ 20 ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ.

    ಇನ್ನೂ 8 ಕಡಲ ತೀರ ಶಿಫಾರಸು
    ಜಿಲ್ಲೆಯ ಇನ್ನೂ ಎಂಟು ಕಡಲ ತೀರಗಳನ್ನು ಬ್ಲ್ಯೂ ಫ್ಲ್ಯಾಗ್ ಪ್ರಮಾಣಪತ್ರಕ್ಕೆ ಶಿಫಾರಸು ಮಾಡಿ ಕಳಿಸಲಾಗಿದೆ. ಕಾರವಾರದ ರಾಕ್ ಗಾರ್ಡನ್ ಹಿಂದಿನ ತೀರ, ಮಾಜಾಳಿಯ ತಿಳಮಾತಿ, ಅಂಕೋಲಾದ ಹನಿ ಕಡಲ ತೀರ, ಮುರ್ಡೆಶ್ವರ, ಗೋಕರ್ಣ ತೀರಗಳು ಈ ಬಾರಿಯ ಪಟ್ಟಿಯಲ್ಲಿ ಸೇರಿವೆ. ಕೇಂದ್ರ ಸರ್ಕಾರ ಅನುಮೋದನೆ ನೀಡಿದಲ್ಲಿ ಅಲ್ಲಿ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಮಾಹಿತಿ ನೀಡಿದೆ.

    ಕಡಲ ತೀರಕ್ಕೆ ಪ್ರವಾಸಿಗರಿಗೆ ಮುಕ್ತ ಅವಕಾಶವಿದೆ. ಮುಂದಿನ ದಿನದಲ್ಲಿ ಶೌಚಗೃಹ ಬಳಕೆಗೆ ಶುಲ್ಕ ವಿಧಿಸುವ ಯೋಜನೆ ಹೊಂದಿದ್ದೇವೆ. ಅಲ್ಲಿ, ರೆಸ್ಟೋರೆಂಟ್, ವಾಟರ್ ಸ್ಪೋಟ್ಸ್ ಮುಂತಾದ ಚಟುವಟಿಕೆ ನಡೆಸಲು ಟೆಂಡರ್ ಕರೆಯಲಿದ್ದು, ಆ ತೀರದಿಂದ ಬಂದ ಆದಾಯದಿಂದಲೇ ಅದನ್ನು ನಿರ್ವಹಣೆ ಮಾಡುವ ಹಂತಕ್ಕೆ ತಲುಪಬೇಕಿದೆ.
    | ಪುರುಷೋತ್ತಮ ಪ್ರವಾಸೋದ್ಯಮ ಇಲಾಖೆ ಪ್ರಭಾರ ಉಪನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts