More

    ರಾಜಕೀಯ ವೃತ್ತಿಗಿಂತ ವ್ರತವಾಗಬೇಕು

    ಚಿಕ್ಕಮಗಳೂರು: ರಾಜಕೀಯವನ್ನು ವೃತ್ತಿ ಮಾಡಿಕೊಳ್ಳುವುದಕ್ಕಿಂತ ವ್ರತವನ್ನಾಗಿ ಮಾಡಿಕೊಳ್ಳಬೇಕಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್, ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.

    ನಗರದ ಕಲ್ಯಾಣ ನಗರದ ದೀಪಕ್ ದೊಡ್ಡಯ್ಯ ಅವರ ನಿವಾಸದಲ್ಲಿ ಭಾನುವಾರ ರಾತ್ರಿ ಚುನಾವಣಾ ಪ್ರಚಾರ ಸಂಬಂಧ ಏರ್ಪಡಿಸಿದ್ದ ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾರೆಲ್ಲಾ ರಾಜಕೀಯವನ್ನು ವ್ರತವನ್ನಾಗಿ ಮಾಡಿಕೊಳ್ಳುತ್ತಾರೋ ಅವರು ರಾಜಕೀಯ ಮತ್ಸದ್ದಿಯಾಗುತ್ತಾರೆ. ರಾಜಕೀಯವನ್ನು ವೃತ್ತಿ ಮಾಡಿಕೊಳ್ಳುವವರು ರಾಜಕಾರಣಿಗಳಾಗಿ ಮಾತ್ರ ಉಳಿಯುತ್ತಾರೆ ಎಂದು ವಿಶ್ಲೇಷಿಸಿದರು.
    ಸಮಾಜದ ಉನ್ನತೀಕರಣ, ರಾಜಕೀಯ ಶುದ್ಧೀಕರಣ ಹಾಗೂ ದೇಶದ ಅಭಿವೃದ್ಧಿ ಸರಿಯಾದ ದಿಕ್ಕಿನಲ್ಲಿ ನಡೆಯಬೇಕಾದರೆ ಈ ಸಮಾಜದ ಸಜ್ಜನರು ಪ್ರಮುಖ ಪಾತ್ರ ವಹಿಸಬೇಕು. ದುರ್ಜನರು ದುಷ್ಟ ಕಾರ್ಯಗಳನ್ನು ಮಾಡುತ್ತಿರುವಾಗ ಸಜ್ಜನರು ಮೌನ ವಹಿಸಿದರೆ ದುರ್ಜನರ ಕೈ ಮೇಲಾಗುತ್ತದೆ ಎಂದು ಎಚ್ಚರಿಸಿದರು.
    ಈ ಸಮಾಜದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಸಾಕಷ್ಟು ಅಭಿವೃದ್ಧಿ ಸಾಧಿಸಬೇಕಿದೆ. ಇವುಗಳನ್ನು ಮುಂದಿನ ದಿನಗಳಲ್ಲಿ ಆದ್ಯತೆ ಮೇಲೆ ಮುಂದುವರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದ ಅವರು, ಶೈಕ್ಷಣಿಕ, ಸಾಂಸ್ಕೃತಿಕ, ಆರ್ಥಿಕವಾಗಿ ಈ ದೇಶ ಬಹಳ ಎತ್ತರಕ್ಕೆ ಬೆಳೆದಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ಕಾರಣದಿಂದಾಗಿ ಎಂದು ಬಣ್ಣಿಸಿದರು.
    ಪ್ರಪಂಚದಲ್ಲಿ ಭಾರತ ಹೊಸ ದಿಕ್ಕಿನೊಂದಿಗೆ ತಲೆಯೆತ್ತಿ ನಿಂತಿದೆ. ಇನ್ನೂ ಸಾಕಷ್ಟು ಕಾರ್ಯಗಳಾಗಬೇಕಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಒಂದು ಮಾದರಿ ಕ್ಷೇತ್ರವಾಗಬೇಕು. ಇಲ್ಲಿರುವ ರೈತರ ಸಮಸ್ಯೆಗಳಿಗೆ ಧ್ವನಿಯಾಗಬೇಕು. ರಸ್ತೆ ಅಭಿವೃದ್ಧಿ ಹೆಚ್ಚಾಗಿ ನಡೆಯಬೇಕಾದರೆ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.
    ಶೈಕ್ಷಣಿಕವಾಗಿ ಈ ಕ್ಷೇತ್ರ ಉನ್ನತ ಸ್ಥಾನವನ್ನು ಗಳಿಸಬೇಕು, ವಿಶೇಷವಾಗಿ ಕೇಂದ್ರ ಸರ್ಕಾರದಿಂದ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುವ ಬಗ್ಗೆ ಆಲೋಚನೆ ಮಾಡಿದ್ದೇನೆ. ಈ ಕ್ಷೇತ್ರದ ಎಲ್ಲ ಗಣ್ಯರ, ವಿದ್ಯಾವಂತರ, ತಜ್ಞರ ಸಲಹೆ ಪಡೆದು ನನ್ನ ಕಾರ್ಯಗಳನ್ನು ಮುಂದುವರಿಸುತ್ತೇನೆ ಎಂದು ಭರವಸೆ ನೀಡಿದರು.
    ಪ್ರತಿ ೬ ತಿಂಗಳಿಗೊಮ್ಮೆ ಸಮಾಜ ಚಿಂತಕರ, ಬುದ್ಧಿಜೀವಿಗಳ, ತಜ್ಞರ ಸಭೆ ಕರೆದು ಚರ್ಚಿಸಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು. ಅವರ ಸಲಹೆ ಸೂಚನೆಗಳನ್ನು ಹೇಗೆ ಕಾರ್ಯರೂಪಕ್ಕೆ ತರಲು ಸಾಧ್ಯವಿದೆ ಎಂಬ ಬಗ್ಗೆ ಪ್ರಾಮಾಣಿಕ ಕೆಲಸ ಮಾಡಲು ಬದ್ಧನಾಗಿದ್ದೇನೆ ಎಂದು ಹೇಳಿದರು.
    ಸಂವಾದ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ, ನಗರಾಧ್ಯಕ್ಷ ಪುಷ್ಟರಾಜ್, ನಿಕಟ ಪೂರ್ವ ಅಧ್ಯಕ್ಷ ಎಚ್.ಸಿ ಕಲ್ಮರುಡಪ್ಪ, ಪ್ರಮುಖರಾದ ಡಾ. ಜೆ.ಪಿ.ಕೃಷ್ಣೇಗೌಡ, ದಿನೇಶ್ ಪಟೇಲ್, ಎಂ.ಎನ್.ಷಡಾಕ್ಷರಿ, ಡಾ. ಸಿ.ಕೆ ಸುಬ್ರಾಯ, ದೀಪಕ್ ದೊಡ್ಡಯ್ಯ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts