More

    ಆನೆಹೊಂಡ ಕೆರೆಗೆ ಅಪಾಯ

    ಶಿರಸಿ: ಇಲ್ಲಿನ ಆನೆಹೊಂಡ ಕೆರೆಗೆ ನೂತನ ಪೊಲೀಸ್ ವಸತಿ ಗೃಹದ ಚರಂಡಿಯ ಕೊಳಚೆ ನೀರು ಸೇರುತ್ತಿದೆ. ಸಾರ್ವಜನಿಕ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿರುವ ಈ ಕೆರೆಗೆ ಗಲೀಜು ಸೇರುತ್ತಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ನಗರದ ಎಸ್​ಬಿಐ ಸರ್ಕಲ್ ಬಳಿ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಲಭ್ಯ ನಿಗಮದ ಮೂಲಕ ನಿರ್ಮಾಣ ಮಾಡಿರುವ ವಸತಿ ಕಟ್ಟಡದಿಂದ ಹೊರಬರುವ ಕೊಳಚೆ ನೀರು ಆನೆಹೊಂಡ ಕೆರೆ ಸುತ್ತ ಹರಿಯುತ್ತಿದೆ. ವಸತಿ ಗೃಹದ ನೀರು ಆವರಣದೊಳಗೆ ಇಂಗಲು ಸೂಕ್ತ ವ್ಯವಸ್ಥೆ ಮಾಡದ ಕಾರಣಕ್ಕೆ ತೆರೆದ ಚರಂಡಿ ಮೂಲಕ ಹರಿಯುವ ನೀರು ಕೆರೆಯ ಸ್ವಾಸ್ಥ್ಯ ಕೆಡಿಸುತ್ತಿದೆ. ಪ್ರಸ್ತುತ ವಸತಿ ಕಟ್ಟಡದಲ್ಲಿ 24 ಪೊಲೀಸ್ ಕಾನ್​ಸ್ಟೇಬಲ್ ಹಾಗೂ ಇಬ್ಬರು ಪಿಎಸ್​ಐಗಳಿಗೆ ಮನೆ ಹಂಚಿಕೆ ಮಾಡಲಾಗಿದೆ. ಶೌಚಗೃಹದ ನೀರು ಇಂಗಲು ಮಾತ್ರ ಆವರಣದೊಳಗೆ ವ್ಯವಸ್ಥೆ ಮಾಡಲಾಗಿದ್ದು, ಉಳಿದೆಲ್ಲ ಕೊಳಚೆ ಚರಂಡಿಗೆ ಸೇರುತ್ತದೆ.

    ಇಂಗುವ ನೀರು ಕೆರೆಗೆ: ಜನರ ಸಹಭಾಗಿತ್ವ, ಶಿರಸಿ ಜೀವಜಲ ಕಾರ್ಯಪಡೆ ನೇತೃತ್ವದಲ್ಲಿ ಪುನರುಜ್ಜೀವನಗೊಂಡ ಆನೆಹೊಂಡವು ಪೊಲೀಸ್ ವಸತಿ ಗೃಹದ ಸಮೀಪದಲ್ಲೇ ಇದೆ. ವಸತಿ ಗೃಹದ ಕೊಳಚೆ ನೀರೆಲ್ಲ ಆನೆಹೊಂಡದಿಂದ ಮೇಲ್​ಹಂತದಲ್ಲಿನ ಕಾಲುವೆ ಮಾರ್ಗವಾಗಿಯೇ ಮುಂದೆ ಸಾಗಬೇಕು. ಹೀಗೆ ಸಾಗುವಾಗ ಇಂಗುವ ನೀರು ಆನೆಹೊಂಡಕ್ಕೆ ಸೇರಿ ಕಲ್ಮಶಗೊಳಿಸುತ್ತಿದೆ.

    ಈ ಕೊಳಚೆ ನೀರು ಸೇರುತ್ತಿರುವುದರಿಂದ ಕೆರೆಯ ಹತ್ತಿರವಿರುವ ತೆರೆದ ಬಾವಿಯ ನೀರಿನಲ್ಲಿ ಕೂಡ ಹುಳುಗಳಾಗಿವೆ. ಹೀಗಾಗಿ, ಅನಿವಾರ್ಯ ಸಂದರ್ಭದಲ್ಲಿ ಈ ನೀರು ಬಳಕೆಗೆ ಅಯೋಗ್ಯವಾಗುತ್ತಿದೆ. ಗಲೀಜು ನೀರು ತೆರೆದ ವಾತಾವರಣದಲ್ಲಿ ಹರಿಯುವ ಕಾರಣಕ್ಕೆ ಸುತ್ತಮುತ್ತಲ ಪ್ರದೇಶ ಗಬ್ಬು ನಾರುತ್ತಿದ್ದು, ಜನಸಂಚಾರಕ್ಕೂ ತೊಡಕಾಗಿದೆ.

    ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೆರೆ ಹೂಳೆತ್ತಲಾಗಿದೆ. ಆದರೆ, ರಾಜ್ಯ ಪೊಲೀಸ್ ವಸತಿ ಮತ್ತು ಮೂಲ ಸೌಲಭ್ಯ ನಿಗಮವು ನಿರ್ವಿುಸಿದ ಕಟ್ಟಡದ ಕೊಳಚೆ ನೀರಿನಿಂದ ಕೆರೆ ಹಾಳಾಗುವ ಅಪಾಯವಿದೆ. ತೆರೆದ ಚರಂಡಿಗೆ ಕೊಳಚೆ ನೀರು ಸೇರಿಸುವ ಬದಲು ಪೊಲೀಸ್ ವಸತಿ ಗೃಹದ ಆವರಣದಲ್ಲಿಯೇ ಈ ನೀರನ್ನು ಇಂಗುವಂತೆ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನ ನೀಡಬೇಕು.
    | ವಾಗೀಶ ನಾಯ್ಕ- ಶಿರಸಿ ನಿವಾಸಿ

    ಪೊಲೀಸ್ ವಸತಿ ಗೃಹಗಳ ನೀರು ತೆರೆದ ಚರಂಡಿ ಮೂಲಕ ಹರಿದು ಆನೆಹೊಂಡ ಕೆರೆಗೆ ಇಂಗುವ ವಿಚಾರದ ಕುರಿತು ಪರಿಶೀಲಿಸಲಾಗುವುದು. ಕೊಳಚೆ ನೀರು ತೆರೆದ ಚರಂಡಿಗೆ ಬಿಡುವ ಬದಲು ಬೇರೆ ವ್ಯವಸ್ಥೆ ಮಾಡಲು ಗುತ್ತಿಗೆದಾರರಿಗೆ ತಿಳಿಸಲಾಗುವುದು.
    ಜಿ.ಟಿ.ನಾಯಕ- ಡಿಎಸ್​ಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts