More

    ಆರೋಗ್ಯ ಸೇವೆಗೆ ಆಗ್ರಹಿಸಿ ಪ್ರತಿಭಟನೆ

    ವೈದ್ಯರ ನೇಮಕ, ಆಂಬುಲೆನ್ಸ್ ಒದಗಿಸಲು ವಿವಿಧ ಗ್ರಾಮಸ್ಥರ ಒತ್ತಾಯ


    ಹನೂರು: ತುರ್ತುವಾಹನ ಸೇವೆ ಸಾರ್ವಜನಿಕರಿಗೆ ದೊರಕಬೇಕು. ರಾತ್ರಿ ವೇಳೆ ವೈದ್ಯರನ್ನು ನಿಯೋಜಿಸಬೇಕು. ಜತೆಗೆ ಚಿಕಿತ್ಸೆಗಾಗಿ ಪಡೆಯುತ್ತಿರುವ ಲಂಚಕ್ಕೆ ಕಡಿವಾಣ ಹಾಕುವ ಮೂಲಕ ಜನತೆಗೆ 247 ಆರೋಗ್ಯ ಸೇವೆ ಒದಗಿಸಬೇಕು ಎಂದು ಆಗ್ರಹಿಸಿ ಬುಧವಾರ ತಾಲೂಕಿನ ಪಿ.ಜಿ. ಪಾಳ್ಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಗ್ರಾಮಸ್ಥರು ಕರುನಾಡ ವಿಜಯಸೇನೆಯ ಸಂಘಟನೆಯೊಂದಿಗೆ ಜತೆಗೂಡಿ ಪ್ರತಿಭಟನೆ ನಡೆಸಿದರು.

    ಪರಿವರ್ತನಾ ಅರಣ್ಯ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಪಿ.ಜಿ. ಪಾಳ್ಯ ಭಾಗದಲ್ಲಿ ಸುಮಾರು 35 ಗ್ರಾಮಗಳಿದ್ದು, 25 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಬಹುತೇಕ ಗುಡ್ಡಗಾಡು ಪ್ರದೇಶದಿಂದ ಕೂಡಿದ ಈ ಭಾಗದ ಜನರು ಆರೋಗ್ಯ ಸೇವೆಗಾಗಿ ಪಿ.ಜಿ. ಪಾಳ್ಯ ಸರ್ಕಾರಿ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಈ ಆಸ್ಪತ್ರೆಯನ್ನು ಕೋಟ್ಯಂತರ ರೂ. ವ್ಯಯಿಸಿ ಸುಸಜ್ಜಿತವಾಗಿ ನಿರ್ಮಿಸಲಾಗಿದ್ದು, 247 ಆರೋಗ್ಯ ಸೇವೆ ನೀಡಬೇಕಿದೆ. ಆದರೆ ರಾತ್ರಿ ವೇಳೆ ವೈದ್ಯರೇ ಇರುವುದಿಲ್ಲ. ಇದರಿಂದ ಸಮರ್ಪಕ ಆರೋಗ್ಯ ಸೇವೆ ದೊರಕುತ್ತಿಲ್ಲ. ಪರಿಣಾಮ ಜನರು ಆರೋಗ್ಯ ಸೇವೆಗಾಗಿ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಅದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

    ಸಂಸದ ವಿ.ಶ್ರೀನಿವಾಸಪ್ರಸಾದ್ ಅವರು ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಆಸ್ಪತ್ರೆಗೆ ತುರ್ತು ವಾಹನ ನೀಡಿದ್ದಾರೆ. ಆದರೆ ಈ ವಾಹನ ಜನರ ಸೇವೆಗೆ ದೊರಕುವ ಬದಲು ಆಸ್ಪತ್ರೆಯ ಕೆಲಸ ಕಾರ್ಯಗಳಿಗೆ ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದ್ದರಿಂದ ಅರೋಗ್ಯ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮಕೈಗೊಂಡು ಸಮರ್ಪಕ ಆರೋಗ್ಯ ಸೇವೆ ಒದಗಿಸಬೆಕು ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

    ಕರುನಾಡ ವಿಜಯಸೇನೆಯ ಜಿಲ್ಲಾಧ್ಯಕ್ಷ ನವೀನ್‌ಕುಮಾರ್ ಮಾತನಾಡಿ, ಈ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆ ಸಮರ್ಪಕವಾಗಿ ದಕ್ಕುತ್ತಿಲ್ಲ. ಪರಿಣಾಮ ಇಲ್ಲಿನ ಜನರು ಚಿಕಿತ್ಸೆಗಾಗಿ ತುಂಬ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಜನಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸಮರ್ಪಕ ಅರೋಗ್ಯ ಸೇವೆ ಒದಗಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಚಿಕಿತ್ಸೆಗಾಗಿ ಹಣ ಪಡೆಯುತ್ತಿದ್ದು, ಜನರನ್ನು ಸುಲಿಗೆ ಮಾಡಲಾಗುತ್ತಿದೆ. ಮಾತ್ರೆ ಹಾಗೂ ಔಷಧಗಳನ್ನು ಮೆಡಿಕಲ್‌ಗೆ ಮಾರಾಟ ಮಾಡಲಾಗುತ್ತಿದೆ. ಆದ್ದರಿಂದ ಕೂಡಲೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸ್ಥಳಕ್ಕೆ ಅಗಮಿಸಿ ಈ ಬಗ್ಗೆ ಕ್ರಮವಹಿಸಬೇಕು. ಇಲ್ಲವಾದಲ್ಲಿ ಆಸ್ಪತ್ರೆಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

    ಸ್ಥಳಕ್ಕಾಗಮಿಸಿದ ಡಿಎಚ್‌ಒ ಡಾ. ವಿಶ್ವೇಶ್ವರಯ್ಯ ಅವರು ಪ್ರತಿಭಟನಾಕಾರದಿಂದ ಮನವಿ ಅಲಿಸಿ ಸದ್ಯದಲ್ಲಿಯೇ ತುರ್ತುವಾಹನಕ್ಕೆ ಸ್ಥಳೀಯರ ಚಾಲಕನನ್ನು ನಿಯೋಜಿಸಲಾಗುವುದು. ಜತೆಗೆ ಒಂದು ವಾರದೊಳಗೆ ರಾತ್ರಿ ವೇಳೆ ವೈದ್ಯರನ್ನು ನಿಯೋಜಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು. ಪ್ರತಿಭಟನೆಯಲ್ಲಿ ಕರುನಾಡ ವಿಜಯಸೇನೆ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts