More

    ಇಂದಿನಿಂದ ಭಾಗಶಃ ಬಸ್ ಆರಂಭ

    ಶಿವಮೊಗ್ಗ: ಲಾಕ್​ಡೌನ್ ನಡುವೆಯೂ ಜಿಲ್ಲೆಯ ತಾಲೂಕು ಕೇಂದ್ರಗಳಿಗೆ ಮಾತ್ರ ಮೇ 4ರಿಂದ ಭಾಗಶಃ ಕೆಎಸ್ಸಾರ್ಟಿಸಿ ಬಸ್​ಗಳು ಸಂಚರಿಸಲಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

    ಈಗಾಗಲೇ ರಾಜ್ಯ ಸರ್ಕಾರ ಸೂಚನೆ ಹೊರಡಿಸಿದ್ದು, ಶಿವಮೊಗ್ಗ ಡಿಪೋದಿಂದ ಜಿಲ್ಲೆಯ ತಾಲೂಕು ಕೇಂದ್ರಗಳಿಗೆ ಹಾಗೂ ಅಲ್ಲಿಂದ ಜಿಲ್ಲಾ ಕೇಂದ್ರಕ್ಕೆ ಬಸ್ ಸಂಪರ್ಕ ಕಲ್ಪಿಸಲಾಗುತ್ತಿದೆ. ಪ್ರತಿ ಬಸ್​ನಲ್ಲಿ 30 ಜನರಿಗೆ ಅವಕಾಶ ನೀಡಲಾಗುವುದು ಎಂದು ಶಿವಮೊಗ್ಗ ಕೆಎಸ್ಸಾರ್ಟಿಸಿ ಡಿಸಿ ಟಿ.ಆರ್.ನವೀನ್​ಕುಮಾರ್ ಸ್ಪಷ್ಟಪಡಿಸಿದರು.

    ಬೆಳಗ್ಗೆ 7ರಿಂದ ಶಿವಮೊಗ್ಗದ ಬಸ್ ನಿಲ್ದಾಣದಿಂದ ತೀರ್ಥಹಳ್ಳಿ, ಸಾಗರ, ಹೊಸನಗರ, ಶಿಕಾರಿಪುರ, ಸೊರಬ ಹಾಗೂ ಭದ್ರಾವತಿ ನಿಲ್ದಾಣಗಳಿಗೆ ಬಸ್​ಗಳು ಸಂಚರಿಸಲಿವೆ. ಜನರ ಬೇಡಿಕೆ ಮೇರೆಗೆ ಬಸ್​ಗಳು ಆಯಾ ತಾಲೂಕುಗಳಿಗೆ ಓಡಾಡಲಿವೆ. ಲಾಕ್​ಡೌನ್ ಹಿನ್ನೆಲೆಯಲ್ಲಿ 40 ದಿನಗಳವರೆಗೆ ನಿಗಮದ ಬಸ್​ಗಳು ಸಂಚಾರ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ನಿಗದಿತ ಸಮಯದಲ್ಲಿ ತಾಲೂಕುಗಳಿಗೆ ಮಾತ್ರ ಸಂಚರಿಸಲಿವೆ ಎಂದರು.

    ಸಾಮಾಜಿಕ ಅಂತರ ಕಡ್ಡಾಯ: ಕರೊನಾ ಹಿನ್ನೆಲೆಯಲ್ಲಿ ಪ್ರಯಾಣಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಿದೆ. ಫುಟ್​ಬೋರ್ಡ್ ಮೇಲೆ ನಿಂತು ಹೋಗುತ್ತಿದ್ದ ಹಿಂದಿನ ದಿನಗಳಂತೆ ಸಂಚರಿಸದೆ 50 ಜನ ಕುಳಿತುಕೊಳ್ಳುವ ಸಾಮರ್ಥ್ಯವಿರುವ ಬಸ್​ಗಳಲ್ಲಿ 25ರಿಂದ 30 ಪ್ರಯಾಣಿಕರು ತೆರಳಬಹುದು. ಪ್ರಾಯೋಗಿಕ ಹಂತವಾಗಿ ಬಸ್​ಗಳನ್ನು ಬಿಡಲಾಗುತ್ತಿದ್ದು, ಶಿವಮೊಗ್ಗ ಕೇಂದ್ರ ಸ್ಥಾನದಿಂದ ಬೆಳಗ್ಗೆ 7ರಿಂದ 10 ಹಾಗೂ ಸಂಜೆ 4ರಿಂದ 7ರವರೆಗೆ ನಿಗದಿತ ಸಮಯದಲ್ಲಿ ಮಾತ್ರ ಬಸ್​ಗಳು ಸಂಚರಿಸಲಿವೆ. ಈಗಾಗಲೇ ಬಸ್ ನಿಲ್ದಾಣಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕ್ ಕೂಡ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಬಸ್​ಗಳಿಗೆ ಕ್ರಿಮಿನಾಶಕ ಸಿಂಪಡಿಸಲಾಗಿದೆ ಎಂದರು.

    ಬಸ್ ಶುಲ್ಕದಲ್ಲಿ ವ್ಯತ್ಯಯವಿಲ್ಲ: ಪ್ರಯಾಣಿಕರು ಹೇಗೆ ಮತ್ತು ಯಾವ ಕಡೆ ಹೆಚ್ಚು ಬರುತ್ತಾರೆ ಎಂಬುದನ್ನು ನೋಡಿಕೊಂಡು ಬಸ್ ಸಂಚರಿಸಲಿವೆ. ಕೇಂದ್ರ ಸ್ಥಾನದಿಂದ ಬೆಳಗ್ಗೆ 7ಕ್ಕೆ ಬಸ್​ಗಳು ಹೊರಡಲಿದ್ದು, ದೂರದ ತಾಲೂಕಿಗೆ ಮಧ್ಯಾಹ್ನ 1 ಗಂಟೆವರೆಗೂ ಅವಕಾಶ ಕಲ್ಪಿಸಲಾಗುತ್ತಿದೆ. ಬಸ್ ಶುಲ್ಕದಲ್ಲಿ ಯಾವುದೇ ವ್ಯತ್ಯಾಸವಿಲ್ಲ.

    ಖಾಸಗಿ ಬಸ್​ಗಳ ಸಂಚಾರವಿಲ್ಲ: ತಾತ್ಕಲಿಕವಾಗಿ ಕೆಎಸ್ಸಾರ್ಟಿಸಿ ಬಸ್​ಗಳಿಗೆ ಮಾತ್ರ ಸರ್ಕಾರದ ನಿರ್ದೇಶನ ಬಂದಿದ್ದು, ಯಾವುದೇ ಖಾಸಗಿ ಬಸ್​ಗಳು ಲಾಕ್​ಡೌನ್ ಮುಗಿಯುವವರೆಗೂ ಸಂಚರಿಸುವುದಿಲ್ಲ. ಸರ್ಕಾರದಿಂದ ಅನುಮತಿ ಸಿಕ್ಕ ಬಳಿಕವಷ್ಟೇ ಖಾಸಗಿ ಬಸ್​ಗಳು, ಟ್ಯಾಕ್ಸಿ, ಟಿಟಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವುದಾಗಿ ಶಿವಮೊಗ್ಗ ಆರ್​ಟಿಒ ಎಲ್.ದೀಪಕ್ ಸ್ಪಷ್ಟಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts