More

    ಇಂದು ಗೆಲುವಿನ ಸರದಾರರ ಹಣಾಹಣಿ ; ಆತ್ಮವಿಶ್ವಾಸದಲ್ಲಿ ಗುಜರಾತ್-ಸನ್‌ರೈಸರ್ಸ್‌

    ಮುಂಬೈ: ಗೆಲುವಿನ ನಾಗಾಲೋಟದಲ್ಲಿರುವ ನೂತನ ಫ್ರಾಂಚೈಸಿ ಗುಜರಾತ್ ಟೈಟಾನ್ಸ್ ಹಾಗೂ ಮಾಜಿ ಚಾಂಪಿಯನ್ ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ಐಪಿಎಲ್-15ರಲ್ಲಿ ಬುಧವಾರ ಮರುಮುಖಾಮುಖಿ ಆಗಲಿವೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಯಾವ ತಂಡದ ಗೆಲುವಿನ ಓಟಕ್ಕೆ ತಡೆ ಬೀಳಲಿದೆ ಎಂಬ ಕುತೂಹಲವಿದೆ. ಗುಜರಾತ್ ಟೈಟಾನ್ಸ್ ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ 6ರಲ್ಲಿ ಜಯ ದಾಖಲಿಸಿದ್ದು, ತನ್ನ ಕೊನೇ 3 ಪಂದ್ಯ ಗೆದ್ದು ಉತ್ತಮ ಲಯದಲ್ಲಿದೆ. ಮತ್ತೊಂದೆಡೆ, ಆರಂಭಿಕ 2 ಸೋಲಿನ ಬಳಿಕ ಪಂಚ ಗೆಲುವಿನ ಮಾಲೆ ಧರಿಸಿರುವ ಕೇನ್ ವಿಲಿಯಮ್ಸನ್ ಪಡೆ ಕೂಡ ಗೆಲುವಿನ ವಿಶ್ವಾಸದಲ್ಲಿದೆ. ಟೈಟಾನ್ಸ್ ಟೂರ್ನಿಯಲ್ಲಿ ಇದುವರೆಗೆ ಕಂಡಿರುವ ಏಕೈಕ ಸೋಲು ಸನ್‌ರೈಸರ್ಸ್‌ ವಿರುದ್ಧವೇ ಬಂದಿತ್ತು ಎಂಬುದು ಗಮನಾರ್ಹ. ಅದಕ್ಕೀಗ ಸೇಡು ತೀರಿಸಿಕೊಳ್ಳುವ ಅವಕಾಶ ಹಾರ್ದಿಕ್ ಪಾಂಡ್ಯ ಬಳಗದ ಎದುರು ಇದೆ. ಉಭಯ ತಂಡಗಳೂ ಬಲಿಷ್ಠ ಬೌಲಿಂಗ್ ವಿಭಾಗ ಹೊಂದಿದ್ದು, ಇದು ಬೌಲರ್‌ಗಳ ಕದನವಾದರೂ ಅಚ್ಚರಿಯಿಲ್ಲ.

    ಸ್ಪೀಡ್ ಬೌಲಿಂಗ್ ಸಮರ
    ಟೂರ್ನಿಯಲ್ಲಿ ಗಂಟೆಗೆ 150 ಕಿಲೋಮೀಟರ್ ವೇಗದ ಮಿಂಚಿನ ಎಸೆತಗಳ ಮೂಲಕ ಗಮನಸೆಳೆಯುತ್ತಿರುವ ಜಮ್ಮು-ಕಾಶ್ಮೀರದ ಯುವ ವೇಗಿ ಉಮ್ರಾನ್ ಮಲಿಕ್ ಮತ್ತು ನ್ಯೂಜಿಲೆಂಡ್ ವೇಗಿ ಲಾಕಿ ಫರ್ಗ್ಯುಸನ್ ಈ ಪಂದ್ಯದಲ್ಲಿ ಮುಖಾಮುಖಿ ಆಗಲಿದ್ದಾರೆ. ಹೀಗಾಗಿ ಪಂದ್ಯದ ಬಳಿಕ  ಫಾಸ್ಟೆಸ್ಟ್ ಡೆಲಿವರಿ ಆಫ್ ದಿ ಮ್ಯಾಚ್ ಪ್ರಶಸ್ತಿ ಯಾರಿಗೆ ಒಲಿಯಲಿದೆ ಎಂಬ ಕೌತುಕವಿದೆ. ಸನ್‌ರೈಸರ್ಸ್‌ನಲ್ಲಿ ಉಮ್ರಾನ್ ಜತೆಗೆ ಭುವನೇಶ್ವರ್, ಟಿ. ನಟರಾಜನ್, ಮಾರ್ಕೋ ಜಾನ್ಸೆನ್ ಅಪಾಯಕಾರಿ ವೇಗದ ಬೌಲಿಂಗ್ ವಿಭಾಗ ರಚಿಸಿದ್ದಾರೆ. ಟೈಟಾನ್ಸ್‌ನಲ್ಲಿ ಫರ್ಗ್ಯುಸನ್‌ಗೆ ಮೊಹಮದ್ ಶಮಿ, ಅಲ್ಜಾರಿ ಜೋಸೆಫ್, ಯುವ ವೇಗಿ ಯಶ್ ದಯಾಳ್ ಸಾಥ್ ನೀಡುತ್ತಿದ್ದಾರೆ.

    * ಸನ್‌ರೈಸರ್ಸ್‌ಗೆ ಬೌಲರ್‌ಗಳೇ ಶಕ್ತಿ
    ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ ಬೌಲರ್‌ಗಳು ಪ್ರಮುಖ ಅಸವಾಗಿದ್ದಾರೆ. ಮಾರ್ಕೋ ಜಾನ್ಸೆನ್, ಟಿ.ನಟರಾಜನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್ ಹಾಗೂ ಜೆ.ಸುಚಿತ್ ಒಳಗೊಂಡ ಬೌಲಿಂಗ್ ಪಡೆ ಬಲಿಷ್ಠವಾಗಿದೆ. ಆರ್‌ಸಿಬಿ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ ವಿಶ್ವಾಸದಲ್ಲಿರುವ ಸನ್‌ರೈಸರ್ಸ್‌ ತಂಡ ಸತತ 6ನೇ ಗೆಲುವಿನ ಕನಸಿನಲ್ಲಿದೆ. ಕೇನ್ ವಿಲಿಯಮ್ಸ್‌ನ ನಾಯಕತ್ವವೇ ತಂಡಕ್ಕೆ ಸ್ಫೂರ್ತಿಯಾಗಿದೆ. ಗಾಯಾಳು ವಾಷಿಂಗ್ಟನ್ ಸುಂದರ್ ಅವರ ಸ್ಥಾನವನ್ನು ಕನ್ನಡಿಗ ಜೆ.ಸುಚಿತ್ ಸಮರ್ಥವಾಗಿ ತುಂಬಿದ್ದಾರೆ. ಯುವ ಬ್ಯಾಟರ್ ಅಭಿಷೇಕ್ ಶರ್ಮ, ರಾಹುಲ್ ತ್ರಿಪಾಠಿ, ವಿಲಿಯಮ್ಸನ್, ಏಡನ್ ಮಾರ್ಕ್ರಮ್, ನಿಕೋಲಸ್ ಪೂರನ್ ಬ್ಯಾಟಿಂಗ್‌ನಲ್ಲಿ ಆಸರೆಯಾಗುತ್ತಿದ್ದಾರೆ.

    * ಸೇಡಿನ ತವಕದಲ್ಲಿ ಟೈಟಾನ್ಸ್
    ನಿರೀಕ್ಷೆಗೂ ಮೀರಿ ಯಶಸ್ಸಿನ ಹಾದಿಯಲ್ಲಿರುವ ಗುಜರಾತ್ ಟೈಟಾನ್ಸ್ ತಂಡಕ್ಕೆ ಸೇಡು ತೀರಿಸಿಕೊಳ್ಳುವ ಅವಕಾಶ ಒದಗಿ ಬಂದಿದೆ. ಮೊಹಮದ್ ಶಮಿ, ಲಾಕಿ ರ್ಗ್ಯುಸನ್, ರಶೀದ್ ಖಾನ್‌ರಂಥ ಬೌಲಿಂಗ್ ಬೌಲರ್‌ಗಳನ್ನು ಹೊಂದಿದೆ. ನಾಯಕ ಹಾರ್ದಿಕ್ ಪಾಂಡ್ಯ, ಆರಂಭಿಕ ಶುಭಮಾನ್ ಗಿಲ್, ಡೇವಿಡ್ ಮಿಲ್ಲರ್ ಭರ್ಜರಿ ಫಾರ್ಮ್‌ನಲ್ಲಿರುವುದು ತಂಡದ ಪ್ಲಸ್ ಪಾಯಿಂಟ್.

    ಟೀಮ್ ನ್ಯೂಸ್:
    ಗುಜರಾತ್ ಟೈಟಾನ್ಸ್: ಹ್ಯಾಟ್ರಿಕ್ ಗೆಲುವಿನ ಸಂಭ್ರಮದಲ್ಲಿರುವ ಟೈಟಾನ್ಸ್ ತಂಡದಲ್ಲಿ ಬದಲಾವಣೆ ನಿರೀಕ್ಷೆ ಇಲ್ಲ.
    ಸನ್‌ರೈಸರ್ಸ್‌: ಸತತ 5 ಗೆಲುವು ಕಂಡಿರುವ ಸನ್‌ರೈಸರ್ಸ್‌ ತಂಡ ಹಿಂದಿನ ಪಂದ್ಯದಲ್ಲಿ ಆಡಿದ ತಂಡವನ್ನೇ ಕಣಕ್ಕಿಳಿಸಬಹುದು. ಒಂದು ವೇಳೆ ವಾಷಿಂಗ್ಟನ್ ಸುಂದರ್ ಚೇತರಿಕೆ ಕಂಡರೆ ಕನ್ನಡಿಗ ಜೆ.ಸುಚಿತ್ ಹೊರಗುಳಿಯುವುದು ಅನಿವಾರ್ಯ.

    ಪಂದ್ಯ ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
    ಮುಖಾಮುಖಿ: 1, ಸನ್‌ರೈಸರ್ಸ್‌: 1, ಗುಜರಾತ್ ಟೈಟಾನ್ಸ್: 0
    ಹಿಂದಿನ ಹಣಾಹಣಿ: ಗುಜರಾತ್‌ಗೆ 8 ವಿಕೆಟ್ ಸೋಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts