More

    ಆರ್ಯವೈಶ್ಯರಿಗೆ ಶಿಕ್ಷಣಕ್ಕಾಗಿ ಅರಿವು ಸಾಲ

    ಶಿವಮೊಗ್ಗ: ಆರ್ಯವೈಶ್ಯ ಸಮುದಾಯದ 18ರಿಂದ 35 ವರ್ಷದೊಳಗಿನವರ ಶಿಕ್ಷಣಕ್ಕಾಗಿ ಅರಿವು ಸಾಲದ ಯೋಜನೆ ಹಾಗೂ ಆರ್ಯವೈಶ್ಯ ಸಮಾಜದವರ ವೃತ್ತಿಗೆ ಪೂರಕವಾಗಿ ಉದ್ಯೋಗ ಸಾಲ ಯೋಜನೆಯನ್ನು ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ಜಾರಿಗೆ ತರಲಾಗಿದೆ ಎಂದು ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್ ತಿಳಿಸಿದರು.

    ಅರಿವು ಶೈಕ್ಷಣಿಕ ಸಾಲ ಯೋಜನೆ ಮೂಲಕ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಮುಂತಾದ ವೃತ್ತಿಪರ ಕೋರ್ಸ್​ಗಳು ಹಾಗೂ ಸ್ನಾತಕೋತ್ತರ ಕೋರ್ಸ್ ವ್ಯಾಸಂಗ ಮಾಡುವವರಿಗೆ ಶೇ.2ರ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಈ ಯೋಜನೆಯ ಪ್ರಯೋಜನ ಪಡೆಯುವ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ವರಮಾನ 6 ಲಕ್ಷ ರೂ. ಮೀರಿರಬಾರದು. ಫಲಾನುಭವಿಗಳ ಆಯ್ಕೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡಲಾಗುವುದು. ಈ ಯೋಜನೆಯಡಿ ಪಡೆದ ಸಾಲವನ್ನು ವ್ಯಾಸಂಗ ಪೂರ್ಣಗೊಂಡ 4ನೇ ತಿಂಗಳಿನಿಂದ 3 ವರ್ಷಗಳ ಅವಧಿಯಲ್ಲಿ ಕಂತಿನ ಮೂಲಕ ಪಾವತಿಸಬೇಕು ಎಂದರು.

    ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ವೈಶ್ಯ ಸಮುದಾಯಕ್ಕೆ ಸೇರಿದ ಅರ್ಜಿದಾರರು ಸ್ವಯಂ ಉದ್ಯೋಗ ಕೈಗೊಳ್ಳಲು ಗರಿಷ್ಟ ಒಂದು ಲಕ್ಷ ರೂ. ಆರ್ಥಿಕ ನೆರವು ಒದಗಿಸಲಾಗುವುದು. ಸಾಂಪ್ರದಾಯಿಕ ವೃತ್ತಿಗಳಲ್ಲದೆ ಹಸು ಸಾಕಣೆ, ಸೇವಾ ಚಟುವಟಿಕೆಗಳಿಗೆ ಸಹ ಈ ನೆರವು ಬಳಸಿಕೊಳ್ಳಬಹುದು ಎಂದರು.

    ಈ ಯೋಜನೆಯಡಿ ಕನಿಷ್ಠ 50 ಸಾವಿರ ರೂ. ನೆರವು ಒದಗಿಸಲಾಗುವುದು. ಈ ಮೊತ್ತದಲ್ಲಿ ಶೇ.20 ಸಹಾಯಧನವಾಗಿ ಉಳಿದ ಮೊತ್ತವನ್ನು ಸಾಲದ ರೂಪದಲ್ಲಿ ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ನೀಡಲಾಗುವುದು. ಅರ್ಜಿದಾರರ ವಾರ್ಷಿಕ ವರಮಾನ 3 ಲಕ್ಷ ರೂ. ಮೀರಿರಬಾರದು. ಅರ್ಜಿದಾರರು 18 ರಿಂದ 45 ವರ್ಷದೊಳಗಿನವರಾಗಿರಬೇಕು ಎಂದು ಮಾಹಿತಿ ನೀಡಿದರು.

    20 ಕೋಟಿ ರೂ. ಬಜೆಟ್: ಹಿಂದಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಅಸ್ತಿತ್ವಕ್ಕೆ ಬಂದ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮಕ್ಕೆ 10 ಕೋಟಿ ರೂ. ಅನುದಾನ ನೀಡಲಾಗಿತ್ತು. ಮುಂದಿನ ಬಜೆಟ್​ನಲ್ಲಿ 20 ಕೋಟಿ ರೂ. ಅನುದಾನ ನೀಡುವಂತೆ ಸಿಎಂಗೆ ಮನವಿ ಮಾಡಲಾಗಿದೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅರುಣ್ ಹೇಳಿದರು.

    ಪರಿಸರ ಸ್ನೇಹಿ ಕಾಗದ: ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ಪರಿಸರಕ್ಕೆ ಪೂರಕವಾದ ವಸ್ತುಗಳ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಿಗಮದ ಕರಪತ್ರಗಳನ್ನು ಪರಿಸರ ಸ್ನೇಹಿಯಾಗಿ ರೂಪಿಸಲಾಗಿದೆ. ಇವುಗಳಲ್ಲಿ ಹೂವು ಹಾಗೂ ತುಳಸಿ ಬೀಜ ಬಳಸಲಾಗಿದೆ. ಇದು ಮಣ್ಣಿಗೆ ಸೇರಿದರೆ ಕಾಗದ ಮಣ್ಣಿನಲ್ಲಿ ಕರಗಿ ಗಿಡಗಳು ಹುಟ್ಟುತ್ತವೆ ಎಂದು ಡಿ.ಎಸ್.ಅರುಣ್ ತಿಳಿಸಿದರು.

    ಜಾತಿ ಪ್ರಮಾಣ ಪತ್ರದ ಗೊಂದಲ ಪರಿಹಾರ: ಇದುವರೆಗೆ ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ 18 ವರ್ಷದೊಳಗಿನ ಆರ್ಯ ವೈಶ್ಯ ಸಮುದಾಯದ ವಿದ್ಯಾರ್ಥಿಗಳಿಗೆ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿತ್ತು. ನಿಗಮದಿಂದ ಪ್ರಯೋಜನ ಪಡೆಯಲು ಇದು ತೊಡಕಾಗಿತ್ತು. ಸರ್ಕಾರದ ಮಟ್ಟದಲ್ಲಿ ನಿರಂತರವಾಗಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೂಲಕ ಸಕಾಲ ಯೋಜನೆಯಡಿ ನಿಗದಿತ ಸಮಯದಲ್ಲಿ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ ಎಂದು ಡಿ.ಎಸ್.ಅರುಣ್ ಹೇಳಿದರು. ಮಾರ್ಚ್ ಅಂತ್ಯದೊಳಗೆ ಹೆಚ್ಚಿನ ಅರ್ಜಿಗಳನ್ನು ಆನ್​ಲೈನ್ ಮೂಲಕ ಸ್ವೀಕರಿಸಿ ನಿಗಮದ ಪ್ರಯೋಜನ ಹೆಚ್ಚಿನ ಜನರಿಗೆ ತಲುಪಿಸುವುದು ನನ್ನ ಮುಖ್ಯ ಉದ್ದೇಶ ಎಂದರು.

    ಆರ್ಯ ವೈಶ್ಯ ಸಮುದಾಯದ ಪ್ರಮುಖರಾದ ಎಸ್.ಕೆ. ಶೇಷಾಚಲ, ಡಿ.ಎಂ.ಅರವಿಂದ್, ಕಾಸಲ್ ಸುರೇಂದ್ರ, ಅಶ್ವತ್ಥ ನಾರಾಯಣ, ಎಂ.ಮುರಳಿ, ಭೂಪಾಳಂ ಶಶಿಧರ್, ಡಿ.ಆರ್.ಅಮರ್​ನಾಥ್, ವೆಂಕಟಸುಬ್ಬಯ್ಯ ಶೆಟ್ಟಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts