More

    ಆಸ್ಪತ್ರೆಗೆ ಭೇಟಿ: ಹಲ್ಲೆಗೊಳಗಾದ ಬಜರಂಗ ದಳ ಕಾರ್ಯಕರ್ತ ಸುನಿಲ್ ಆರೋಗ್ಯ ವಿಚಾರಿಸಿದ ಈಶ್ವರಪ್ಪ

    ಭದ್ರಾವತಿ: ಫ್ಲೆಕ್ಸ್ ತೆರವು ಪ್ರಕರಣದಲ್ಲಿ ಬಂಧಿತ ಆಸೀಫ್ ಎಸ್‌ಡಿಪಿಐ ಸದಸ್ಯ. ಆತನ ಪತ್ನಿ ನಗರಪಾಲಿಕೆ ಸದಸ್ಯೆ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ. ಆತನ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹೇಳಲಿಲ್ಲ. ಬದಲಾಗಿ ಗೃಹಮಂತ್ರಿಗಳ ವೈಫಲ್ಯ ಎಂದು ಸುಲಭವಾಗಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.
    ಮಂಗಳವಾರ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಜರಂಗದಳ ಕಾರ್ಯಕರ್ತ ಸುನಿಲ್ ಆರೋಗ್ಯ ವಿಚಾರಿಸಿ ಮಾತನಾಡಿದ ಅವರು, ಮುಸಲ್ಮಾನರ ವೋಟು ಬಿಟ್ಟರೆ ಕಾಂಗ್ರೆಸ್‌ಗೆ ಬೇರೆ ಲೆಕ್ಕವೇ ಇಲ್ಲ ಅವರಿಗೆ. ಮುಸ್ಲಿಮರು ಇರುವ ಜಾಗದಲ್ಲಿ ಸಾವರ್ಕರ್ ಫೋಟೋ ಯಾಕೆ ಹಾಕಿದರು ಎಂದು ಸಿದ್ದರಾಮಯ್ಯ ಅಮೃತವಚನ ನುಡಿದಿದ್ದಾರೆ ಎಂದು ಹರಿಹಾಯ್ದರು.
    ಸಾವರ್ಕರ್ ಅವರ ಫ್ಲೆಕ್ಸ್ ತೆರವು ಮಾಡಿದ್ದ ಮುಸ್ಲಿಂ ಯುವಕರು ಹಾಗೂ ಹಿಂದೂ ಯುವಕರನ್ನು ಕರೆಸಿ ಪೊಲೀಸರು ಬುದ್ಧಿವಂತಿಕೆಯಿಂದ ಪರಿಸ್ಥಿತಿ ತಿಳಿಗೊಳಿಸಿದ್ದರು. ಆದರೆ 144 ಸೆಕ್ಷನ್ ಹಾಕಿದ್ದ ಸಂದರ್ಭ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರೇಮ್ ಸಿಂಗ್ ಹಾಗೂ ಶರವಣ ಮನೆಗೆ ಹೋಗುವ ಸಂದರ್ಭ ಕೊಲೆ ಯತ್ನ ನಡೆಸಿದ್ದು ಅಕ್ಷಮ್ಯ ಅಪರಾಧ ಎಂದರು.
    ಇಡೀ ಭಾರತ ಭಾರತೀಯರದು. ಮಹಾಪುರುಷರ ಫೋಟೋ ಎಲ್ಲಿ ಬೇಕಾದರೂ ಹಾಕುತ್ತೇವೆ. ರಾಷ್ಟ್ರದ್ರೋಹಿ ಹೇಳಿಕೆ ನೀಡಿರುವವರ ಕೈಯಲ್ಲಿ ಇಂದು ಕಾಂಗ್ರೆಸ್ ಸಿಕ್ಕಿದೆ. ಇಂತಹ ಹೇಳಿಕೆಯನ್ನು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಖಂಡನೆ ಮಾಡಬೇಕು. ಸಿದ್ದರಾಮಯ್ಯ ಅವರನ್ನು ಪಕ್ಷದಿಂದ ಹೊರಹಾಕಬೇಕು ಎಂದು ಒತ್ತಾಯಿಸಿದರು.
    ತಿಹಾರ್ ಜೈಲಿಗೆ ಹೋದಂತಹ ಡಿ.ಕೆ.ಶಿವಕುಮಾರ್, ಪರಪ್ಪನ ಅಗ್ರಹಾರಕ್ಕೆ ಹೋದಂತಹ ಮಹಮದ್ ನಲಪಾಡ್, ಮುಸಲ್ಮಾನರಿರುವ ಜಾಗದಲ್ಲಿ ಯಾಕೆ ಸಾವರ್ಕರ್ ಫೋಟೋ ಹಾಕಿದಿರಿ ಎನ್ನುವ ಸಿದ್ದರಾಮಯ್ಯ ಅವರಂತಹ ರಾಷ್ಟ್ರದ್ರೋಹಿಗಳ ಕೈಯಲ್ಲಿ ಇಂದು ಕಾಂಗ್ರೆಸ್ ಪಕ್ಷ ಇದೆ. ಗೂಂಡಾಗಳ ಬಗ್ಗೆ ಮುಸ್ಲಿಂ ಸಮಾಜದ ಹಿರಿಯರು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಅನುಭವಿಸುತ್ತಾರೆ. ಹಿಂದುಗಳು ದುರ್ಬಲರಲ್ಲ ಎಂದು ಎಚ್ಚರಿಸಿದರು.
    ಉತ್ತಮ ಚಿಕಿತ್ಸೆ ನೀಡಿ: ನಿಮ್ಮಲ್ಲಿ ಸೌಲಭ್ಯಗಳಿದ್ದರೆ ಸುನಿಲ್‌ಗೆ ಉತ್ತಮ ಚಿಕಿತ್ಸೆ ನೀಡಿ. ಇಲ್ಲದಿದ್ದರೆ ಜಿಲ್ಲಾಸ್ಪತ್ರೆ ಅಥವಾ ಬೆಂಗಳೂರಿಗೆ ಶಿಫಾರಸು ಮಾಡಿ ಎಂದು ಆಸ್ಪತ್ರೆ ವೈದ್ಯರಿಗೆ ತಿಳಿಸಲಾಗಿದೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು. ಮುಬಾರಕ್ ಕೂಡ ಗೂಂಡಾ. ಕೆಲವೇ ದಿನಗಳ ಹಿಂದೆ ಜೈಲಿನಿಂದ ಬಂದಿದ್ದ ಎಂದು ತಿಳಿದುಬಂದಿದೆ. ಗೂಂಡಾಗಿರಿ ಹಿಂದೆ ಯಾರ‌್ಯಾರು ಇದ್ದಾರೆ ಎಂಬುದು ತನಿಖೆಯಿಂದ ತಿಳಿಯಲಿದೆ. ಭದ್ರಾವತಿಯಲ್ಲಿರುವ ಪ್ರಮುಖರು ರಕ್ಷಣೆ ಕೊಡುತ್ತಿದ್ದಾರಾ? ಅಥವಾ ದೇಶದ್ರೋಹಿ ಸಂಘಟನೆಯಲ್ಲಿ ಆತ ತೊಡಗಿಸಿಕೊಂಡಿದ್ದನಾ ಎಂಬುದನ್ನು ಪರಿಶೀಲಿಸಬೇಕಿದೆ. ಇಂತಹ ಗೂಂಡಾಗಳನ್ನು ಮಟ್ಟಹಾಕುವ ಕಾರ್ಯ ನಡೆಯಲಿದೆ. ಮುಖ್ಯಮಂತ್ರಿಗಳೊಂದಿಗೂ ಇದರ ಬಗ್ಗೆ ಚರ್ಚಿಸಿದ್ದೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts