More

    ಆಹಾರಧಾನ್ಯ ವಿತರಣೆಯಲ್ಲಿ ಶೇ.60 ಸಾಧನೆ

    ಕೋಲಾರ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಭೌತಿಕ ತರಗತಿ ನಡೆಯದ ಕಾರಣದಿಂದ ಸರ್ಕಾರ ಮಧ್ಯಾಹ್ನದ ಉಪಾಹಾರ ಯೋಜನೆಯಡಿ ಮಕ್ಕಳಿಗೆ ಆಹಾರ ಧಾನ್ಯ ವಿತರಿಸುತ್ತಿದ್ದು, ಜಿಲ್ಲೆಯಲ್ಲಿ ಕಳೆದ ಶೈಕ್ಷಣಿಕ ವರ್ಷದ ಬಾಕಿ 132 ದಿನಗಳ ಪಡಿತರ ವಿತರಣೆಯಲ್ಲಿ ಶೇ.60 ಗುರಿ ಸಾಧನೆಯಾದರೆ, ಈ ಸಾಲಿನ ಜೂನ್ ಮತ್ತು ಜುಲೈ ತಿಂಗಳ ಹಾಲಿನ ಪುಡಿ ಮಕ್ಕಳ ಕೈ ಸೇರಬೇಕಿದೆ.

    ರಾಷ್ಟ್ರೀಯ ಕಾರ್ಯಕ್ರಮದಡಿ ಸರ್ಕಾರ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೊಳಿಸಿದೆ. 2020-21ನೇ ಸಾಲಿನ ಶೈಕ್ಷಣಿಕ ವರ್ಷ ಕರೊನಾ ಹಿನ್ನೆಲೆಯಲ್ಲಿ ಭೌತಿಕ ತರಗತಿ ನಡೆಯದ ಕಾರಣದಿಂದ ಸರ್ಕಾರ ಸಾರ್ವತ್ರಿಕ ರಜಾ ದಿನ ಹೊರತುಪಡಿಸಿ ಉಳಿದ ದಿನಗಳಿಗೆ ಆಹಾರ ಧಾನ್ಯ ವಿತರಣೆಗೆ ಮುಂದಾಗಿತ್ತು.

    ಅದರಂತೆ ಕಳೆದ ಸಾಲಿನ ಜೂನ್‌ನಿಂದ ಅಕ್ಟೋಬರ್‌ವರೆಗೆ 108 ದಿನಗಳಿಗೆ ನವೆಂಬರ್ ತಿಂಗಳಲ್ಲಿ ಮಕ್ಕಳಿಗೆ ಆಹಾರ ಧಾನ್ಯ ವಿತರಿಸಿದೆ. ನವೆಂಬರ್‌ನಿಂದ ಏಪ್ರಿಲ್‌ವರೆಗಿನ 132 ದಿನಗಳಿಗೆ ವಿತರಣೆ ನಡೆಯಬೇಕಿದೆ. 2021-22ನೇ ಶೈಕ್ಷಣಿಕ ವರ್ಷ ಆರಂಭವಾಗಿದೆ, ತರಗತಿಗೆ ಮಕ್ಕಳ ಭೌತಿಕ ಹಾಜರಾತಿ ಸಾಧ್ಯವಾಗಿಲ್ಲ. ಆದರೆ ಹಿಂದಿನ ಸಾಲಿನ ಬಾಕಿ ವಿತರಣೆಯೇ ಪೂರ್ಣಗೊಂಡಿಲ್ಲ.

    ಮಕ್ಕಳ ಸಂಖ್ಯೆ ಎಷ್ಟು?: ಜಿಲ್ಲೆಯಲ್ಲಿ 1ರಿಂದ 5ನೇ ತರಗತಿಯ 50,991 ಮಕ್ಕಳು, 6ರಿಂದ 8ನೇ ತರಗತಿಯ 35,078 ಮಕ್ಕಳು ಹಾಗೂ 9ರಿಂದ 10ನೇ ತರಗತಿಯ 24340 ಸೇರಿ ಒಟ್ಟು 1,10,409 ಮಕ್ಕಳಿದ್ದಾರೆ. 1ರಿಂದ 5ರವರೆಗೆ ವಾರದ 5 ದಿನ ಅಕ್ಕಿ, ಒಂದು ದಿನ ಗೋಧಿಯಂತೆ ಪ್ರತಿದಿನ 100 ಗ್ರಾಂ ಹಾಗೂ 6ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ 150 ಗ್ರಾಂ ಆಹಾರ ಧಾನ್ಯ ನಿಗದಿಪಡಿಸಲಾಗಿದ್ದು. ಅವಶ್ಯವಿರುವಷ್ಟು ಅಕ್ಕಿ, ಗೋಧಿ ಸರಬರಾಜಾಗಿದೆ. ಪರಿವರ್ತನಾ ವೆಚ್ಚದಡಿ 132 ದಿನಗಳಿಗೆ ಪ್ರತಿ ಮಗುವಿಗೆ ತಲಾ 1 ಕೆಜಿ ಉಪ್ಪು ಹಾಗೂ 2 ಕೆಜಿ ಎಣ್ಣೆ ನೀಡಲಾಗಿದೆ.

    ತೊಗರಿ ಬೇಳೆ ಬಾಕಿ: ಜಿಲ್ಲೆಗೆ ಕೆಎಸ್‌ಎಫ್‌ಸಿಯಿಂದ 3034 ಕ್ವಿಂಟಾಲ್ ತೊಗರಿ ಸರಬರಾಜಾಗಿದ್ದು, ಇನ್ನೂ 2726 ಕ್ವಿಂಟಾಲ್ ಬರಬೇಕಿದೆ. ಶ್ರೀನಿವಾಸಪುರ ತಾಲೂಕು ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿನ ಮಕ್ಕಳಿಗೆ ತೊಗರಿಬೇಳೆ ವಿತರಣೆಯಾಗಿಲ್ಲ. ಒಟ್ಟಾರೆ ಕಳೆದ ಶೈಕ್ಷಣಿಕ ವರ್ಷದ 132 ದಿನಗಳ ಆಹಾರ ಧಾನ್ಯ ವಿತರಣೆಯಲ್ಲಿ ಶೇ.60 ಸಾಧನೆಯಾಗಿದ್ದು, ಇನ್ನೂ ಶೇ.40 ಗುರಿ ಸಾಧನೆ ಬಾಕಿ ಇದೆ.

    ಹಾಲಿನ ಪುಡಿಗೆ ಬೇಡಿಕೆ ಸಲ್ಲಿಕೆ: ಕೋವಿಡ್‌ನಿಂದ ಶಾಲಾ ಮಕ್ಕಳಿಗೆ ಹಾಲಿನ ಪುಡಿ ವಿತರಣೆ ಸಾಧ್ಯವಾಗಿಲ್ಲ. ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮನವಿಗೆ ಸ್ಪಂದಿಸಿದ ಸಿಎಂ ಯಡಿಯೂರಪ್ಪ ಜೂನ್, ಜುಲೈಗೆ ಪ್ರತಿ ತಿಂಗಳು ಅರ್ಧ ಕೆಜಿಯಂತೆ ಹಾಲಿನ ಪುಡಿ ವಿತರಣೆಗೆ ಸಮ್ಮತಿಸಿದ್ದರು. ಹೀಗಾಗಿ ಮಕ್ಕಳಿಗೆ ಕ್ಷೀರ ಭಾಗ್ಯವೂ ಇಷ್ಟರಲ್ಲೇ ದಕ್ಕಲಿದ್ದು, ಜಿಲ್ಲೆಗೆ ಅವಶ್ಯವಿರುವ ಹಾಲಿನ ಪುಡಿಗೆ ಕೆಎಂಎಫ್‌ಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ತಿಮ್ಮರಾಯಪ್ಪ ತಿಳಿಸಿದ್ದಾರೆ.

    ಕಳೆದ ಸಾಲಿನ ಬಾಕಿ ಇರುವ 132 ದಿನಗಳ ಆಹಾರಧಾನ್ಯ ವಿತರಣೆಯಲ್ಲಿ ಸ್ಯಾಟ್ಸ್ ಮಾಹಿತಿಯಂತೆ ಶೇ.60 ಸಾಧನೆ ಆಗಿದೆ. ಕೆಎಫ್‌ಸಿಎಸ್‌ಸಿಯಿಂದ ತೊಗರಿ ಬೇಳೆ ಪೂರೈಕೆಯಲ್ಲಿನ ವಿಳಂಬದಿಂದ ಶ್ರೀನಿವಾಸಪುರ ಹೊರತುಪಡಿಸಿ ಉಳಿದ ತಾಲೂಕಿನಲ್ಲಿ ತೊಗರಿ ವಿತರಣೆ ಬಾಕಿಯಿದೆ. ಹಾಲಿನ ಪುಡಿ ವಾರದೊಳಗೆ ಸರಬರಾಜಾಗುವ ನಿರೀಕ್ಷೆಯಿದೆ. ಈ ವರ್ಷದ ಶೈಕ್ಷಣಿಕ ಸಾಲಿನ ಅಕ್ಕಿ, ಗೋಧಿ ದಾಸ್ತಾನಿದ್ದು, ವಿತರಣೆಗೆ ಸರ್ಕಾರದ ಆದೇಶಕ್ಕೆ ಕಾಯುತ್ತಿದ್ದೇವೆ.
    ತಿಮ್ಮರಾಯಪ್ಪ, ಸಹಾಯಕ ನಿರ್ದೇಶಕ, ಬಿಸಿಯೂಟ ಯೋಜನೆ, ಕೋಲಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts