More

    ಇಎಸ್‌ಐ ಸಮಸ್ಯೆ ಕೇಳೋರೇ ಇಲ್ಲ!

    ಗಂಟೆಗಟ್ಟಲೆ ಕಾಯುವ ಕಾರ್ಮಿಕರು / ದಾಖಲಾತಿ ನಿರ್ವಹಣೆಗೆ ಸಿಬ್ಬಂದಿ ಕೊರತೆ
    ಅವಿನ್ ಶೆಟ್ಟಿ, ಉಡುಪಿ
    ಕಾರ್ಮಿಕರ ಆರೋಗ್ಯ ರಕ್ಷಣೆ, ಸುರಕ್ಷತೆಗಾಗಿ ಜಾರಿಗೆ ತಂದಿರುವ ಇಎಸ್‌ಐ ವ್ಯವಸ್ಥೆಯ ಆರೋಗ್ಯ ತೀವ್ರ ಹದಗೆಟ್ಟಿದೆ. ವೈದ್ಯರು, ಸಿಬ್ಬಂದಿ ಕೊರತೆ ಪರಿಣಾಮ ಒತ್ತಡದ ಕಾರ್ಯ ನಿರ್ವಹಣೆಯಿಂದಾಗಿ ಕರ್ತವ್ಯದಲ್ಲಿರುವ ಕನಿಷ್ಠ ಸಂಖ್ಯೆಯ ವೈದ್ಯರು, ಸಿಬ್ಬಂದಿ ಹೈರಾಣಾಗಿದ್ದಾರೆ. ಪರಿಣಾಮ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ವೈದ್ಯರು ಸಿಗುತ್ತಿಲ್ಲ, ದಾಖಲಾತಿ ಕೆಲಸ ಕಾರ್ಯಗಳಿಗೆ ಕಾರ್ಮಿಕರಿಗೆ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಇದೆ.

    ಮಂಗಳೂರಿನಲ್ಲಿ ಉತ್ತಮ ಮೂಲಸೌಕರ್ಯ ಹೊಂದಿರುವ ಇಎಸ್‌ಐ ಆಸ್ಪತ್ರೆ ಇದ್ದರೂ, ವೈದ್ಯರು, ಸಿಬ್ಬಂದಿಯ ಕೊರತೆ ಇದೆ. ದ.ಕ. ಜಿಲ್ಲೆಯ 9 ಚಿಕಿತ್ಸಾಲಯಗಳ ಅವಸ್ಥೆಯೂ ಇದೇ. ಉಡುಪಿ ಜಿಲ್ಲೆಯಲ್ಲಿ ಹಲವಾರು ವರ್ಷಗಳ ಬೇಡಿಕೆಯಾಗಿರುವ ಸುಸಜ್ಜಿತ ಇಎಸ್‌ಐ ಆಸ್ಪತ್ರೆ ಇನ್ನೂ ಈಡೇರಿಲ್ಲ. ಉಡುಪಿ, ಮಣಿಪಾಲ, ಕಾರ್ಕಳ, ಕುಂದಾಪುರದ ಚಿಕಿತ್ಸಾ ಕೇಂದ್ರಗಳಲ್ಲೂ ವೈದ್ಯರ ಕೊರತೆ ಇದೆ. ಎರಡು ಜಿಲ್ಲೆಗಳಲ್ಲಿ ಇಎಸ್‌ಐ ವೈದ್ಯರು, ನರ್ಸಿಂಗ್, ಫಾರ್ಮಾ, ಕ್ಲರಿಕಲ್ ಸಿಬ್ಬಂದಿ ಕೊರತೆ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದರೂ ಇಲ್ಲಿವರೆಗೆ ಸ್ಪಂದನೆ ದೊರೆತಿಲ್ಲ. ಸರ್ಕಾರ, ಜನಪ್ರತಿನಿಧಿಗಳು ಇಎಸ್‌ಐಗೆ ಕಾಯಕಲ್ಪ ನೀಡಲು ನಿರ್ಲಕ್ಷೃ ವಹಿಸಿದ್ದಾರೆ ಎನ್ನುವುದು ಕಾರ್ಮಿಕ ವರ್ಗದ ಅಳಲು.

    ಉಡುಪಿ-ಕುಂದಾಪುರಕ್ಕೆ ಒಬ್ರೇ ಡಾಕ್ಟರ್: ಉಡುಪಿ, ಕುಂದಾಪುರ ಇಎಸ್‌ಐ ಚಿಕಿತ್ಸಾ ಕೇಂದ್ರಗಳಲ್ಲಿ ಕಾಯಂ ಮತ್ತು ಗುತ್ತಿಗೆ ಸೇರಿ ಒಟ್ಟು 9 ವೈದ್ಯ ಹುದ್ದೆಗಳಿವೆ. ಇದರಲ್ಲಿ ನಾಲ್ವರು ವೈದ್ಯರು ಕರ್ತವ್ಯದಲ್ಲಿದ್ದರು. ಇತ್ತೀಚೆಗೆ ರಾಜ್ಯ ಸರ್ಕಾರ ಕೋವಿಡ್ ವೈದ್ಯಕೀಯ ಸಿಬ್ಬಂದಿಯ ನೇಮಕಾತಿಗೆ ಮುಂದಾದಾಗ, ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉಡುಪಿಯ ಇಬ್ಬರು, ಕುಂದಾಪುರದ ಒಬ್ಬರು ವೈದ್ಯರು ಇಎಸ್‌ಐನಿಂದ ನಿರ್ಗಮಿಸಿದ್ದಾರೆ. ಉಳಿದ ಓರ್ವ ಡಾಕ್ಟರ್ ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ಕುಂದಾಪುರದಲ್ಲಿ, ಮಧ್ಯಾಹ್ನದಿಂದ ಸಾಯಂಕಾಲವರೆಗೆ ಉಡುಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿತ್ಯ 70ರಿಂದ 80 ರೋಗಿಗಳ ಸಂದರ್ಶನ ಜತೆಗೆ ದಾಖಲಾತಿ ಕೆಲಸಗಳನ್ನು ಒಬ್ಬರೇ ನಿರ್ವಹಿಸಬೇಕು.

    ಮಣಿಪಾಲದಲ್ಲಿ ಎರಡು ಹುದ್ದೆಗಳಿದ್ದು, ಒಬ್ಬರು ವೈದ್ಯರು ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾರ್ಕಳದ ಮೂರು ಹುದ್ದೆಗಳಲ್ಲಿ ಎರಡು ಹುದ್ದೆ ಖಾಲಿ ಇದ್ದು, ಇರುವುದು ಒಬ್ಬ ವೈದ್ಯರು ಮಾತ್ರ. ದಾಖಲಾತಿ ನಿರ್ವಹಣೆ ಕೆಲಸಗಳು ಹೆಚ್ಚಿದ್ದು ಕ್ಲರಿಕಲ್ ಸಿಬ್ಬಂದಿ ಕೆಲಸವನ್ನೂ ನರ್ಸಿಂಗ್ ಸಿಬ್ಬಂದಿಯೇ ಮಾಡಬೇಕಿದೆ.

    ಮಂಗಳೂರಿನಲ್ಲಿ ತೀವ್ರ ಒತ್ತಡ: ಅತಿ ಹೆಚ್ಚು ಕಾರ್ಮಿಕ ವರ್ಗವಿರುವ ಮಂಗಳೂರಿನಲ್ಲಿ ಹಲವು ವರ್ಷಗಳಿಂದ ಇಎಸ್‌ಐ ಪರಿಸ್ಥಿತಿ ಗಂಭೀರವಾಗಿದೆ. ನಗರದ ಕದ್ರಿ ಇಎಸ್‌ಐ ಆಸ್ಪತ್ರೆಯಲ್ಲಿರುವ ವಿವಿಧ ವಿಭಾಗದ ವೈದ್ಯರ 28 ಹುದ್ದೆಗಳಲ್ಲಿ ಐವರು ವೈದ್ಯರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ನರ್ಸಿಂಗ್, ಇತರ ಸಿಬ್ಬಂದಿ ಶೇ.20 ಮಾತ್ರ ಭರ್ತಿ ಇದೆ.

    ಇಎಸ್‌ಐ ಸಂಬಂಧಿತ ವೈದ್ಯಕೀಯ, ರಜೆ ಭತ್ಯೆ ಸೌಲಭ್ಯ, ಇತರೆ ದಾಖಲಾತಿ ಪಡೆಯಲು ಕಾರ್ಮಿಕ ವರ್ಗಕ್ಕೂ ಸಮಸ್ಯೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತರೆಡೆ 9 ಇಎಸ್‌ಐ ಚಿಕಿತ್ಸಾಲಯಗಳಲ್ಲಿದ್ದು, ಇಲ್ಲಿಯೂ ವೈದ್ಯರು, ಸಿಬ್ಬಂದಿ ಕೊರತೆ ಇದೆ. ಮಂಗಳೂರು ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ಐವರು ವೈದ್ಯರಲ್ಲಿ ವಾರಕ್ಕೆ ಎರಡು ಸಲ ಇಬ್ಬರು ಇತರೆ ಚಿಕಿತ್ಸಾಲಯಗಳಿಗೆ ತೆರಳಿ ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ಇದೆ. ಈ ಎಲ್ಲ ಒತ್ತಡಗಳ ಮಧ್ಯೆ ಕೋವಿಡ್ ಕೇರ್ ಸೆಂಟರ್ ಆಗಿಯೂ ಇಎಸ್‌ಐ ಆಸ್ಪತ್ರೆ ಕಾರ್ಯನಿರ್ವಹಿಸಿದೆ.

    ಇಎಸ್‌ಐನಲ್ಲಿ ಕೋವಿಡ್ ಚಿಕಿತ್ಸೆ
    ಕೋವಿಡ್ ಮೊದಲ ಅಲೆಯಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಇದ್ದ ಕಾರಣ ಇಎಸ್‌ಐನಲ್ಲಿ ಚಿಕಿತ್ಸೆಗೆ ಅವಕಾಶ ಇರಲಿಲ್ಲ. ಎರಡನೇ ಅಲೆಯಲ್ಲಿ ಇಎಸ್‌ಐ ಹೊಂದಿರುವ ಕಾರ್ಮಿಕರು ಕೋವಿಡ್ ಸೋಂಕಿತರಾಗಿ ಗಂಭೀರವಾಗಿದ್ದವರಿಗೆ ಇಎಸ್‌ಐ ಅಡಿಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇಎಸ್‌ಐ ಪಟ್ಟಿಯಲ್ಲಿರುವ ಖಾಸಗಿ ಆಸ್ಪತ್ರೆಗಳಲ್ಲಿ ನೂರಾರು ಕಾರ್ಮಿಕರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಕೆಲವರು ಚಿಕಿತ್ಸೆಯಲ್ಲಿದ್ದಾರೆ.

    ಇಎಸ್‌ಐ ಚಿಕಿತ್ಸಾಲಯಗಳನ್ನು ಮೇಲ್ದರ್ಜೆಗೇರಿಸುವುದು ಮತ್ತು ಜಿಲ್ಲೆಗೊಂದು ಇಎಸ್‌ಐ ಆಸ್ಪತ್ರೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಯೋಜನೆ ರೂಪಿಸಲಿದೆ. ಈಗಿರುವ ವೈದ್ಯರು, ಸಿಬ್ಬಂದಿ ಕೊರತೆ ನೀಗಿಸಲು ಹಂತಹಂತವಾಗಿ ನೇಮಕಾತಿ ಪ್ರಕ್ರಿಯೆ ಸರ್ಕಾರ ನಡೆಸಲಿದೆ.
    ಶೋಭಾ ಕರಂದ್ಲಾಜೆ, ಉಡುಪಿ ಸಂಸದೆ

    ಇಎಸ್‌ಐ ಕ್ಲಿನಿಕ್ ಮೇಲ್ದರ್ಜೆ, ಆಸ್ಪತ್ರೆ ನಿರ್ಮಾಣಕ್ಕೆ ಶೀಘ್ರ ಕ್ರಮ ವಹಿಸಲಾಗುವುದು. ಇಎಸ್‌ಐ ವೈದ್ಯರ ಕೊರತೆ ನೀಗಿಸಲು ಕೆಪಿಎಸ್‌ಸಿ ಮೂಲಕ ಈಗಾಗಲೆ 167 ವೈದ್ಯರ ನೇಮಕ ಮಾಡಿಕೊಳ್ಳಲಾಗಿದ್ದು, ಈ ಪೈಕಿ 37 ವೈದ್ಯರು ಕರ್ತವ್ಯಕ್ಕೆ ಹಾಜರಾಗಿಲ್ಲ. 65 ವೈದ್ಯರನ್ನು ಕೋವಿಡ್ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಸೇವೆಗೆ ನಿಯೋಜಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆ, ಉಡುಪಿಗಳಲ್ಲಿ ಕೊರತೆ ಇರುವಲ್ಲಿ ವೈದ್ಯರನ್ನು ನಿಯೋಜಿಸಲಾಗುವುದು. ಮುಂದಿನ ಹಂತದಲ್ಲಿ ಮತ್ತೆ ವೈದ್ಯರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು. ಎಸ್‌ಡಿಎ, ಎಫ್‌ಡಿಎ ನೇಮಕಾತಿ ಪೂರ್ಣಗೊಂಡಿದ್ದು, ಶೀಘ್ರ ಕರ್ತವ್ಯಕ್ಕೆ ನಿಯೋಜನೆಗೊಳ್ಳಲಿದ್ದಾರೆ.

     ಶಿವರಾಮ್ ಹೆಬ್ಬಾರ್, ಕಾರ್ಮಿಕ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts