More

    ಆಯನೂರು ಬಳಿ ಕರಡಿ ಪ್ರತ್ಯಕ್ಷ

    ಆಯನೂರು: ಇಲ್ಲಿನ ಕೋಹಳ್ಳಿ ತಾಂಡಾದ ಸಪೋಟ ತೋಟದಲ್ಲಿ ಗುರುವಾರ ರಾತ್ರಿ ಕರಡಿಯೊಂದು ಪ್ರತ್ಯಕ್ಷವಾಗಿದೆ.

    ರಾತ್ರಿ ನಾಯಿಗಳು ವಿಪರೀತ ಬೊಗಳುವುದನ್ನು ಕೇಳಿದ ಜನರು ಮನೆಯಿಂದ ಹೊರ ಬಂದು ನೋಡಿದಾಗ ತೋಟದಲ್ಲಿ ಕರಡಿ ಕಂಡು ಬಂದಿದೆ.

    ಕೋಹಳ್ಳಿ ತಾಂಡಾದ ಛತ್ರಪತಿ ನಾಯ್್ಕ ಅವರ ತೋಟದಲ್ಲಿ ಭರಪೂರ ಸಪೋಟ ಹಣ್ಣುಗಳಿವೆ. ತೋಟದ ಸುತ್ತಲೂ ಬೇಲಿ ಹಾಕಲಾಗಿದ್ದು ಒಂಡೆರಡು ದಿನಗಳಿಂದ ಇಲ್ಲಿಗೆ ಬರುತ್ತಿದೆ. ರಾತ್ರಿ ವೇಳೆ ಬಂದು ಹೋಗುತ್ತಿದೆ. ಆದರೆ ಗುರುವಾರ ರಾತ್ರಿ ಮಾತ್ರ ಜನರ ಕಣ್ಣಿಗೆ ಕಂಡಿದ್ದು ಜನರ ಕಿರುಚಾಟ ಜಾಸ್ತಿಯಾಗುತ್ತಿದ್ದಂತೆ ಹೆದರಿದ ಕರಡಿ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಿದೆ. ಅರಣ್ಯ ಇಲಾಖೆಯವರಿಗೆ ವಿಷಯ ತಿಳಿದು ಬರುವಷ್ಟರಲ್ಲಿ ತೋಟದಿಂದ ಗ್ರಾಮದ ಸಮುದಾಯ ಆಸ್ಪತ್ರೆ ಆವರಣಕ್ಕೆ ಕರಡಿ ಹೋಗಿತ್ತು. ಅಲ್ಲಿಂದ ಇಲಾಖೆಯ ಅಧಿಕಾರಿಗಳು ಸಿಡಿಮದ್ದು ಸಿಡಿಸಿ ಹಾಗೂ ಗಾಳಿಯಲ್ಲಿ ಫೈರ್ ಮಾಡಿ ಕರಡಿಯನ್ನು ಪಕ್ಕದ ಕಾಡಿನೊಳಗೆ ಓಡಿಸುವಲ್ಲಿ ಸಫಲರಾದರು. ಆದರೆ ಈ ಕರಡಿಯನ್ನು ಹಿಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

    ಇತ್ತೀಚಿಗೆ ಹಲವಾರು ದಿನಗಳಿಂದ ಆಯನೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕರಡಿ ಕಾಣಿಸಿಕೊಳ್ಳುತ್ತಿದೆ. ಇಟ್ಟಿಗೆಹಳ್ಳಿ, ವೀರಣ್ಣನ ಬೆನವಳ್ಳಿ, ಜೋಗ ಹಾಗೂ ಗೊಂದಿಚಟ್ನಳ್ಳಿಯಲ್ಲಿ ಕರಡಿ ಕಾಣಿಸಿಕೊಂಡಿತ್ತು. ಅದೇ ಇಲ್ಲಿಗೆ ಬಂದಿರುವ ಸಾಧ್ಯತೆ ಇದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

    ಕಾಡು ನಾಶವಾಗುತ್ತಿರುವ ಕಾರಣಕ್ಕೆ ಪ್ರಾಣಿಗಳು ಊರಿಗೆ ಬರುವಂತಾಗಿದೆ. ಈ ಕರಡಿ ಬಹು ಅಪರೂಪದ ತಳಿ. ಮೇಲಧಿಕಾರಿಗಳಿಗೆ ವಿಷಯ ತಿಳಿಸಲಾಗಿದೆ. ಅವರ ಅನುಮತಿ ಸಿಕ್ಕ ನಂತರ ಅದನ್ನು ಸೆರೆ ಹಿಡಿಯಲು ಮುಂದಾಗುತ್ತೇವೆ. ಈ ಭಾಗದಲ್ಲಿ ಅಪಾರ ಕಲ್ಲಂಗಡಿ, ಮಾವು, ಸಪೋಟ ಹಣ್ಣುಗಳ ತೋಟಗಳಿದ್ದು ಹಣ್ಣುಗಳ ಆಸೆಯಿಂದ ಅಲ್ಲಿಗೆ ಬಂದಿರಬಹುದು ಎಂದು ಆಯನೂರು ಆರ್​ಎಫ್​ಒ ಕೆ.ರವಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts