More

    ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ, ಮೂಲ ಸೌಕರ್ಯ ಒದಗಿಸಲು ಕ್ರಮ

    ಚಿಕ್ಕಬಳ್ಳಾಪುರ: ಜಿಲ್ಲೆಯ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದರ ಜತೆಗೆ ಮೂಲಸೌಕರ್ಯ ಒದಗಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದರು.

    ಜಿಪಂ ಸಂಭಾಂಗಣದಲ್ಲಿ ಬುಧವಾರ ಜಿಲ್ಲಾ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ಮತ್ತು ಕರೊನಾ ನಿಯಂತ್ರಣ ಕ್ರಮದ ಸಭೆಯಲ್ಲಿ ಮಾತನಾಡಿದರು.ಬಯಲುಸೀಮೆ ಜಿಲ್ಲೆಯ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಸಿಬ್ಬಂದಿ ಕೊರತೆ ತೊಡಕಾಗಿದೆ. ಹಲವು ಆಸ್ಪತ್ರೆಗಳು ಮೂಲಸೌಕರ್ಯಗಳ ನಿರೀಕ್ಷೆಯಲ್ಲಿವೆ. ಇದಕ್ಕೆ ಖಾಲಿ ಇರುವ ವೈದ್ಯರು, ತಾಂತ್ರಿಕ ಸಿಬ್ಬಂದಿ ಭರ್ತಿ ಸೇರಿ ಪ್ರಮುಖ ಬೇಡಿಕೆಗಳನ್ನು ತಕ್ಷಣ ಈಡೇರಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

    ಈ ಭಾಗದಲ್ಲಿ ಕರೊನಾ ತಡೆಗೆ ಮುಂಜಾಗ್ರತಾ ಕ್ರಮಗಳನ್ನು ಸಮರ್ಪಕವಾಗಿ ಜಾರಿಗೆ ತರಲಾಗುತ್ತಿದೆ. ಸಾಂಕ್ರಾಮಿಕ ರೋಗವು ಹಲವು ರಾಷ್ಟ್ರಗಳನ್ನು ಬಾಧಿಸುತ್ತಿವೆ. ಇದರ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು, ಆಗ ಮಾತ್ರ ಸೋಂಕಿನ ನಿಯಂತ್ರಣ ಸಾಧ್ಯ ಎಂದರು.

    ಕೇಂದ್ರ ಸರ್ಕಾರವು ರಾಜ್ಯಕ್ಕೆ ತ್ವರಿತವಾಗಿ ಅಗತ್ಯ ವೆಂಟಿಲೇಟರ್‌ಗಳನ್ನು ಪೂರೈಸುವ ಭರವಸೆ ನೀಡಿದೆ. ಇವುಗಳನ್ನು ಸೋಂಕಿತರ ಸಂಖ್ಯೆಗೆ ಅನುಗುಣವಾಗಿ ಜಿಲ್ಲೆಗಳಿಗೆ ನೀಡಲಾಗುತ್ತದೆ ಎಂದರು.

    ಜಿಪಂ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಸಿಇಒ ಬಿ.ಫೌಜೀಯಾ ತರನ್ನುಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಅಪರ ಜಿಲ್ಲಾಧಿಕಾರಿ ಆರತಿ ಆನಂದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಬಿ.ಎಂ. ಯೋಗೇಶ್‌ಗೌಡ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರಮೇಶ್ ಮತ್ತಿತರರು ಇದ್ದರು.

    ಜಿಲ್ಲೆಗೆ ಸುಸಜ್ಜಿತ ಪ್ರಯೋಗಾಲಯ: ತ್ವರಿತವಾಗಿ ಸೋಂಕು ಪತ್ತೆ ಹಚ್ಚಿ, ಸೂಕ್ತ ಚಿಕಿತ್ಸೆ ನೀಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಬೆಂಗಳೂರಿನಲ್ಲಿ ಲ್ಯಾಬ್‌ಗಳ ಹೆಚ್ಚಳ ಮತ್ತು ಪ್ರತಿ ಜಿಲ್ಲೆಯಲ್ಲಿ ಒಂದು ಪ್ರಯೋಗಾಲಯ ಸ್ಥಾಪನೆಯಾಗಲಿದೆ, ಅದರಂತೆ ತ್ವರಿತವಾಗಿ ಸೋಂಕು ಪತ್ತೆಗಾಗಿ ಜಿಲ್ಲೆಯಲ್ಲಿ ಎರಡ್ಮೂರು ದಿನಗಳಲ್ಲಿ ಸುಸಜ್ಜಿತ ಪ್ರಯೋಗಾಲಯ ಪ್ರಾರಂಭಿಸುವುದಾಗಿ ಸಚಿವ ಬಿ.ಶ್ರೀರಾಮುಲು ಭರವಸೆಯಿತ್ತರು.

    ಗೈರು ಭಿನ್ನಮತವಲ್ಲ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕರೊನಾ ಹೆಚ್ಚಾಗುತ್ತಿದೆ. ಇದೇ ವೇಳೆ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಬೇಕಾದ ಶಾಸಕರು ಸಭೆಯಲ್ಲಿ ಭಾಗವಹಿಸಿರಲಿಲ್ಲ. ತುರ್ತಾಗಿ ಸಭೆ ದಿನ ನಿಗದಿಯೇ ಗೈರಿಗೆ ಕಾರಣ ಎಂಬ ಮಾತು ಕೇಳಿ ಬಂದಿದೆ.
    ಮತ್ತೊಂದೆಡೆ ಸಭೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಗೈರಾಗಿರುವ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ನಮ್ಮಲ್ಲಿ ಭಿನ್ನಮತವಿಲ್ಲ, ಕೆಲವರು ಸೃಷ್ಟಿಸಿರುವ ಸತ್ಯವಿಲ್ಲದ ಮಾತುಗಳು. ನಾವೆಲ್ಲರೂ ಒಂದಾಗಿದ್ದೇವೆ, ಸುಧಾಕರ್ ವೈದ್ಯರ ದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಿಂದ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎಂದರು.

    10 ಸಾವಿರ ಬೆಡ್‌ಗಳ ವ್ಯವಸ್ಥೆ: ಜಿಲ್ಲೆಯಲ್ಲಿ ಕರೊನಾ ತಡೆಗೆ ಮುಂಜಾಗ್ರತಾ ಕ್ರಮವಾಗಿ 10 ಸಾವಿರ ಬೆಡ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ 31 ಕ್ವಾರಂಟೈನ್ ಸೆಂಟರ್‌ಗಳಲ್ಲಿ 5,164 ಹಾಸಿಗೆಗಳನ್ನು ಸಿದ್ಧಗೊಳಿಸಲಾಗಿದೆ. 36 ಸಭಾಭವನ ಮತ್ತು 10 ಯಾತ್ರಿ ನಿವಾಸಗಳಲ್ಲಿ 4,594 ಹಾಸಿಗೆಗಳು, 50 ಹಾಸಿಗೆಗಳುಳ್ಳ ಒಂದು ಖಾಸಗಿ ಆಸ್ಪತ್ರೆಯನ್ನು ಕ್ವಾರಂಟೈನ್ ಸೆಂಟರ್‌ಗೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts