More

    ಆಪರೇಷನ್​ ಚಿರತೆಗೆ ಜನಜಂಗುಳಿ ಅಡ್ಡಿ

    ಬೆಳಗಾವಿ: ಮೂರು ವಾರಗಳಿಂದ ಅರಣ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿರುವ ಚಿರತೆ ಕಾರ್ಯಾಚರಣೆಗೆ ಸಾಮಾಜಿಕ ಕಾರ್ಯಕರ್ತರು ದಾಂಗುಡಿ ಇಡುತ್ತಿರುವುದು ಅಡ್ಡಿಯಾಗುತ್ತಿದೆ. ಅನಗತ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಗೊಂದಲ ಮೂಡಿಸುತ್ತಿರುವುದರಿಂದ ಕಾರ್ಯಾಚರಣೆ ನಿರೀಕ್ಷಿತ ಫಲ ನೀಡುತ್ತಿಲ್ಲ. ಹೊರ ಜಿಲ್ಲೆಯಿಂದ ನುರಿತ ತಂಡಗಳನ್ನು ಕರೆಯಿಸಿ, ತಂತ್ರಗಾರಿಕೆಯಿಂದ ಚಿರತೆ ಬಲೆಗೆ ಬೀಳಿಸುವ ಪ್ರಯತ್ನದಲ್ಲಿರುವ ಅರಣ್ಯ ಇಲಾಖೆ ಕಿರಿಕಿರಿ ಅನುಭವಿಸುತ್ತಿದೆ. ಕಾರ್ಯಾಚರಣೆ ಸ್ಥಳದಲ್ಲಿ ಅನಗತ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸುತ್ತಿರುವುದರಿಂದ ಅವರ ರಕ್ಷಣೆಗೂ ಹೆಚ್ಚಿನ ಗಮನಹರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

    ಸೋಮವಾರ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದರೂ ಸೆರೆಯಾಗದ ಚಿರತೆ ಪತ್ತೆಗೆ ಗಾಲ್ಫ್​ ಮೈದಾನದಲ್ಲಿನ ದಟ್ಟಾರಣ್ಯದಲ್ಲಿ ಸ್ಥಳಿಯ ಎಚ್​ಇಆರ್​ಎಫ್​ ರೆಸ್ಕೂ ತಂಡದ ಇಬ್ಬರು ಸದಸ್ಯರಿಂದ ಮಂಗಳವಾರ ಅತ್ಯಾಧುನಿಕ ಡ್ರೋನ್​ ಕ್ಯಾಮರಾ ಮೂಲಕ ಶೋಧ ಕಾರ್ಯ ನಡೆಯಿತು. ಆದರೂ, ಯಾವುದೇ ಸುಳಿವು ಸಿಗಲಿಲ್ಲ. ಕಾರ್ಯಾಚರಣೆಗೆ ಕೈಜೋಡಿಸಿರುವ ಬೆಳಗಾವಿ ನಗರ ಪೊಲೀಸರು “ಸಾಮಾಜಿಕ ಕಾರ್ಯಕರ್ತರು ಎಂದು ಮೈದಾನಕ್ಕೆ ಬರುವವರನ್ನು ನಿಯಂತ್ರಿಸುವಲ್ಲಿ ವಿಫಲರಾದರು.

    ಇನ್ನು ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕರು ಹಾಗೂ ಅವರೊಂದಿಗಿದ್ದ ಪೊಲೀಸ್​ ಅಧಿಕಾರಿಗಳು ಸಹ ಜನರೊಂದಿಗೆ ಸೆಲ್ಫಿ ಫೋಟೋಗಳಿಗೆ ಪೋಜು ನೀಡುತ್ತಿದ್ದ ವರ್ತನೆಯನ್ನು ದಂಡು ಮಂಡಳಿಯ ಸೇನಾಧಿಕಾರಿಗಳು ಕಂಡು ಅಸಮಾಧಾನ ವ್ಯಕ್ತಪಡಿಸಿದರು.

    ಸಾಮಾಜಿಕ ಕಾರ್ಯಕರ್ತರು ಎಂದು ಹೇಳಿಕೊಂಡು ಅರಣ್ಯದೊಳಗೆ ಬರುವವರ ಸಂಖ್ಯೆ ಹೆಚ್ಚಾಗಿದ್ದು, ಇದರಿಂದ ಚಿರತೆ ಚಲನವಲನಗಳ ಮೇಲೆ ಹೆಚ್ಚಿನ ನಿಗಾ ಸಾಧ್ಯವಾಗುತ್ತಿಲ್ಲ.ಇದರಿಂದಾಗಿ ಚಿರತೆಯಷ್ಟೇ ಅಲ್ಲ, ಇಲಾಖೆ ಸಿಬ್ಬಂದಿಯೂ ಗೊಂದಲಕ್ಕೀಡಾಗುತ್ತಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಕ್ಷಣಾರ್ಧದಲ್ಲಿ ದಿಕ್ಕು ಬದಲಿಸಬಲ್ಲ ಚಿರತೆ ಅರಿವಳಿಕೆ ನೀಡಲು ಚುಚ್ಚುಮದ್ದಿನ ಗುರಿಯಿಟ್ಟು ಕಾಯುವುದೂ ಶೂಟರ್​ಗಳಿಗೂ ತಲೆಬಿಸಿ ತಂದಿದೆ. ಹೀಗಾಗಿ ಗಾಲ್ಫ್​ ಮೈದಾನದಲ್ಲಿನ ದಟ್ಟಾರಣ್ಯದಲ್ಲಿ ಕಣ್ಗಾವಲು ಇಡುವುದಕ್ಕಾಗಿ ಅರಣ್ಯ ಇಲಾಖೆ ಮೂರು ವಾಚ್​ ಮಚಾನ್​ ನಿರ್ಮಾಣ ಮಾಡುತ್ತಿದ್ದು, ಇನ್ನೆರಡು ದಿನಗಳಲ್ಲಿ ಪೂರ್ಣಗೊಂಡ ಬಳಿಕ ಅವುಗಳ ಮೇಲಿಂದ ಚಿರತೆ ಚಲನವಲನಗಳ ಮೇಲೆ ನಿಗಾ ಇಟ್ಟು, ಸೆರೆ ಹಿಡಿಯಲು ಸಿದ್ಧತೆ ನಡೆಸಿದೆ.

    ಇಂದಿನಿಂದ ಆನೆಗಳ ಬಳಕೆ: ಜಾಧವ ನಗರದಲ್ಲಿ ವ್ಯಕ್ತಿ ಮೇಲೆ ದಾಳಿ ನಡೆಸಿ, ಪರಾರಿಯಾಗಿರುವ ಚಿರತೆ ಪತ್ತೆಗೆ ಅರಣ್ಯ ಇಲಾಖೆ ನಾನಾ ರೀತಿಯ ಕಸರತ್ತು ನಡೆಸಿದೆ. ಬೋನಿನಲ್ಲಿ ಶ್ವಾನ ಹಾಗೂ ಅರಣ್ಯ ಸಿಬ್ಬಂದಿಗಳಿದ್ದುಕೊಂಡು ಕಾಯ್ದರೂ ಚಿರತೆ ಬೋನಿಗೆ ಬಿದ್ದಿಲ್ಲ. ಹುಕ್ಕೇರಿಯ ಭೇಟೆ ನಾಯಿಗಳ ಬಳಕೆಯೂ ಫಲಿಸಿಲ್ಲ. ಹೀಗಾಗಿ ಆನೆಗಳ ಮೊರೆ ಹೋಗಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿನಿಂದ ಆನೆಗಳು ಮಂಗಳವಾರ ರಾತ್ರಿ ಬೆಳಗಾವಿಯ ಗಾಲ್ಫ್​ ಮೈದಾನಕ್ಕೆ ಬರುವ ಸಾಧ್ಯತೆ ಇದ್ದು, ಅರಣ್ಯ ಸಿಬ್ಬಂದಿ ಗಿಡಗಂಟಿಗಳಲ್ಲಿ ಅಡಗಿ ಕುಳಿತು ಚಿರತೆಯನ್ನು ಆನೆಗಳ ಮೂಲಕ ಹೊರಬರುವಂತೆ ಮಾಡುವ ಲೆಕ್ಕಾಚಾರ ಅರಣ್ಯ ಇಲಾಖೆಯದ್ದಾಗಿದೆ.

    ಬೋನಿಗೆ ಬೀಳದ ಚಾಲಾಕಿ ಚಿರತೆ!: ಸಾಮಾನ್ಯವಾಗಿ ಹೆಗ್ಗಣದಿಂದ ಹಿಡಿದು ಒಂಟೆವರೆಗಿನ ಎಲ್ಲ ಪ್ರಾಣಿಗಳನ್ನು ಆಹಾರವನ್ನಾಗಿಸಿಕೊಂಡಿರುವ ಚಿರತೆ ಈಗಾಗಲೇ ಬೋನಿಗೆ ಬೀಳಬೇಕಿತ್ತು. ಆದರೆ, ಇದು ಮಾತ್ರ ಯಾವುದಕ್ಕೂ ಸೊಪ್ಪು ಹಾಕುತ್ತಿಲ್ಲ. ಇದೇ ಚಿರತೆ ಹಿಂದೆ ಇದು ಒಂದೆರಡು ಬಾರಿ ಬೋನಿಗೆ ಬಿದ್ದಿರಬಹುದು. ಹೀಗಾಗಿ ಬೋನಿನ ಬಗ್ಗೆ ಚಿರತೆ ಜಾಗೃತವಾಗಿದೆ. ಇಲ್ಲವಾಗಿದ್ದರೆ ಸೋಮವಾರದ ಕಾರ್ಯಾಚರಣೆಯಲ್ಲೇ ಸೆರೆಯಾಗುತ್ತಿತ್ತು ಎನ್ನುತ್ತಾರೆ ಡಿಎಫ್​ಒ ಆ್ಯಂಥೋನಿ ಮರಿಯಪ್ಪ.

    ಇನ್ನು ಚಿರತೆ ಗಾಲ್ಫ್​ ಮೈದಾನದ ಸುತ್ತಮುತ್ತ ಭೇಟಿ ನೀಡಿರುವ ಕುರುಹುಗಳಿಲ್ಲ. ಸಾಮಾನ್ಯವಾಗಿ ಚಿರತೆ ಒಮ್ಮೆ ಹೊಟ್ಟೆ ತುಂಬ ಆಹಾರ ಸೇವಿಸಿದರೆ, ಎರಡ್ಮೂರು ದಿನ ಮತ್ತೊಂದು ಭೇಟೆ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಆದರೂ, ವೈಜ್ಞಾನಿಕ ನೆಲೆಗಟ್ಟಿನಲ್ಲಿ ಮೇಲೆ ಕಾರ್ಯಾಚರಣೆ ಮುಂದುವರಿಸಿದ್ದು, ಚಿರತೆ ಸುಳಿದಾಡುವ ಮಾರ್ಗದಲ್ಲಿ ಬೋನುಗಳನ್ನಿಟ್ಟು ನಿಗಾವಹಿಸಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts