More

    ಆರಕ್ಷಕರಿಗೆ ಬೇಕಿದೆ ಆತ್ಯಾಧುನಿಕ ಸೌಲಭ್ಯ

    ಚಿಕ್ಕಬಳ್ಳಾಪುರ: ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮಿಸುತ್ತಿರುವ ಪೊಲೀಸ್ ಇಲಾಖೆಗೆ ಅತ್ಯಾಧುನಿಕ ಮತ್ತಷ್ಟು ಸವಲತ್ತುಗಳನ್ನು ಒದಗಿಸುವುದು ಅಗತ್ಯವಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಭೈರಪ್ಪ ಶಿವಲಿಂಗ ನಾಯಿಕ ಅಭಿಪ್ರಾಯಪಟ್ಟರು.

    ಜಿಲ್ಲಾ ಪೊಲೀಸ್ ಇಲಾಖೆ ನಗರದಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹುತಾತ್ಮರ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಪೊಲೀಸರೂ ನಮ್ಮಂತೆಯೇ ಮನುಷ್ಯರು. ಅಪರಾಧಮುಕ್ತ ಸಮಾಜ ನಿರ್ಮಾಣಕ್ಕೆ ಸದಾ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಗಲಭೆ ನಿಯಂತ್ರಣ, ಕಳ್ಳಕಾಕರು ಮತ್ತು ರೌಡಿಗಳನ್ನು ಮಟ್ಟ ಹಾಕುವುದು ಸೇರಿ ಹಲವು ಸಂದರ್ಭಗಳಲ್ಲಿ ಪ್ರಾಣವನ್ನೇ ಅರ್ಪಿಸುತ್ತಾರೆ. ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ಗೌರವ ಕೊಡಬೇಕು ಎಂದರು.

    ಯೋಧರು ದೇಶದ ಗಡಿ ಕಾಯುವಂತೆ ದೇಶದೊಳಗೆ ಪೊಲೀಸರು ನಮ್ಮನ್ನು ರಕ್ಷಿಸುತ್ತಿದ್ದಾರೆ ಎಂದ ನ್ಯಾಯಾಧೀಶರು, ಶಾಂತಿ, ಕಾನೂನು ವ್ಯವಸ್ಥೆ ಕಾಪಾಡುವ ಜವಾಬ್ದಾರಿ ಕೇವಲ ಪೊಲೀಸರದ್ದಷ್ಟೇ ಅಲ್ಲ, ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು, ಅಪರಾಧ ಚಟುವಟಿಕೆಗಳು ಅರಿವಿಗೆ ಬಂದರೆ ತಕ್ಷಣವೇ ಮಾಹಿತಿ ನೀಡಬೇಕು. ಸಣ್ಣ ಪುಟ್ಟ ವಿಚಾರಗಳಿಗೂ ಗಲಾಟೆ ಮಾಡಿಕೊಳ್ಳದೇ ಕಾನೂನು ಪ್ರಕಾರ ನಡೆದುಕೊಳ್ಳಬೇಕು ಎಂದು ಸಲಹೆಯಿತ್ತಿರು.

    ಇಲಾಖೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದವರನ್ನು ಕಿರಿಯ ಸಿಬ್ಬಂದಿ ಮಾದರಿಯಾಗಿ ತೆಗೆದುಕೊಳ್ಳಬೇಕು. ನಿಷ್ಠೆಯಿಂದ ಸೇವೆ ಸಲ್ಲಿಸಿದವರನ್ನು ಜನರು ಎಂದಿಗೂ ಮರೆಯುವುದಿಲ್ಲ, ಆದರ್ಶ ವ್ಯಕ್ತಿಯನ್ನಾಗಿಸಿ ಗೌರವಿಸುತ್ತಾರೆ ಎಂದು ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಕಿವಿಮಾತು ಹೇಳಿದರು.

    ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಪ್ರಾಣತ್ಯಾಗ ಮಾಡಿದವರನ್ನು ಸ್ಮರಿಸಿ, ಗೌರವಿಸಲು ಪ್ರತಿ ವರ್ಷ ಅ.21 ರಂದು ದೇಶಾದ್ಯಂತ ಪೊಲೀಸ್ ಹುತಾತ್ಮರ ದಿನ ಆಚರಿಸಲಾಗುತ್ತದೆ ಎಂದು ತಿಳಿಸಿದರು.

    ಜಿಲ್ಲಾಧಿಕಾರಿ ಆರ್.ಲತಾ, ಜಿಪಂ ಸಿಇಒ ಪಿ.ಶಿವಶಂಕರ್, ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್, ಡಿವೈಎಸ್‌ಪಿಗಳಾದ ಕೆ.ರವಿಶಂಕರ್, ಲಕ್ಷ್ಮೀನಾರಾಯಣ್ ಮತ್ತಿತರರು ಇದ್ದರು.

    ಗೌರವ ಸಮರ್ಪಣೆ : ಹುತಾತ್ಮರ ಸ್ಥೂಪಕ್ಕೆ ಜಿಲ್ಲಾ ನ್ಯಾಯಾಧೀಶರು, ಜಿಲ್ಲಾಧಿಕಾರಿ ಹೂ ಗುಚ್ಛವಿರಿಸಿ ಗೌರವ ಸಲ್ಲಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್ ಪಿ, ವೃತ್ತ ನಿರೀಕ್ಷಕರು ಸೇರಿ ಪೊಲೀಸ್ ಸಿಬ್ಬಂದಿ ತೋಳಿಗೆ ಕಪ್ಪು ಪಟ್ಟಿ ಧರಿಸಿದ್ದರು. ಸಶಸ್ತ್ರ ಮೀಸಲು ಪಡೆ, ಠಾಣೆ ಸಿಬ್ಬಂದಿ ಪಥ ಸಂಚಲನದ ಮೂಲಕ ವಂದನೆ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts