More

    ಆನಂದ್ ದೇವಾಡಿಗ ಕುಟುಂಬಕ್ಕೆ ನೆರವು

    ಮೂಡಿಗೆರೆ: ಕಳೆದೆರಡು ದಶಕಗಳಿಂದ ಬೆಳೆ ಹಾನಿ ಜತೆಗೆ ನರಬಲಿ ಪಡೆಯುತ್ತಿರುವ ಕಾಡಾನೆ ಸೇರಿ ಇನ್ನಿತರ ಪ್ರಾಣಿಗಳನ್ನು ಸೆರೆಹಿಡಿದು ಬೇರೆಡೆಗೆ ಸಾಗಿಸಬೇಕು. ಇಲ್ಲವಾದಲ್ಲಿ ರೈತರೊಂದಿಗೆ ಜಿಲ್ಲಾಧಿಕಾರಿ ಮತ್ತು ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಎಚ್ಚರಿಸಿದರು. ಕೆಂಜಿಗೆ ಗ್ರಾಮದಲ್ಲಿ ಕಾಡಾನೆಯಿಂದ ಹಾನಿಯಾದ ಕಾಫಿ ತೋಟ, ಕಾಡಾನೆ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಅಳವಡಿಸಿರುವ ಟೆಂಟಕಲ್ ಐಬೆಕ್ಸ್ ಬೇಲಿಯನ್ನು ಶನಿವಾರ ವೀಕ್ಷಿಸಿದ ಬಳಿಕ ಕಾಡಾನೆ ದಾಳಿಗೆ ಬಲಿಯಾದ ಹಾಗೋಡಿನ ಆನಂದ ದೇವಾಡಿಗ ಅವರ ಕುಟುಂಬಕ್ಕೆ ಧನಸಹಾಯ ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

    ತತ್ಕೊಳ, ಕುಂದೂರು, ತಳವಾರ, ಹುಲ್ಲೆಮನೆ, ಸಾರಗೋಡು, ಕೆಂಜಿಗೆ ಭಾಗದಲ್ಲಿ 10 ಕಾಡಾನೆಗಳು, ಊರುಬಗೆ, ಬೈರಾಪುರ, ಹೊಸಕೆರೆ, ಮೂಲರಹಳ್ಳಿ, ಗುತ್ತಿಹಳ್ಳಿ, ಹೆಸಗೋಡು, ಬಿಳ್ಳೂರು, ಗೌಡಹಳ್ಳಿ, ಹಳೇಕೆರೆ ಭಾಗದಲ್ಲಿ 3 ಕಾಡಾನೆಗಳ ಹಿಂಡು ನಿರಂತರವಾಗಿ ಕಾಫಿ, ಬಾಳೆ, ಅಡಕೆ ತೋಟವನ್ನು ಧ್ವಂಸಗೊಳಿಸುತ್ತಿವೆ. ಗದ್ದೆಯನ್ನು ತುಳಿದು ಹಾನಿಗೊಳಿಸುವ ಭಯದಲ್ಲಿ ಸುಮಾರು 200 ಎಕರೆ ಗದ್ದೆಯನ್ನು ರೈತರು ಪಾಳುಬಿಟ್ಟಿದ್ದಾರೆ ಎಂದರು. ಮೀಸಲು ಅರಣ್ಯದಲ್ಲಿ ಕಾಡಾನೆಗಳು ವಾಸಿಸುತ್ತಿವೆ. ಇದರ ಸುತ್ತಲೂ ಜನವಸತಿ ಪ್ರದೇಶಗಳು ಮತ್ತು ಕಾಫಿ ತೋಟಗಳಿವೆ. ಆನೆಗಳು ಜನವಸತಿ ಪ್ರದೇಶ ಮತ್ತು ಜಮೀನಿಗೆ ಪ್ರವೇಶಿಸದಂತೆ ರೈಲ್ವೆ ಬ್ಯಾರಿಕೇಡ್ ಅಥವಾ ಟೆಂಟಕಲ್ ಐಬೆಕ್ಸ್ ಬೇಲಿ ನಿರ್ವಿುಸಬೇಕು. ಈಗಾಗಲೇ ಕೆಂಜಿಗೆಯಿಂದ ದೊಡ್ಡಹಳ್ಳದವರೆಗೆ 12 ಕಿಮೀ ಬೇಲಿ ನಿರ್ವಿುಸಿರುವುದರಿಂದ ಕೆಂಜಿಗೆ ಜನವಸತಿ ಪ್ರದೇಶಕ್ಕೆ ಕಾಡಾನೆ ಬರದಂತೆ ತಡೆಯಲಾಗಿದೆ. ಆದರೆ ಇದೇ ಪರಿಸರದ ಕಾಫಿ ತೋಟಕ್ಕೆ ನುಗ್ಗಿ ದಾಂಧಲೆ ನಡೆಸುತ್ತಿರುವ ಕಾಡಾನೆಗಳನ್ನು ಬೇರೆಡೆಗೆ ಸಾಗಿಸಲು ಅರಣ್ಯ ಇಲಾಖೆಗೆ ಸರ್ಕಾರ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts