More

    ಆಧುನಿಕ ಕೌಶಲ ಕಲಿಸಲು ಆದ್ಯತೆ: ಸಚಿವ ಅಶ್ವತ್ಥನಾರಾಯಣ ಹೇಳಿಕೆ

    ವಿಜಯವಾಣಿ ಸುದ್ದಿಜಾಲ ಬೆಂ. ಗ್ರಾಮಾಂತರ
    ರಾಜ್ಯದಲ್ಲೇ ಪ್ರಸ್ತುತ ದೇವನಹಳ್ಳಿ ಮತ್ತು ರಾಮನಗರ ಪ್ರದೇಶದಲ್ಲಿ ಅತ್ಯಧಿಕ ಆಧುನಿಕ ಕೈಗಾರಿಕೆಗಳು ಬರುತ್ತಿವೆ. ದೇವನಹಳ್ಳಿ ಭವಿಷ್ಯದಲ್ಲಿ ಅತ್ಯುತ್ತಮ ಕೈಗಾರಿಕಾವಲಯವಾಗಿ ಗುರುತಿಸಿಕೊಳ್ಳಲಿದೆ ಇದನ್ನು ಪರಿಗಣಿಸಿ ಖುದ್ದು ಆಸಕ್ತಿ ವಹಿಸಿ ಈ ಜಿಟಿಟಿಸಿ ಕೇಂದ್ರ ಇಲ್ಲಿ ಅಸ್ತಿತ್ವಕ್ಕೆ ಬರುವಂತೆ ಮಾಡಲಾಗಿದೆ ಎಂದು ಕೌಶಲಾಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
    ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಗ್ರಾಮದಲ್ಲಿ 5 ಎಕರೆ ಪ್ರದೇಶದಲ್ಲಿ 47.61 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವನ್ನು (ಜಿಟಿಟಿಸಿ) ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಇಂದು ಗುಣಮಟ್ಟದ ಕಲಿಕೆ ಮತ್ತು ಕೌಶಲಾಭಿವೃದ್ಧಿ ಎರಡೂ ಅತ್ಯವಶ್ಯಕವಾಗಿವೆ. ದಕ್ಷಿಣ ಕೊರಿಯಾದ ಜನಸಂಖ್ಯೆಯಲ್ಲಿ ಶೇ.95 ಜನರಿಗೆ ಕೌಶಲಗಳಿವೆ. ಇದರಂತೆ ನಮ್ಮಲ್ಲೂ ಯುವಜನರಿಗೂ ಆಧುನಿಕ ಕೌಶಲ ಕಲಿಸಲಾಗುತ್ತಿದೆ. ಈ ಮೂಲಕ ಪ್ರತಿಯೊಬ್ಬರಲ್ಲೂ ಉದ್ಯೋಗಾರ್ಹತೆ ಬೆಳೆಸಲಾಗುತ್ತಿದೆ ಎಂದು ಹೇಳಿದರು.
    ನೂತನ ಜಿಟಿಟಿಸಿ ಕೇಂದ್ರದಲ್ಲಿ ಟೂಲ್ ಡೈ ಮೇಕಿಂಗ್, ಮೆಕ್ಯಾಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಸೈನ್ಸ್ ಡಿಪ್ಲೊಮಾ ಕೋರ್ಸ್‌ಗಳಿವೆ. ಜತೆಗೆ 100ಕ್ಕೂ ಹೆಚ್ಚು ಅಲ್ಪಾವಧಿ ಕೋರ್ಸ್‌ಗಳಿವೆ. ಯುವಜನರು ಇಂತಹ ಅತ್ಯಾಧುನಿಕ ಕೋರ್ಸ್‌ಗಳ ಲಾಭ ಪಡೆದುಕೊಳ್ಳಬೇಕು ಎಂದು ಸಚಿವರು ಕರೆ ಕೊಟ್ಟರು. ಜಿಟಿಟಿಸಿ ಕೇಂದ್ರದಲ್ಲಿ ವರ್ಷಕ್ಕೆ 600 ಜನರಿಗೆ ತರಬೇತಿ ಕೊಡಲಾಗುವುದು. ಜತೆಗೆ 3 ವರ್ಷದ ಬಳಿಕ ಸ್ಟೈಪೆಂಡ್ ಸಹಿತ ಇಂಟರ್‌ಶ್ಿಗೆ ಅವಕಾಶವಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ಉತ್ತೀರ್ಣರಾದ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
    ದೇವನಹಳ್ಳಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರವನ್ನಾಗಿ ಮಾಡಲಾಗುವುದು ಎಂದು ಸರ್ಕಾರ ಈಗಾಗಲೇ ಘೋಷಿಸಿದೆ. ಜತೆಗೆ ನೀರಿನ ಅನುಕೂಲ ಒದಗಿಸಲು ಅನೇಕ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts