More

    ಆಯುರ್ವೇದದಲ್ಲಿದೆ ಅತ್ಯುತ್ತಮ ಚಿಕಿತ್ಸೆ


    ಹಾಸನ : ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಅನೇಕ ಅತ್ಯುತ್ತಮ ಚಿಕಿತ್ಸೆ ಅಭ್ಯವಿದ್ದು ವಾಸಿಯಾಗದ ಕಠಿಣ ರೋಗಗಳನ್ನೂ ಗುಣಪಡಿಸುವ ಸಾಮರ್ಥ್ಯವಿದೆ. ರೋಗಿಗಳು ತಾಳ್ಮೆಯಿಂದ ವೈದ್ಯರ ಮಾರ್ಗದರ್ಶನದಂತೆ ಚಿಕಿತ್ಸೆ ಪಡೆದಲ್ಲಿ ಉತ್ತಮ ಆರೋಗ್ಯ ತಮ್ಮದಾಗಿಸಿಕೊಳ್ಳಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹೇಳಿದರು.

    ನಗರದ ರಾಜೀವ್ ಆಯುರ್ವೇದ ಮಹಾವಿದ್ಯಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ಶಿಷ್ಯೋಪನಯನ ಮತ್ತು ಕಾಲೇಜು ವಾರ್ಷಿಕೋತ್ಸವ ವಿಸ್ಮಯ-2022 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಶೋಧನೆಗಳ ಕೊರತೆ ಹಾಗೂ ವೈಜ್ಞಾನಿಕವಾಗಿ ಚಿಕಿತ್ಸಾ ಫಲಿತಾಂಶಗಳನ್ನು ದಾಖಲಿಸದೆ ಇರುವುದು ಆಯುರ್ವೇದ ಚಿಕಿತ್ಸಾ ಪದ್ಧತಿಗೆ ಹಿನ್ನಡೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


    ವೈದ್ಯಕೀಯ ಪದವೀಧರರು ಸಹ ಯುಪಿಎಸ್‌ಸಿ ಪರೀಕ್ಷೆಗಳನ್ನು ಬರೆದು ಯಶಸ್ಸು ಕಾಣಬಹುದು. ಐಎಎಸ್, ಐಪಿಎಸ್ ಹುದ್ದೆಗಳನ್ನು ಪಡೆದು ಉತ್ತಮ ಆಡಳಿತಾತ್ಮಕ ಕೆಲಸಗಳ ಮುಖೇನ ದೇಶ ಸೇವೆ ಮಾಡಬಹುದು ಹಾಗೂ ಜೀವನವನ್ನೂ ಉತ್ತಮವಾಗಿಸಿಕೊಳ್ಳಬಹುದು. ವಿದ್ಯಾರ್ಥಿ ಜೀವನದಲ್ಲಿ ರ‌್ಯಾಗಿಂಗ್ ಒಂದು ದೊಡ್ಡ ಸಮಸ್ಯೆಯಾಗಿದ್ದು ಅದರಿಂದ ದೂರವಿರುವಂತೆ ಕಿವಿಮಾತು ಹೇಳಿದರು.


    ವಾರ್ಷಿಕ ಕ್ರೀಡಾಕೂಟದ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ರಾಜೀವ್ ಆಸ್ಪತ್ರೆಯ ಫಿಜಿಷಿಯನ್ ಡಾ. ಹಾನುಬಾಳ್ ಬಿ.ಮಹೇಶ್, ಪ್ರತಿ ರೋಗಿ ವೈದ್ಯಕೀಯ ವಿದ್ಯಾರ್ಥಿಗೆ ಶಿಕ್ಷಕನಿದ್ದಂತೆ. ರೋಗಿಗಳಿಂದಲೂ ಕಲಿಯುವುದು ಬಹಳಷ್ಟು ಇರುತ್ತದೆ. ಹಾಗಾಗಿ, ರೋಗಿಗಳನ್ನು ಗೌರವದಿಂದ ಕಾಣುವ ಮನೋಭಾವವನ್ನು ವಿದ್ಯಾರ್ಥಿ ಜೀವನದಿಂದಲೇ ಮೈಗೂಡಿಸಿಕೊಳ್ಳಿ ಎಂದು ಸಲಹೆ ನೀಡಿದರು.


    ಇಂದಿನ ವಿದ್ಯಾರ್ಥಿಗಳು ಡ್ರಗ್ಸ್ ಮತ್ತಿತರ ಕೆಟ್ಟ ಚಟಗಳತ್ತ ಆಕರ್ಷಿತರಾಗುತ್ತಿರುವುದು ಹೆಚ್ಚಾಗುತ್ತದೆ. ಜನಸಮಾನ್ಯರಿಗೆ ತಿಳಿ ಹೇಳಬೇಕಾದ ಶಿಕ್ಷಿತ ವರ್ಗವೇ ಡ್ರಗ್ಸ್ ಬಳಕೆ ಮಾಡುತ್ತಿರುವುದು ವಿಷಾದನೀಯ. ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಾಗಿರುವ ವಿದ್ಯಾರ್ಥಿಗಳು ಆರೋಗ್ಯಕ್ಕೆ ಮಾರಕಾದ ಡ್ರಗ್ಸ್ ವ್ಯಸನದಿಂದ ದೂರವಿರಬೇಕು ಎಂದು ಎಚ್ಚರಿಸಿದರು.


    ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜೀವ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಬಿ.ಎನ್.ರತ್ನ, ಆಯುರ್ವೇದ ವೈದ್ಯ ಪದ್ಧತಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಆಯುರ್ವೇದ ವೈದ್ಯಕೀಯ ಶಿಕ್ಷಣದತ್ತ ಬರುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗಿದೆ. ಇದು ಭಾರತೀಯ ವೈದ್ಯಕೀಯ ಪದ್ಧತಿಯು ಪುನಃ ಮುನ್ನಲೆಗೆ ಬರುತ್ತಿರುವ ಸಂಕೇತ ಎಂದು ಹರ್ಷ ವ್ಯಕ್ತಪಡಿಸಿದರು.


    ರಾಜೀವ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಾ. ರಂಜಿತ್ ರಾಜೀವ್ ಮಾತನಾಡಿ, ಭಾರತದಲ್ಲಿ ವೈದ್ಯರ ಕೊರತೆ ಹೆಚ್ಚಾಗಿದೆ. ರೋಗಿಗಳ ಬೇಡಿಕೆಗೆ ಅನುಗುಣವಾಗಿ ವೈದ್ಯರು ಲಭ್ಯವಿಲ್ಲ. ಕೇಂದ್ರ ಸರ್ಕಾರದ ಹೊಸ ನೀತಿಗಳು ವೈದ್ಯಕೀಯ ಶಿಕ್ಷಣಕ್ಕೆ ಪೂರಕವಾಗಿವೆ ಎಂದು ಹೇಳಿದರು.


    ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎ.ನಿತಿನ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜೀವ್ ಆಯುರ್ವೇದ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕಳೆದೆರಡು ವರ್ಷಗಳ ವಿಶ್ವವಿದ್ಯಾಲಯದ ಪರೀಕ್ಷೆಗಳಲ್ಲಿ ಅನೇಕ ರ‌್ಯಾಂಕ್‌ಗಳನ್ನು ಪಡೆದಿರುವುದು ಕಾಲೇಜು ಉತ್ತಮ ಆಯುರ್ವೇದ ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದಕ್ಕೆ ನಿದರ್ಶನ. ರಾಜೀವ್ ಆಯುರ್ವೇದ ಆಸ್ಪತ್ರೆಯಲ್ಲಿಯೂ ಕಡಿಮೆ ಬೆಲೆಯಲ್ಲಿ ಉತ್ತಮ ಫಲಿತಾಂಶಯುಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.


    ಡಾ. ಎಸ್.ಎ.ನಿತಿನ್ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಶಿಷ್ಯೋಪನಯನದ ಪ್ರತಿಜ್ಞಾವಿಧಿ ಬೋಧಿಸಿದರು. ಎಂ.ಎನ್. ಪಾಂಡುರಂಗ ಕಾರ್ಯಕ್ರಮ ನಡೆಸಿಕೊಟ್ಟರು. ಡಾ.ಸಿ.ಪಿ.ವಿಷ್ಣು ವಂದಿಸಿದರು. ಸಬಾ ಫಾತಿಮಾ ಮತ್ತು ಕೆ.ಆರ್.ಸ್ಮಿತಾ ಕಾರ್ಯಕ್ರಮ ನಿರೂಪಿಸಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts