More

    ಆರ್ಥಿಕ ನೆರವು ಕಲ್ಪಿಸಲು ಮನವಿ

    ಬ್ಯಾಡಗಿ: ಲಾಕ್​ಡೌನ್ ಹಿನ್ನೆಲೆಯಲ್ಲಿ ಎಲ್ಲ ದೇವಸ್ಥಾನಗಳನ್ನು ಬಂದ್ ಮಾಡಿದ್ದು, ಪೌರೋಹಿತ್ಯದ ಮೂಲಕ ಜೀವನ ಸಾಗಿಸುತ್ತಿರುವ ಜಂಗಮ ಅರ್ಚಕರ ಕುಟಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಕೂಡಲೆ ಸರ್ಕಾರ ನೆರವು ಒದಗಿಸಬೇಕು ಎಂದು ಸ್ಥಳೀಯ ಅರ್ಚಕರು ತಹಸೀಲ್ದಾರ್ ಶರಣಮ್ಮ ಕಾರಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

    ಸಾಯಿ ಮಂದಿರದ ಅರ್ಚಕ ಮಂಜಯ್ಯಸ್ವಾಮಿ ಹಿರೇಮಠ ಮಾತನಾಡಿ, ಹತ್ತಾರು ವರ್ಷಗಳಿಂದ ಪೌರೋಹಿತ್ಯ ವೃತ್ತಿಯಲ್ಲಿ ತೊಡಗಿರುವ ನಾವು, ಭಕ್ತರು ಸೇವಾರ್ಥವಾಗಿ ನೀಡಿದ ದವಸ-ಧಾನ್ಯ ಪಡೆದು ಜೀವನ ನಡೆಸುತ್ತಿದ್ದೇವೆ. ಎಲ್ಲ ಅರ್ಚಕರಿಗೆ ಸರ್ಕಾರ ವೇತನ ನೀಡುತ್ತಿಲ್ಲ. ಇದರಿಂದ ಬಹುತೇಕರು ಆರ್ಥಿಕ ದುಸ್ಥಿತಿಗೆ ಸಿಲುಕಿದ್ದು, ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಸಂಕಷ್ಟದಲ್ಲಿರುವ ಅರ್ಚಕರಿಗೂ ಸರ್ಕಾರ ಪ್ಯಾಕೇಜ್ ಘೊಷಿಸಲಿ ಎಂದರು.

    ಮನವಿ ಸ್ವೀಕರಿಸಿದ ತಹಸೀಲ್ದಾರ್ ಶರಣಮ್ಮ ಕಾರಿ, ಬೇಡಿಕೆಗಳ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಫೌಂಡೇಷನ್ ಅಧ್ಯಕ್ಷ ಗಿರೀಶಸ್ವಾಮಿ ಸಿ. ಇಂಡಿಮಠ, ಸದಸ್ಯರಾದ ಮಹೇಶ ಹಿರೇಮಠ, ಚನ್ನವೀರಯ್ಯ ಹಿರೇಮಠ, ಕುಮಾರಸ್ವಾಮಿ ಹಿರೇಮಠ, ರುದ್ರಯ್ಯ ಹಿರೇಮಠ, ಅರುಣಕುಮಾರ ಹಿರೇಮಠ, ಜಗದೀಶಯ್ಯ ಚರಂತಿಮಠ, ವೀರಯ್ಯ ಮಠದ, ನಾಗಯ್ಯ ಹಿರೇಮಠ, ಕರಬಸಯ್ಯ ಹಾಲಪ್ಪಗೌಡ್ರ, ರುದ್ರಪ್ಪಯ್ಯ ಆರ್. ಮಳೇಮಠ ಇದ್ದರು.

    ಆಶಾ ಕಾರ್ಯಕರ್ತೆಯರಿಗೆ ಪ್ಯಾಕೇಜ್ ಘೊಷಿಸಲು ಒತ್ತಾಯ

    ರಾಜ್ಯಾದ್ಯಂತ ಕರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಮೊದಲ ಸಾಲಿನ ಸೇನಾನಿಗಳೆಂದು (ಫ್ರಂಟ್ ಲೈನ್ ವಾರಿಯರ್ಸ್) ಪ್ರಸಿದ್ಧಿಯಾಗಿರುವ ಆಶಾ ಕಾರ್ಯಕರ್ತೆಯರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಘೋಷಿಸಿದ ವಿಶೇಷ ಪ್ಯಾಕೇಜ್​ನಲ್ಲಿ ಯಾವುದೇ ಸಹಾಯಧನ ಸಿಗದಿರುವುದು ಬೇಸರ ತಂದಿದೆ ಎಂದು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಂಚಾಲಕ ಗಂಗಾಧರ ಬಡಿಗೇರ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕರೊನಾ ಕುರಿತು ಅರಿವು ಮೂಡಿಸುತ್ತಿರುವ ಮತ್ತು ವಿವಿಧೆಡೆಯಿಂದ ಬಂದ ಜನರ ಸಮೀಕ್ಷೆಯನ್ನು ಅವಿರತವಾಗಿ ಆಶಾ ಕಾರ್ಯಕರ್ತೆಯರು ಮಾಡುತ್ತಿದ್ದಾರೆ. ಅಪಾಯಕಾರಿ ಸಮಯದಲ್ಲಿಯೂ ಆಶಾ ಕಾರ್ಯಕರ್ತೆಯರು ಉತ್ತಮವಾಗಿ ಕಾರ್ಯನಿರ್ವಹಿಸುತ್ತ ರೋಗ ಹರಡುವಿಕೆ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹಲವಾರು ಜಿಲ್ಲೆಗಳಲ್ಲಿ ಆರೋಗ್ಯ ರಕ್ಷಣೆಗೆ ಅಗತ್ಯವಿರುವಷ್ಟು ಮಾಸ್ಕ್ ಮತ್ತು ಸ್ಯಾನಿಟೈಸರ್​ಗಳನ್ನು ಒದಗಿಸದಿದ್ದರೂ ಕಾರ್ಯನಿರ್ವಹಿಸುತ್ತಿದ್ದಾರೆ. ಆರ್ಥಿಕವಾಗಿ ಆಶಾ ಕಾರ್ಯಕರ್ತೆಯರೂ ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಕೂಡಲೇ ಮಾಸಿಕ 10 ಸಾವಿರ ರೂ.ಗಳಂತೆ ಮಾರ್ಚ್ ತಿಂಗಳಿಂದ ವಿಶೇಷ ಪ್ಯಾಕೇಜ್ ಘೊಷಿಸಬೇಕು ಎಂದು ಸಿಎಂ ಅವರಿಗೆ ಒತ್ತಾಯಿಸಿದ್ದಾರೆ.

    ಸಿಐಟಿಯು ಆಗ್ರಹ

    ಕರೊನಾ ಲಾಕ್​ಡೌನ್​ನಿಂದ ಸಂಕಷ್ಟದಲ್ಲಿರುವ ವಿವಿಧ ವೃತ್ತಿಯವರಿಗೆ ಮುಖ್ಯಮಂತ್ರಿಗಳು ಪ್ಯಾಕೇಜ್ ಘೊಷಣೆ ಮಾಡಿದ್ದು, ಇದನ್ನು ಎಲ್ಲ ಅಸಂಘಟಿತ ಕಾರ್ವಿುಕರಿಗೆ ನೀಡಬೇಕು ಎಂದು ಸಿಐಟಿಯು ಒತ್ತಾಯಿಸಿದೆ. ರಾಜ್ಯದ ಬೀಡಿ ಕಾರ್ವಿುಕರು, ಹಮಾಲರು, ಬೀದಿಬದಿ ವ್ಯಾಪಾರಸ್ಥರು, ಮನೆಗೆಲಸದವರು, ಬಸ್, ಟ್ರಕ್ ಚಾಲಕರು, ಟೈಲರ್​ಗಳು, ಮೆಕ್ಯಾನಿಕ್​ಗಳು, ಚಿಂದಿ ಆಯುವವರು ಹೀಗೆ ಅಸಂಖ್ಯಾತ ಅಸಂಘಟಿತ ಕಾರ್ವಿುಕರಿಗೂ ಈ ಪರಿಹಾರದ ಪ್ಯಾಕೇಜ್ ವಿಸ್ತರಿಸಬೇಕು. ಈಗಾಗಲೇ ಸಿಐಟಿಯು ರಾಜ್ಯ ಸಮಿತಿ ಹಾಗೂ ವಿವಿಧ ರಂಗದ, ವಲಯದ ಸಂಘಟನೆಗಳು ಪರಿಹಾರ ಕೋರಿ ಮುಖ್ಯಮಂತ್ರಿಗೆ, ಕಾರ್ವಿುಕ ಸಚಿವರಿಗೆ ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಹಲವಾರು ಮನವಿ ಪತ್ರಗಳಗಳನ್ನು ಸಲ್ಲಿಸಿದ್ದು, ಇವುಗಳನ್ನು ಪರಿಗಣಿಸಬೇಕು ಎಂದು ಸಂಘಟನೆ ಜಿಲ್ಲಾ ಸಂಚಾಲಕ ವಿನಾಯಕ ಕುರುಬರ ಮನವಿ ಮಾಡಿದ್ದಾರೆ.

    ಹಮಾಲಿ ಕಾರ್ವಿುಕರ ಕೋರಿಕೆ

    ಹಮಾಲಿ ಕಾರ್ವಿುಕರಿಗೂ ಆರ್ಥಿಕ ನೆರವು ನೀಡುವಂತೆ ಕರ್ನಾಟಕ ರಾಜ್ಯ ಹಮಾಲಿ ಕಾರ್ವಿುಕರ ಫೆಡರೇಷನ್ ಪದಾಧಿಕಾರಿಗಳು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. ನಿತ್ಯದ ದುಡಿಮೆಯಿಂದಲೇ ಜೀವನ ನಿರ್ವಹಿಸುತ್ತಿರುವ ಹಮಾಲಿ ಕಾರ್ವಿುಕರ ಬದುಕು ತೀರಾ ದುಸ್ತರವಾಗಿದೆ. ವ್ಯಾಪಾರ-ವಹಿವಾಟು ಸ್ಥಗಿತಗೊಂಡಿದ್ದರಿಂದಾಗಿ ಗೋದಾಮುಗಳು ಬಾಗಿಲು ಮುಚ್ಚಿವೆ. ಇದರಿಂದ ಶ್ರಮಜೀವಿಗಳು ಉದ್ಯೋಗ ವಂಚಿತರಾಗಿದ್ದಾರೆ. ರಾಜ್ಯ ಸರ್ಕಾರ ಘೊಷಿಸಿರುವ 1610 ಕೋಟಿ ರೂ. ಪ್ಯಾಕೇಜ್​ನಲ್ಲಿ ಭೂ-ರಹಿತರು, ಆರ್ಥಿಕವಾಗಿ ಹಿಂದುಳಿದಿರುವ, ಹಮಾಲಿ ಕಾರ್ವಿುಕರಿಗೂ ಜೀವನಾಧಾರಕ್ಕೆ ಆರ್ಥಿಕ ನೆರವು ನೀಡಲು ಮುಖ್ಯಮಂತ್ರಿಗಳು ಆದೇಶಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಕಾರ್ವಿುಕರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ವಿನಾಯಕ ಕುರುಬರ, ಮುಖಂಡರಾದ ಅಣ್ಣಪ್ಪ ಚಿಕ್ಕಣ್ಣನವರ, ನಜೀರಅಹ್ಮದ್ ಅಂದಲಗಿ, ನೂರಅಹ್ಮದ್ ಕೇಣಿ, ಶಶಾಂಕ ಸೂಗೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts