More

    ಆರೋಗ್ಯ ಕೇಂದ್ರಕ್ಕೆ ಅನಾರೋಗ್ಯ!

    ವಿಜಯ ಸೊರಟೂರ ಡಂಬಳ

    ಗದಗ ಜಿಲ್ಲೆಗೆ ಮಾದರಿಯಾದ ಡಂಬಳ ಆರೋಗ್ಯ ಕೇಂದ್ರದಲ್ಲಿ 7 ತಿಂಗಳಿಂದ ವೈದ್ಯರು ಇಲ್ಲದೆ ರೋಗಿಗಳು ಪರದಾಡುವಂತಾಗಿದೆ.

    ನಾರಾಯಣಪುರ, ಮೇವುಂಡಿ, ಬರದೂರ, ಹೊಸಡಂಬಳ, ಹೈತಾಪೂರ, ಯಕ್ಲಾಸಪೂರ ಗ್ರಾಮದಿಂದ ರೋಗಿಗಳು ಚಿಕಿತ್ಸೆಗಾಗಿ ಬರುತ್ತಿದ್ದು, ಸಕಾಲಕ್ಕೆ ವೈದ್ಯರು ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ.

    ಆರೋಗ್ಯ ಕೇಂದ್ರಕ್ಕೆ ಸುಸಜ್ಜಿತ ಕಟ್ಟಡವಿದೆ. ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಾರ್ಡ್​ಗಳಿವೆ. ರಕ್ತ ತಪಾಸಣೆ ಕೇಂದ್ರ, ಔಷಧ ವಿತರಣೆ ಕೊಠಡಿ, ಚಿಕಿತ್ಸೆ ಕೊಠಡಿ, ಕಣ್ಣಿನ ತಪಾಸಣೆ ಕೇಂದ್ರ, ಹೆರಿಗೆ ಕೊಠಡಿ, ಕಂಪ್ಯೂಟರ್ ಸೇರಿ ಮೂಲ ಸೌಲಭ್ಯ ಇಲ್ಲಿವೆ. ಆದರೆ, ಮುಖ್ಯವಾಗಿ ಕಾಯಂ (ಎಂಬಿಬಿಎಸ್) ವೈದ್ಯರೇ ಇಲ್ಲದ ಕಾರಣ ರೋಗಿಗಳು ನಗರ ಪ್ರದೇಶಕ್ಕೆ ಹೋಗುವ ದುಸ್ಥಿತಿ ಎದುರಾಗಿದೆ.

    ಕಾಯಂ ವೈದ್ಯರ ನೇಮಕಕ್ಕೆ ಆಗ್ರಹ: ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಡಾ. ಸುಭಾಸಚಂದ್ರ ದೈಗೊಂಡ ಅವರು ಆಸ್ಪತ್ರೆ ವಸತಿ ನಿಲಯದಲ್ಲೇ ವಾಸವಿದ್ದರು. ಇದರಿಂದ ರೋಗಿಗಳಿಗೆ ತುಂಬಾ ಅನುಕೂಲವಾಗಿತ್ತು. ಅವರು ವರ್ಗಾವಣೆಗೊಂಡು 7 ತಿಂಗಳು ಕಳೆದಿವೆ. ಇದುವರೆಗೆ ಕಾಯಂ ವೈದ್ಯರ ನೇಮಕವಾಗಿಲ್ಲ.

    ದುಡ್ಡು ಕೊಟ್ಟರೆ ಚಿಕಿತ್ಸೆ: ಸರ್ಕಾರಿ ಆಸ್ಪತ್ರೆಯೆಂದರೆ ಉಚಿತ ಚಿಕಿತ್ಸೆ, ಬಡವರ ಆಶಾಕಿರಣ ಎನ್ನುತ್ತಾರೆ. ಇಲ್ಲಿ ಔಷಧಿಗೆ 30ರಿಂದ 50ರೂ., ಚುಚ್ಚುಮದ್ದಿಗೆ 50 ರೂ. ಕೊಟ್ಟರೆ ಮಾತ್ರ ಆರೋಗ್ಯ ಸೇವೆ ಲಭಿಸುತ್ತದೆ ಎಂಬ ಆರೋಪ ರೋಗಿಗಳದ್ದಾಗಿದೆ.

    ಸಿಬ್ಬಂದಿ ಕೊರತೆ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸದ್ಯ ಒಬ್ಬ ಕ್ಷೇತ್ರ ಆರೋಗ್ಯಾಧಿಕಾರಿ, ನಾಲ್ವರು ಕಿರಿಯ ಮಹಿಳಾ ಸಹಾಯಕಿಯರು, ಇಬ್ಬರು ಹಿರಿಯ ಪುರುಷ ಸಹಾಯಕ, ಒಬ್ಬ ದ್ವಿತೀಯ ಸಹಾಯಕಿ, ಇಬ್ಬರು ಅಟೆಂಡರ್, ಒಬ್ಬ ಔಷಧ ವಿತರಕ, ಲ್ಯಾಬ್ ಟೆಕ್ನಿಷಿಯನ್, ಕಣ್ಣು ಪರಿವೀಕ್ಷಕರು ಹಾಗೂ ಕರ್ತವ್ಯ ನಿಯೋಜಿತ ಸಿಬ್ಬಂದಿ ಹಾಗೂ ಗುತ್ತಿಗೆ ಆಧಾರದ ಮೇಲೆ ಒಬ್ಬ ಎಂಬಿಬಿಎಸ್ ವೈದ್ಯ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ ಇಬ್ಬರು ಮೆಡಿಕಲ್ ಆಫಿಸರ್ಸ್, ಒಬ್ಬ ಮಹಿಳಾ ಆರೋಗ್ಯ ಸಹಾಯಕಿ ಮತ್ತು ಒಬ್ಬ ಹಿರಿಯ ಆರೋಗ್ಯ ಅಧಿಕಾರಿಯ ಅಗತ್ಯವಿದೆ. ಡಾ. ಅಕ್ಕಮಹಾದೇವಿ ಸಾಲಿ ಅವರು ಗುತ್ತಿಗೆ ಆಧಾರದ ಮೇಲೆ ವೈದ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಂಜುನಾಥ ಗುಂಡಾಳೆ ಆಡಳಿತಾತ್ಮಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    ಡಂಬಳ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಹುದ್ದೆ ಭರ್ತಿ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಡಂಬಳ ಆರೋಗ್ಯ ಕೇಂದ್ರಕ್ಕೆ 108 ಆಂಬುಲೆನ್ಸ್ ಕಲ್ಪಿಸಲು ಅಧಿಕಾರಿಗಳೊಂದಿಗೆ ರ್ಚಚಿಸಲಾಗುತ್ತದೆ. ಡಂಬಳ ವ್ಯಾಪ್ತಿಯ ಜನರ ಆರೋಗ್ಯ ಸೇವೆಯಲ್ಲಿ ತೊಂದರೆ ಆಗದಂತೆ ಕ್ರಮ ವಹಿಸಲಾಗುವುದು.

    | ಡಾ. ಸತೀಶ ಬಸರಿಗಿಡದ, ಜಿಲ್ಲಾ ಆರೋಗ್ಯಾಧಿಕಾರಿ ಗದಗ

    108 ಆಂಬುಲೆನ್ಸ್ ಸೇವೆ ಕಲ್ಪಿಸಿ : ಡಂಬಳ ಆರೋಗ್ಯ ಕೇಂದ್ರವು ಹತ್ತಾರು ಹಳ್ಳಿಗಳು, ಎರಡು ರಾಜ್ಯ ಹೆದ್ದಾರಿಯನ್ನು ಒಳಗೊಂಡಿದ್ದು ಹೆದ್ದಾರಿಯಲ್ಲಿ ಯಾವುದೇ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ತುರ್ತು ಚಿಕಿತ್ಸೆಗಾಗಿ ಕರೆ ಮಾಡಿದರೆ ನಗರ ಪ್ರದೇಶಗಳಿಂದ ತಡವಾಗಿ ಆಂಬುಲೆನ್ಸ್ ಬರುತ್ತವೆ. ಗ್ರಾಮೀಣ ಭಾಗದ ಗರ್ಭಿಣಿಯರು ತುರ್ತು ಚಿಕಿತ್ಸೆ ಸಂದರ್ಭದಲ್ಲಿ ನಗರ ಪ್ರದೇಶಗಳತ್ತ ಚಿಕಿತ್ಸೆಗೆ ತೆರಳಬೇಕಾದರೆ ಡಂಬಳ ಆರೋಗ್ಯ ಕೇಂದ್ರಕ್ಕೆ ತುರ್ತು 108 ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts