More

    ಆರ್ಟ್ ಗ್ಯಾಲರಿಯಾಗಿ ಪರಿವರ್ತನೆಯಾದ ಮನೆ…

    ಚಿತ್ರದುರ್ಗ: ಆರ್ಟ್ ಗ್ಯಾಲರಿಯಾಗಿ ಪರಿವರ್ತನೆಯಾದ ಮನೆ… ಗೋಡೆಗಳನ್ನು ಅಲಂಕರಿಸಿದ್ದ ವಿವಿಧ ಕಲಾಕೃತಿಗಳು… ಅವುಗಳನ್ನು ತಮ್ಮ ಆಲೋಚನೆಗೆ ತಕ್ಕಂತೆ ಅರ್ಥೈಸುತ್ತಿದ್ದ ಕಲಾಪ್ರೇಮಿಗಳು… ಕೆಲವೊಂದು ಚಿತ್ರದ ವಿವರಣೆ ಬಯಸುತ್ತಿದ್ದ ವಿದ್ಯಾರ್ಥಿಗಳು… ನಿಮ್ಮ ಕಲ್ಪನೆಯಲ್ಲಿಯೇ ಅವುಗಳಿಗೆ ಜೀವ ಕೊಡಿ, ಎಲ್ಲರಿಗೂ ಅವು ಒಂದೇ ತರಹ ಕಾಣುವುದಿಲ್ಲ ಎಂದು ಪ್ರೋತ್ಸಾಹ ನೀಡುತ್ತಿದ್ದ ಕಲಾವಿದ ವೀರೇಶ್…

    ನಗರದ ಜೋಗಿಮಟ್ಟಿ ರಸ್ತೆಯ ಮನೆ ‘ಶ್ರಮ’ಯಲ್ಲಿ ನೂತನವಾಗಿ ನಿರ್ಮಿಸಿರುವ ‘ಕ್ರಿಯೇಟಿವ್ ಆರ್ಟ್ ಗ್ಯಾಲರಿ’ಯ ಒಟ್ಟು ಚಿತ್ರಣವಿದು.ಕೃತಕ ಬುದ್ಧಿಮತ್ತೆ ಎಷ್ಟರಮಟ್ಟಿಗೆ ಅಪಾಯಕಾರಿಯಾಗಬಲ್ಲದು ಎಂಬುದನ್ನು ಸೂಕ್ಷ ್ಮವಾಗಿ ಕಟ್ಟಿಕೊಟ್ಟ ‘ಆರ್ಟ್ ಅಗೇನ್ಸ್ಟ್ ಎಐ’ ಆರ್ಟ್ ಗ್ಯಾಲರಿಯ ಹೈಲೈಟ್. ಮಾನವನ ಸೃಜನಶೀಲತೆಯನ್ನು ಹೊಸಕಿ ಹಾಕುವ ಕೃತಕ ಬುದ್ಧಿಮತ್ತೆಯ ಬಗೆಗೆ ಸಾತ್ವಿಕ ಆಕ್ರೋಶ ಮೇಳೈಸಿತ್ತು. ಉದ್ಘಾಟನೆಯಲ್ಲಿ ಕಂಡ ದೃಶ್ಯಗಳಿವು.
    ,ಗ್ಯಾಲರಿಯಾಗಿ ಮನೆಯೊಂದರೊಳಗೆ ಆಕರ್ಷಕ ಕಲಾಕೃತಿಗಳು ಗೋಡೆಯನ್ನು ಅಲಂಕರಿಸಿದ್ದವು. ಅವುಗಳನ್ನು ವೀಕ್ಷಿಸಲು ನೂರಾರು ಮಂದಿ ಜಮಾಯಿಸಿದ್ದರು.

    ಜಿಲ್ಲಾಧಿಕಾರಿ ಅವರಿಂದ ಚಾಲನೆ ದೊರೆತಿದ್ದೇ ತಡ ತದೇಕಚಿತ್ತದಿಂದ ನೆರೆದಿದ್ದ ಎಲ್ಲರ ದೃಷ್ಟಿ ಆರ್ಟ್ ಗ್ಯಾಲರಿಯತ್ತ ಹರಿಯಿತು. ಕ್ರಿಯೇಟಿವ್ ವೀರೇಶ್ ಅವರ ಹಲವು ಕಲಾಕೃತಿಗಳು ಚಿತ್ರಕಲಾ ಪ್ರೇಮಿಗಳ ಮಿದುಳಿಗೆ ಕೆಲಸ ನೀಡಿ ಏನಿರಬಹುದು ಎಂಬ ಕುತೂಹಲವನ್ನು ಇನ್ನಷ್ಟು ಇಮ್ಮಡಿಗೊಳಿಸಿತು. ಜಿ.ಆರ್.ಜೆ.ದಿವ್ಯಾಪ್ರಭು ಅವರು ಕೂಡ ಪ್ರತಿ ಕಲಾಕೃತಿಯನ್ನು ಸೂಕ್ಷ್ಮವಾಗಿ ಗಮನಿಸಲು ಮುಂದಾದರು. ಕಲಾವಿದನೊಳಗೆ ಆಳವಾದ ಅಧ್ಯಯನ ಇದ್ದಾಗ ಮಾತ್ರ ಈ ರೀತಿಯ ಚಿತ್ರಗಳು ಹೊರಹೊಮ್ಮಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

    ಕಲೆ ಎಂಬುದು ಜೀವನದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಅದರೊಳಗೆ ಹಾಸುಹೊಕ್ಕಾದಾಗ ಮಾತ್ರ ಕಲಾವಿದನಾಗಿ ಹೊರಹೊಮ್ಮಲು ಸಾಧ್ಯ. ಆದರೆ, ಪ್ರಸ್ತುತ ದಿನಗಳಲ್ಲಿ ಇನ್ಸ್ಟೆಂಟ್ ಕಾಫಿ ಮಾದರಿಯಲ್ಲಿ ಸಿದ್ಧವಾದವುಗಳಿಗೆ ಮಾರುಹೋಗಿರುವ ಕಾರಣ ಸ್ವಂತಿಕೆ ಎಂಬುದು ಕಣ್ಮರೆಯಾಗುತ್ತಿದೆ ಎಂದು ಬೇಸರಿಸಿದರು.

    ಎಲ್ಲರಿಗೂ ಮನೆಯೊಳಗೆ ಬೆಂಬಲ ಸಿಗುವುದಿಲ್ಲ. ಇದಕ್ಕೆ ವಿಶ್ವದ ಶ್ರೇಷ್ಠ ತತ್ವಜ್ಞಾನಿ ಸಾಕ್ರಟೀಸ್ ಕೂಡ ಹೊರತಾಗಿರಲಿಲ್ಲ. ಆದರೆ, ವೀರೇಶ್ ಪುಣ್ಯವಂತರಾಗಿದ್ದು, ಕುಟುಂಬದ ಸಹಕಾರದಿಂದ ಉತ್ತಮ ಗ್ಯಾಲರಿಯನ್ನೇ ನಿರ್ಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇವು ಮಾಮೂಲಿ ಚಿತ್ರಗಳಂತಿಲ್ಲ. ನೋಡುಗರ ಭಾವಕ್ಕೆ ಭಿನ್ನ-ವಿಭಿನ್ನ ಅಭಿಪ್ರಾಯ ಮೂಡಿಸುವಂತಿದ್ದು, ಜೀವಂತಿಕೆ ಪಡೆದಿದೆ. ವಿವಿಧ ರೀತಿಯ ಆಲೋಚನೆ ಇದ್ದಾಗ ವಿನೂತನ ಪ್ರಯೋಗಗಳಲ್ಲಿ ಸಫಲತೆ ಕಾಣಬಹುದು ಎಂಬುದಕ್ಕೂ ಉತ್ತಮ ನಿದರ್ಶನವಾಗಿದೆ ಎಂದು ಅಭಿಪ್ರಾಯಪಟ್ಟರು.

    ಸಾಹಿತಿ ಡಾ. ಲೋಕೇಶ್ ಅಗಸನಕಟ್ಟೆ ಮಾತನಾಡಿ, ಅಲ್ಲಮನ ಪ್ರೇರಣೆ ಉಂಟಾದ ಕಾರಣ, ಆಳ ಮತ್ತು ಎತ್ತರಕ್ಕೆ ತಲುಪಿ ಅದ್ಭುತವಾಗಿ ಕಲಾಕೃತಿಗಳನ್ನು ರಚಿಸಿರುವ ವೀರೇಶ್ ಗ್ಯಾಲರಿಯಾಗಿಸಿದ್ದಾರೆ ಎಂದರು.

    ಚಿತ್ರಕಲಾವಿದ ಕರಿಯಪ್ಪ ಹಂಚಿನಮನಿ ಮಾತನಾಡಿ, ಸಣ್ಣ ಪ್ರಯತ್ನ ಮುಂದೆ ದೊಡ್ಡ ಯೋಜನೆ ಆಗಲಿದೆ. ಅದಕ್ಕಾಗಿ ನಿರಂತರ ಶ್ರಮವಿರಬೇಕು. ಚಿತ್ರಕಲೆ ಪದವಿ ಪಡೆದು ಯಾರ ಬಳಿಯೋ ಕೆಲಸ ಮಾಡಿದರೆ ಪ್ರಯೋಜನವಿಲ್ಲ. ಕಲಾವಿದನಾಗುವ ತುಡಿತವಿರಬೇಕು. ಕೌಶಲ ಇದ್ದಲ್ಲಿ ಮಾತ್ರ ಇದು ಸಾಧ್ಯ. ಕಲಾಕೃತಿಗಳ ಕುರಿತು ಕಲಾವಿದನೇ ವಿಮರ್ಶೆಗೆ ಒಳಗಾದಾಗ ಚಿತ್ರಗಳು ಉತ್ತಮ ಸ್ವರೂಪ ಪಡೆಯಲಿದೆ ಎಂದು ಸಲಹೆ ನೀಡಿದರು.
    ನಿವೃತ್ತ ಪ್ರಾಚಾರ್ಯ ಸಂಗೇನಹಳ್ಳಿ ಅಶೋಕ್‌ಕುಮಾರ್,ಕೆಪಿಎಂ ಗಣೇಶಯ್ಯ ಇತರರು ದ್ದರು.

    ಕೋಟ್
    ಹೊರ ರಾಜ್ಯ, ವಿದೇಶಗಳಲ್ಲಿ ಗ್ಯಾಲರಿ ಪ್ರದರ್ಶನ ಆಯೋಜಿಸಬಹುದು. ಆದರೆ, ಕೋಟೆನಗರಿಯ ಜನತೆ ವೀಕ್ಷಿಸಲಿಕ್ಕಾಗಿ ಗ್ಯಾಲರಿ ನಿರ್ಮಿಸಿದ್ದೇನೆ. ಹೆಸರಲ್ಲೇ ಚಿತ್ರವಿರುವ ಚಿತ್ರದುರ್ಗದ ಸುಂದರ ಸ್ಥಳದಲ್ಲಿ ಗ್ಯಾಲರಿ ನಿರ್ಮಾಣವಾದರೆ, ಅನೇಕ ಚಿತ್ರಕಲಾವಿದರಿಗೆ ಸಹಕಾರಿಯಾಗಲಿದೆ. ಈ ಕುರಿತು ಜಿಲ್ಲಾಡಳಿತ ಗಮನಹರಿಸಬೇಕು.
    ಕ್ರಿಯೇಟಿವ್ ವೀರೇಶ್, ಕಲಾವಿದ

    ಕೋಟ್
    ಕಲಾವಿದನಿಗೆ ರಸಗ್ರಹಣ ಆಗಬೇಕು. ಅದಕ್ಕಾಗಿ ಓದುವ ಹವ್ಯಾಸವಿರಬೇಕು. ಪ್ರಕೃತಿಯೊಂದಿಗೆ ಜೀವಸಂಬಂಧಿ ಒಡನಾಟ, ಪ್ರೀತಿ ಹೆಚ್ಚಾದಾಗ ಅದ್ಭುತ ಕಲಾಕೃತಿ ಹೊರಹೊಮ್ಮುತ್ತದೆ. ನನ್ನೊಳಗೆ ಆಸೆ, ತುಡಿತ ಹೆಚ್ಚಾದ ಕಾರಣ ಇಂತಹ ಚಿತ್ರಗಳನ್ನು ಬಿಡಿಸಲು ಸಾಧ್ಯವಾಗಿದೆ. ಸಾಂಪ್ರದಾಯಿಕ ಉಪಕರಣ ಬಳಸದೆಯೇ ಚಿತ್ರಿಸಲಾಗಿದೆ.
    ಕ್ರಿಯೇಟಿವ್ ವೀರೇಶ್, ಕಲಾವಿದ

    ಆಳವಾದ ಯೋಚನೆಗಳೇ ಕಲೆಯ ಮೂಲ
    ಭೂಕಂಪ, ಜ್ವಾಲಾಮುಖಿ, ಸಮುದ್ರದ ಅಲೆ, ಭೂಮಂಡಲ, ಸರೋವರ, ಧಾತುಗಳು, ಜೀವ ಜಗತ್ತಿನ ಸೃಷ್ಟಿ ಹೇಗೆ, ಮಾನವನ ಹೃದಯ ಒಳಗೊಂಡು ನಿರ್ದಿಷ್ಟವಾಗಿ ಇದೇ ಚಿತ್ರ ಬಿಡಿಸಬೇಕೆಂದು ಯಾವುದೇ ಯೋಜನೆ ಹಾಕಿಕೊಳ್ಳದೆ, ಕೃತಕ ಬುದ್ಧಿಮತ್ತೆಗೆ ವಿರುದ್ಧವಾಗಿ ಮನಸ್ಸಿನ ಆಳ, ಅಂತರಾಳಕ್ಕೆ ಹೋಗಿ ರಚಿಸಿರುವ ಕಾರಣ ಚಿತ್ರಗಳು ಕಲೆಯ ರೂಪದಲ್ಲಿ ಮೂಡಿಬಂದಿವೆ. ಇದರಲ್ಲಿ ಕೆಲವು ಅಂತಾರಾಷ್ಟ್ರೀಯ ಮಟ್ಟಕ್ಕೂ ಆಯ್ಕೆಯಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts