More

    ಆಧಾರ್ ಕಾರ್ಡ್ ಸಮಸ್ಯೆ ಪರಿಹರಿಸಲು ಆಗ್ರಹಿಸಿ ಸಾರ್ವಜನಿಕರ ಪ್ರತಿಭಟನೆ

    ಲಕ್ಷ್ಮೇಶ್ವರ: ಆಧಾರ್ ಕಾರ್ಡ್ ತಿದ್ದುಪಡಿ, ಸೇರ್ಪಡೆ, ಹೊಸ ಕಾರ್ಡ್ ಮಾಡಿಸಲು ಇರುವ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಪಟ್ಟಣದ ನೆಮ್ಮದಿ ಕೇಂದ್ರದ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

    ‘ಆಧಾರ್ ಕಾರ್ಡ್ ಸಮಸ್ಯೆ ನಿವಾರಿಸಿಕೊಳ್ಳಲು ತಿಂಗಳಿಂದ ಅಲೆದಾಡುತ್ತಿದ್ದೇವೆ. ಆದರೆ, ಪ್ರತಿದಿನ ಕೇವಲ 10-20 ಜನರ ಆಧಾರ್ ಕಾರ್ಡ್ ಮಾಡಿ ಉಳಿದವರನ್ನು ವಾಪಸ್ ಕಳುಹಿಸಲಾಗುತ್ತಿದೆ. ನಮಗೆ ಇವತ್ತೇ ಕಾರ್ಡ್​ನಲ್ಲಿನ ಸಮಸ್ಯೆ ಸರಿಪಡಿಸಿಕೊಡಬೇಕು’ ಎಂದು ಜನರು ಕೇಂದ್ರದ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡರು.

    ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಸ್ಥಳಕ್ಕಾಗಮಿಸಿದಾಗ, ತಾಲೂಕಿನ ಸೂರಣಗಿ ಗ್ರಾಮದ ವ್ಯಕ್ತಿಯೊಬ್ಬರು ‘ನಸುಕಿನಲ್ಲೇ ಬಂದು ಸೊಳ್ಳೆ ಕಡಿಸಿಕೊಳ್ಳುತ್ತ ಸರದಿ ಸಾಲಿನಲ್ಲಿ ನಿಂತಿದ್ದೇವೆ. ಸಣ್ಣ ಮಕ್ಕಳು, ವೃದ್ಧರ ಆಧಾರ್ ಕಾರ್ಡ್ ಪಡೆದುಕೊಳ್ಳಲು ಪರದಾಡುವಂತಾಗಿದೆ. ಸಿಬ್ಬಂದಿ ದಿನಕ್ಕೆ ಕೇವಲ 10-15 ಕಾರ್ಡ್ ಮಾಡಿ ಎದ್ದು ಹೋಗುತ್ತಿದ್ದಾರೆ. ಕೇಳಿದರೆ ಸರಿಯಾಗಿ ಸ್ಪಂದಿಸುವುದಿಲ್ಲ. ನಿತ್ಯ ಕೆಲಸ ಬಿಟ್ಟು ಇದಕ್ಕಾಗಿಯೇ ಸಮಯ ಹಾಳುಮಾಡುವಂತಾಗಿದೆ. ದಿನಕ್ಕೆ 50 ಕಾರ್ಡ್​ಗಳನ್ನು ಮಾಡಬೇಕು’ ಎಂದು ಪಟ್ಟು ಹಿಡಿದರು.

    ರಾಮಗೇರಿ ಗ್ರಾಮದ ಸೋಮಣ್ಣ ಬೆಟಗೇರಿ ಮಾತನಾಡಿ, ತಾಲೂಕು ಕೇಂದ್ರವಾಗಿದ್ದರಿಂದ ಇನ್ನೂ ಎರಡು ಆಧಾರ್ ನೋಂದಣಿ ಕೇಂದ್ರಗಳನ್ನು ತೆಗೆದರೆ ಹೆಚ್ಚು ಅನುಕೂಲ. ಈ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತಂದು ತಕ್ಷಣ ಕ್ರಮ ತೆಗೆದುಕೊಳ್ಳುವದು ಅವಶ್ಯವಾಗಿದೆ ಎಂದರು.

    ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಅವರು ಸಾರ್ವಜನಿಕರನ್ನು ಸಮಾಧಾನಪಡಿಸಿ ಕೇಂದ್ರದ ಸಿಬ್ಬಂದಿಗೆ ಜನರೊಂದಿಗೆ ಸೌಜನ್ಯ, ಸಮಾಧಾನದಿಂದ ನಡೆದುಕೊಳ್ಳಬೇಕು. ಬೆಳಗ್ಗೆ 9 ಗಂಟೆಗೆ ಕೇಂದ್ರವನ್ನು ಪ್ರಾರಂಭಿಸಿ ಸಾಧ್ಯವಾದಷ್ಟು ಹೆಚ್ಚುವರಿ ಕಾರ್ಯ ನಿರ್ವಹಿಸಬೇಕು. ಸಾರ್ವಜನಿಕರಿಂದ ಪದೇಪದೆ ಆರೋಪಗಳು ಬರದಂತೆ ನೋಡಿಕೊಳ್ಳಿ ಎಂದು ಸೂಚಿಸಿದರು.

    ಕಂದಾಯ ನಿರೀಕ್ಷಕ ಬಿ.ಎಂ. ಕಾತರಾಳ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts