More

    ಆರ್ಥಿಕ ವಿಕೇಂದ್ರೀಕರಣಕ್ಕೆ ಬಿಜೆಪಿ ಆದ್ಯತೆ

    ಹಾವೇರಿ: ಲೋಕಸಭೆ, ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯು ಕಾಂಗ್ರೆಸ್ ಮುಕ್ತವಾಗಿದೆ. ಜಿಲ್ಲೆಯ ಪ್ರತಿಯೊಂದು ಗ್ರಾಪಂಗಳಲ್ಲಿಯೂ ಕಾಂಗ್ರೆಸ್​ವುುಕ್ತ ಆಡಳಿತ ಬರುವಂತೆ ಸಂಕಲ್ಪ ತೊಡಿ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಕಾರ್ಯಕರ್ತರಿಗೆ ಸೂಚಿಸಿದರು.

    ನಗರದ ಶಿವಬಸವೇಶ್ವರ ಕಲ್ಯಾಣಮಂಟಪದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಗ್ರಾಮ ಸ್ವರಾಜ್ಯ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಬಿಜೆಪಿಯು ಗ್ರಾಮೀಣಾಭಿವೃದ್ಧಿಗೆ ಬದ್ಧವಾಗಿ ಕೆಲಸ ಮಾಡುತ್ತಿದೆ. ಕೇಂದ್ರ ಹಾಗೂ ರಾಜ್ಯದ ಯೋಜನೆಗಳನ್ನು ನೇರವಾಗಿ ತಳಮಟ್ಟಕ್ಕೆ ತಲುಪಿಸಲು ಗ್ರಾಪಂ ಆಡಳಿತ ನಮ್ಮ ವಶದಲ್ಲಿರುವುದು ಅವಶ್ಯವಾಗಿದೆ. ನಿಮ್ಮನ್ನು ನಾಯಕರನ್ನಾಗಿಸಲು ಗ್ರಾಪಂ ಚುನಾವಣೆಯಲ್ಲಿ ನಾವು ನಿಮ್ಮ ಜೊತೆಗಿದ್ದೇವೆ. ನಿಮ್ಮ ಪರವಾಗಿ ನಿಂತು ಕೆಲಸ ಮಾಡುತ್ತೇವೆ. ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿಯೂ ಕಾಂಗ್ರೆಸ್ ಮುಕ್ತ ಮಾಡಬೇಕು ಎಂದರು.

    ಗ್ರಾಪಂ ಸದಸ್ಯರಾಗುವುದು ಎಂದರೆ ಗ್ರಾಮದ ಹಿರಿತನ ಮಾಡಲು ಆಯ್ಕೆಯಾದಂತೆ. ಗ್ರಾಮದ ಅಭಿವೃದ್ಧಿ, ಶಾಂತಿ, ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ನೀಡುವ ಜವಾಬ್ದಾರಿ ನಿಮ್ಮ ಮೇಲಿದೆ. ಅಧಿಕಾರ ವಿಕೇಂದ್ರೀಕರಣದ ಮೂಲ ಉದ್ದೇಶ ನಮ್ಮ ಆಡಳಿತ ನಮ್ಮ ಕೈಯಲ್ಲಿ ಎಂಬುದಾಗಿದೆ. ಈವರೆಗೂ ಅಧಿಕಾರ ವಿಕೇಂದ್ರೀಕರಣವಾಗಿದೆ ಹೊರತು ಆರ್ಥಿಕ ವಿಕೇಂದ್ರೀಕರಣ ಇನ್ನೂ ಪೂರ್ಣಪ್ರಮಾಣದಲ್ಲಿ ಆಗಿಲ್ಲ. ಇದನ್ನು ಮಾಡಲು ಬಿಜೆಪಿಯಿಂದ ಮಾತ್ರ ಸಾಧ್ಯ. ಗ್ರಾಪಂಗಳಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಮಹಿಳಾ ಸದಸ್ಯರು ಆಯ್ಕೆಯಾಗಬೇಕು. ಈ ಮೂಲಕ ವಿಧಾನಸಭೆ, ಲೋಕಸಭೆಯಲ್ಲಿಯೂ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸಬೇಕು ಎಂಬ ಬೇಡಿಕೆಗೆ ಮತ್ತಷ್ಟು ಬಲ ಬರಲಿದೆ. ಇದರೊಂದಿಗೆ ರಾಜಕೀಯದಲ್ಲಿಯೂ ಬಹುದೊಡ್ಡ ಬದಲಾವಣೆಯನ್ನು ತರಬಹುದಾಗಿದೆ ಎಂದರು.

    ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಹೆಚ್ಚಿನ ಸ್ಥಾನಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಬೇಕು. ಕೇಂದ್ರ ಸರ್ಕಾರ ರೈತರಿಗಾಗಿ ಆತ್ಮನಿರ್ಭರ ಯೋಜನೆಯಲ್ಲಿ 1 ಲಕ್ಷ ಕೋಟಿ ರೂ. ಕೊಟ್ಟಿದೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ನನ್ನ ಬೆಳೆ ನನ್ನ ಹಕ್ಕು ಎಂಬ ಬಲವನ್ನು ರೈತರಿಗೆ ನೀಡಿದೆ ಎಂದರು.

    ಸಚಿವ ಸಿ.ಸಿ. ಪಾಟೀಲ ಮಾತನಾಡಿ, ಕಾರ್ಯಕರ್ತರ ಪರಿಶ್ರಮದಿಂದಲೇ ನಮಗೆ ಅಧಿಕಾರ, ಸ್ಥಾನಮಾನ ಸಿಕ್ಕಿದೆ. ಈಗ ಕಾರ್ಯಕರ್ತರನ್ನೂ ಗೆಲ್ಲಿಸಲು ನಾವು ಶ್ರಮಿಸುತ್ತೇವೆ. ನೀವು ನಮ್ಮ ಚುನಾವಣೆಗೆ ದುಡಿದಂತೆಯೇ ನಾವು ದುಡಿದು ನಿಮ್ಮನ್ನು ಗೆಲ್ಲಿಸುತ್ತೇವೆ. ಅಭ್ಯರ್ಥಿಗಳ ಆಯ್ಕೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಸಂಬಂಧಿಕರು, ಜಾತಿ ಆಧಾರದಲ್ಲಿ ಹೆಚ್ಚು ಮಣೆ ಹಾಕದೆ, ಗ್ರಾಮ ಮಟ್ಟದಲ್ಲಿ ಪಕ್ಷ ಸಂಘಟಿಸುವವರು, ಅಭಿವೃದ್ಧಿಗೆ ಶ್ರಮಿಸುವವರಿಗೆ ಆದ್ಯತೆ ನೀಡಬೇಕು ಎಂದರು.

    ಕೇಂದ್ರ, ರಾಜ್ಯ ಸರ್ಕಾರದಲ್ಲಿ ನಮ್ಮದೇ ಸರ್ಕಾರವಿದೆ. ಗ್ರಾಪಂನಲ್ಲೂ ನಮ್ಮ ಕಾರ್ಯಕರ್ತರೇ ಗೆದ್ದರೆ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವ ಅನುಕೂಲವಾಗಲಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

    ಸಚಿವ ಶಿವರಾಂ ಹೆಬ್ಬಾರ ಮಾತನಾಡಿ, ಕಾರ್ಯಕರ್ತರನ್ನು ಗೆಲ್ಲಿಸಲು ನಾವು ಈಗಾಗಲೇ ಕಾರ್ಯತಂತ್ರ ರೂಪಿಸಿದ್ದೇವೆ. ಮುಂದೆ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗುವ ವಿಧಾನ ಪರಿಷತ್ ಸದಸ್ಯರಾಯ್ಕೆಯಲ್ಲಿ ನಿಮ್ಮ ಪಾತ್ರ ಮುಖ್ಯವಾಗಲಿದೆ. ವಿಧಾನಪರಿಷತ್​ನಲ್ಲಿ ನಮಗೆ ಬಹುಮತ ಸಿಗಲು ಇದು ಅನುಕೂಲವಾಗಲಿದೆ ಎಂದರು.

    ಶಾಸಕ ನೆಹರು ಓಲೇಕಾರ ಮಾತನಾಡಿ, ಗ್ರಾಪಂ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಗೆದ್ದು ಬಿಜೆಪಿ ಬಾವುಟ ಹಾರಿಸಬೇಕಿದೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಹೆಚ್ಚಿನ ಅನುದಾನ ಕೊಟ್ಟಿದೆ. ಈಗ ಪ್ರತಿ ಗ್ರಾಪಂಗೆ 40 ಮನೆಗಳನ್ನು ಸರ್ಕಾರ ಹಂಚಿಕೆ ಮಾಡಿದೆ ಎಂದರು.

    ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಅಧ್ಯಕ್ಷತೆ ವಹಿಸಿದ್ದರು. ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಮುಖಂಡರಾದ ಶಿವರಾಜ ಸಜ್ಜನರ, ಡಾ. ಸಂದೀಪ, ಲಿಂಗರಾಜ ಪಾಟೀಲ, ಕಲ್ಲೇಶ, ಹೇಮಲತಾ ನಾಯ್ಕ ಇತರರಿದ್ದರು. ಶಶಿಧರ ಹೊಸಳ್ಳಿ ನಿರೂಪಿಸಿದರು. ಬಸವರಾಜ ಕಳಸೂರ ವಂದಿಸಿದರು.

    ಜಾಗರೂಕತೆಯಿಂದ ಅಭ್ಯರ್ಥಿ ಆಯ್ಕೆ ಮಾಡಿ

    ಗ್ರಾಪಂನಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಜಾಗರೂಕತೆಯಿಂದ ಆಯ್ಕೆ ಮಾಡಿ. ನೀವು ಅಣ್ಣನನ್ನು ಕಣಕ್ಕಿಳಿಸಿದರೆ ಕಾಂಗ್ರೆಸ್​ನವರ ತಮ್ಮನನ್ನು ಅಭ್ಯರ್ಥಿ ಮಾಡುತ್ತಾರೆ. ನೀವು ಮಾವನ ಆಯ್ಕೆ ಮಾಡಿದರೆ, ಅವರು ಅಳಿಯನಿಗೆ ಗಾಳ ಹಾಕುತ್ತಾರೆ. ಹೀಗಾಗಿ ಜನಪರ, ಅಭಿವೃದ್ಧಿ ಪರವಾಗಿರುವವನ್ನು ಆಯ್ಕೆಗೊಳಿಸಿ ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

    ನೀವು ಎಂಪಿಗಳೇ…

    ನಾನು ಮೆಂಬರ್ ಆಫ್ ಪಾರ್ಲಿಮೆಂಟ್ ಆದ್ರೆ ನೀವು ಮೆಂಬರ್ ಆಫ್ ಪಂಚಾಯಿತಿ. ಹೀಗಾಗಿ, ನೀವು ಗ್ರಾಪಂಗಳಿಗೆ ಎಂಪಿಗಳಿದ್ದಂತೆ. ನನ್ನ ಚುನಾವಣೆಗಿಂತಲೂ ನಿಮ್ಮ ಚುನಾವಣೆ ತುರುಸಿನಿಂದ ಕೂಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮೀಣಾಭಿವೃದ್ಧಿಗೆ ನೀಡಿರುವ ಯೋಜನೆಗಳನ್ನು ಜನರಿಗೆ ತಿಳಿಸಿ ಮತ ಗಳಿಸಿ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts