More

    ಆರೋಗ್ಯ ಇಲಾಖೆ ಕರೊನಾ ಎಡವಟ್ಟು

    ಬಾಬುರಾವ ಯಡ್ರಾಮಿ ಕಲಬುರಗಿ
    ಕರೊನಾ ಸೋಂಕು ನಿರ್ವಹಣೆಯಲ್ಲಿ ಕಲಬುರಗಿಯಲ್ಲಿ ಆರಂಭದಿಂದಲೂ ಆರೋಗ್ಯ ಇಲಾಖೆಯಿಂದ ಎಡವಟ್ಟು ನಡೆಯುತ್ತಲೇ ಇದೆ. ಈಗ ಮತ್ತೊಂದು ಎಡವಟ್ಟು ಮಾಡುವ ಮೂಲಕ ಗ್ರಾಮೀಣ ಭಾಗಗಳಲ್ಲಿ ಸೋಂಕು ಇನ್ನಷ್ಟು ಹಬ್ಬುವಂತಾಗುವುದಕ್ಕೆ ದಾರಿ ಮಾಡಿದ್ದಾರೆನ್ನಲಾಗಿದೆ.
    ಜಿಲ್ಲೆಯ ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿದ್ದು ಅವಧಿ ಮುಗಿಸಿ ಮನೆಗೆ ಹೋದ ನಂತರ ಹಲವರು ತಮ್ಮ ಕುಟುಂಬಸ್ಥರಗೊಂದಿಗೆ, ಸ್ನೇಹಿತರು, ಊರಿನವರೊಂದಿಗೆ ಎರಡ್ಮೂರು ದಿನ ಕಳೆದ ಬಳಿಕ ಅವರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಇದು ಗೊತ್ತಾಗುತ್ತಲೇ ಆರೋಗ್ಯ ಇಲಾಖೆಯರು ಈಗ ಪೀಕಲಾಟಕ್ಕೊಳಗಾಗಿದ್ದಾರೆ.
    ಆಳಂದ ತಾಲೂಕಿನ ಭೂಸನೂರ ತಾಂಡಾ, ಎಂ.ಎನ್.ತಾಂಡಾ ಮತ್ತು ಕಿಣ್ಣಿ ಸುಲ್ತಾನ, ಸೇಡಂ ಮತ್ತು ಚಿತ್ತಾಪುರ ತಾಲೂಕುಗಳ ಹಲ ಗ್ರಾಮಗಳಲ್ಲಿ ಕಳೆದ ದಿ. 25 ಮತ್ತು 26ರಂದು ಕ್ವಾರಂಟೈನ್ ಅವಧಿ ಮುಗಿಸಿ ಬಿಡುಗಡೆಯಾಗಿ ತಮ್ಮ ಗ್ರಾಮಗಳಿಗೆ ತೆರಳಿದ ನಂತರ ಸೋಂಕು ಇರುವುದು ಪತ್ತೆಯಾಗಿದೆ. ಈಗಾಗಲೇ ಇಂಥ ಎಂಟು ಪ್ರಕರಣಗಳು ವರದಿಯಾಗಿವೆ. ಚಿತ್ತಾಪುರ ತಾಲೂಕಿನ ದೇವಾಪುರ ತಾಂಡಾದಲ್ಲಿ ಪಾಸಿಟಿವ್ ಬಂದ ವ್ಯಕ್ತಿಯನ್ನು ಊರಿನಲ್ಲಿ ಬಿಟ್ಟು, ನೆಗೆಟಿವ್ ಬಂದಾತನನ್ನು ಆಸ್ಪತ್ರೆಗೆ ಕರೆ ತಂದು ದಾಖಲಿಸಿದ್ದರು. ಶಹಾಬಾದ ತಾಲೂಕಿನ ವ್ಯಕ್ತಿಯಲ್ಲಿಗೂ ಮನೆಗೆ ಬಂದ ನಂತರವೇ ಸೋಕು ದೃಢಪಟ್ಟಿತ್ತು. ಜಿಮ್ಸ್ನಲ್ಲಿ ದಾಖಲಾಗಿದ್ದ ವ್ಯಕ್ತಿಯೊಬ್ಬ ಓಡಿ ಹೋಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಹೀಗೆ ಹಲವು ಎಡವಟ್ಟುಗಳು ನಡೆಯುತ್ತಲೇ ಇವೆ.
    ಜಿಲ್ಲೆಗೆ ಮಹಾರಾಷ್ಟ್ರ, ತೆಲಂಗಾಣ,ಆಂಧ್ರಪ್ರದೇಶ,ಗೋವಾ ಮೊದಲಾದ ರಾಜ್ಯಗಳಿಂದ ಬಂದಿದ್ದ ವಲಸಿಗರನ್ನು ವಿವಿಧ ಕಡೆಗಳಲ್ಲಿರುವ 547 ಕ್ವಾರಂಟೈನ್ ಕೇಂದ್ರಗಳಲ್ಲಿ 35,723 ಜನರನ್ನು ಇರಿಸಲಾಗಿತ್ತು. ಅಂದಾಜು 28,857 ಜನರನ್ನು ಶುಕ್ರವಾರ ಬಿಡುಗಡೆಗೊಳಿಸಲಾಯಿತು. 29ರಂದು ಒಂದೇ ದಿನ 16,278 ಜನರು ಮನೆಗೆ ತೆರಳಿದ್ದರು. ಬಹುತೇಕರು ಮಹಾರಾಷ್ಟ್ರದಿಂದಲೇ ಬಂದವರು. ಅವರ ವರದಿ ಬರುವ ಮುನ್ನವೇ ಕ್ವಾರಂಟೈನ್ದಿಂದ ಮನೆಗೆ ಕಳುಹಿಸುವ ಮೂಲಕ ಈಗ ಇನ್ನಷ್ಟು ಆತಂಕ ಹೆಚ್ಚುವಂತಾಗಿದೆ. ಆರೋಗ್ಯ ಇಲಾಖೆಯವರು ಈ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಸರಿಯಾದ ಮಾಹಿತಿ ಮತ್ತು ಅಲ್ಲಿನ ವಾಸ್ತವ ಸ್ಥಿತಿಯ ವರದಿ ನೀಡುವಲ್ಲಿ ವಿಫಲವಾದಂತಿದೆ.


    ಸಂಶಯವಿದ್ದ ಮೇಲೆ ಮನೆಗೆ ಕಳುಹಿಸಿದ್ಯಾಕೆ ?
    ಜಿಲ್ಲೆಯ ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿದ್ದವರಲ್ಲಿ ಸಂಶಯ ಕಂಡು ಬಂದವರ ಗಂಟಲು ದ್ರವ ಮತ್ತು ಕಫದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆ ಕಳುಹಿಸಲಾಗಿತ್ತು. ಹೀಗಿದ್ದರೂ ಸಹ ಅವರ ವರದಿ ಬರುವ ಮುನ್ನವೇ ಮನೆಗಳಿಗೆ ಕಳಿಸಿದ್ದೇಕೆ? ಎಂಬ ಪ್ರಶ್ನೆ ಕಾಡುತ್ತಿದೆ.
    ಲಕ್ಷಣಗಳು ಇಲ್ಲದವರಲ್ಲಿಯೂ ಕೋವಿಡ್-19 ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಈ ಹಿಂದೆ 14 ದಿನ ಕ್ವಾರಂಟೈನ್ ಮುಗಿದ ಬಳಿಕ, ಇನ್ನೂ 14 ದಿನ ಕ್ವಾರಂಟೈನ್ ಮುಂದುವರಿಸಿ ಎಂದು ಜಿಲ್ಲಾ ಉಸ್ತುವಾರಿ ನೋಡಿಕೊಳ್ಳುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸಲಹೆ ನೀಡಿದ್ದರು. ಆದರೆ, ಕೇಂದ್ರ ಸರ್ಕಾರದ ಹೊಸ ಸುತ್ತೋಲೆ ಅಧಿಕಾರಿಗಳನ್ನು ಗೊಂದಲಕ್ಕೆ ಸಿಲುಕಿಸಿದ್ದರಿಂದ ವಲಸಿಗರನ್ನು ಕಳುಹಿಸಿಕೊಡುವ ಮೂಲಕ ಆರೋಗ್ಯ ಇಲಾಖೆ ಈಗ ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಅಲ್ಲದೆ ವಲಸಿಗರ ಆರೋಗ್ಯ ಸ್ಥಿತಿ ಕುರಿತು ಸರಿಯಾದ ಮಾಹಿತಿಯನ್ನು ಆರೋಗ್ಯ ಇಲಾಖೆಯವರು ದಾಖಲಿಸಿಕೊಂಡಿಲ್ಲ ಎಂಬುದಕ್ಕೆ ಈಗನ ಸ್ಥಿತಿ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts