More

    ಆಮಿಷವೊಡ್ಡಿ ಚುನಾವಣೇಲಿ ಗೆದ್ದ ಆರೋಪ -ನಾಲ್ವರಿಗೆ ಹೈಕೋರ್ಟ್ ನೋಟಿಸ್ 

    ದಾವಣಗೆರೆ: ಮತದಾರರಿಗೆ ಗಿಫ್ಟ್ ಬಾಕ್ಸ್ ಹಾಗೂ ಹಣ ಹಂಚಿಕೆ ಮಾಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲಾಗಿದೆ ಎಂಬ ಆರೋಪದಡಿ ನಾಲ್ವರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ ಎಂದು ದಾವಣಗೆರೆ ದಕ್ಷಿಣ ಕ್ಷೇತ್ರದ ಪರಾಜಿತ ಅಭ್ಯರ್ಥಿ ಸುಭಾನ್‌ಖಾನ್ ತಿಳಿಸಿದರು.
    ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ರಾಜ್ಯ ಮುಖ್ಯ ಚುನಾವಣಾಧಿಕಾರಿ, ದಾವಣಗೆರೆ ಜಿಲ್ಲಾಧಿಕಾರಿ ಅವರಿಗೆ ಡಿ.4ರಂದು ನೋಟಿಸ್ ಜಾರಿಯಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಮತದಾರರಿಗೆ ಗಿಫ್ಟ್ ಬಾಕ್ಸ್, ಹಣದ ಹಂಚಿಕೆ ಕುರಿತು ಕೆಟಿಜೆ ನಗರ ಮತ್ತು ಗಾಂಧಿನಗರ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದು, ಚುನಾವಣಾ ಅಧಿಕಾರಿಗಳೇ ಇದನ್ನು ಪತ್ತೆ ಹಚ್ಚಿ ದೂರು ದಾಖಲಿಸಿದ್ದರೂ ಕ್ರಮ ವಹಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಜೂನ್ 6ರಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅವರಿಗೆ ದೂರು ಸಲ್ಲಿಸಲಾಗಿತ್ತು. ಅವರೂ ಸಹ ನಿರ್ಲಕ್ಷೃ ತಾಳಿದ್ದರ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ದಾವೆ ಸಲ್ಲಿಸಲಾಗಿತ್ತು ಎಂದು ಮಾಹಿತಿ ನೀಡಿದರು.
    ಪ್ರಕರಣ ದಾಖಲಾಗಿದ್ದರೂ ಸಮರ್ಪಕ ತನಿಖೆ ನಡೆಸದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ವಿರುದ್ಧವೂ ಕ್ರಮ ಜರುಗಿಸುವಂತೆ ಕೋರಿ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು. ಅಲ್ಲಾಭಕ್ಷಿ ಹಾಗೂ ಮಹಮ್ಮದ್ ಪರ್ವೇಜ್ ಸುದ್ದಿಗೋಷ್ಠಿಯಲ್ಲಿದ್ದರು.

    ನೋಟಿಸ್ ಬಂದಿಲ್ಲ: ಚುನಾವಣೆಯಲ್ಲಿ ಹಣ-ಕೊಡುಗೆಗಳ ಬಾಕ್ಸ್ ಹಂಚಿಕೆ ಮಾಡಿದ್ದರ ದೂರಿನ ವಿಚಾರವಾಗಿ ನನಗೆ ಯಾವುದೇ ನೋಟಿಸ್ ಬಂದಿಲ್ಲ. ಯಾವುದೇ ಆಮಿಷವನ್ನೂ ಒಡ್ಡಿರಲಿಲ್ಲ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts