More

    ಆದೇಶ ಕಾಯ್ದಿರಿಸಿದ ಕೋರ್ಟ್

    ಹುಬ್ಬಳ್ಳಿ: ದೇಶದ್ರೋಹಿ ಘೊಷಣೆ ಕೂಗಿದ ಆರೋಪದಡಿ ಬಂಧಿಸಲ್ಪಟ್ಟಿರುವ ಮೂವರು ಕಾಶ್ಮೀರಿ ವಿದ್ಯಾರ್ಥಿಗಳ ಜಾಮೀನು ಅರ್ಜಿಯ ವಾದ ಪ್ರತಿವಾದವನ್ನು ಗುರುವಾರ ಆಲಿಸಿದ 5ನೇ ಹೆಚ್ಚುವರಿ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಾ.9ಕ್ಕೆ ಆದೇಶ ಕಾಯ್ದಿರಿಸಿತು.

    ಪಾಕ್ ಪರ ಘೊಷಣೆ ಕೂಗಿದ ಆರೋಪದಡಿ ಫೆ.17ರಿಂದ ನ್ಯಾಯಾಂಗ ಬಂಧನದಲ್ಲಿರುವ ಕಾಶ್ಮೀರ ಮೂಲದ ಬಾಸಿತ್, ತಾಲಿಬ್ ಹಾಗೂ ಅಮೀರ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದರು. ಗುರುವಾರ ಸರ್ಕಾರಿ ಅಭಿಯೋಜಕಿ ಸುಮಿತ್ರಾ ಅಂಚಟಗೇರಿ ತಕರಾರು ಅರ್ಜಿ ಸಲ್ಲಿಸಿದ ಬಳಿಕ ವಾದ ವಿವಾದ ನಡೆಸಲು ಕೋರ್ಟ್ ಅನುಮತಿ ನೀಡಿತು.

    ಕಾಶ್ಮೀರಿ ವಿದ್ಯಾರ್ಥಿಗಳ ಪರ ವಕೀಲ, ಬೆಂಗಳೂರಿನ ಬಿ.ಟಿ. ವೆಂಕಟೇಶ ಮೊದಲು ಸುದೀರ್ಘ ವಾದ ಮಂಡಿಸಿದರು. ‘ನಮ್ಮ ಕಾಲೇಜಿನಲ್ಲಿ ಬೇರೆ ಬೇರೆ ಜನಾಂಗದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ. ಪ್ರೇರಣಾ ಹಾಸ್ಟೆಲ್​ನಲ್ಲಿ ಮತೀಯ ಭಾವನೆ ಕೆರಳಿಸುವ ಘೊಷಣೆ ಕೂಗಿದ್ದ ವಿಡಿಯೋ ಮಾಡಿ ನಂತರ ಡಿಲೀಟ್ ಮಾಡಿದ್ದ ಅಪರಾಧ’ ಎಂದು ಪ್ರಾಂಶುಪಾಲರು ದೂರಿನಲ್ಲಿ ತಿಳಿಸಿದ್ದಾರೆ. ಅವರೇ ಹೇಳಿದ ಪ್ರಕಾರ ವಿಡಿಯೋ ಡಿಲೀಟ್ ಮಾಡಿದ್ದಾರೆ. ಅದರಿಂದ ಯಾರಿಗೆ ತೊಂದರೆಯಾಗಿದೆ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ನ್ಯಾಯಾಧೀಶರು, ‘ನೋಡಿ ನ್ಯಾಯಾಲಯದಲ್ಲೇ ಇಷ್ಟೊಂದು ಜನ ಸೇರಿದ್ದಾರೆ. ಇವರಿಗೆಲ್ಲ ತೊಂದರೆಯಾಗಿದೆ’ ಎಂದು ಉದಾಹರಣೆ ನೀಡಿದರು.

    ಹುಬ್ಬಳ್ಳಿ- ಧಾರವಾಡ ಪೊಲೀಸರು ಆರೋಪಿಗಳಿಗೆ ಸಿಆರ್​ಸಿ 169 ಅಡಿ ಬಾಂಡ್ ಮೇಲೆ ಬಿಡುಗಡೆ ಮಾಡಿದ್ದರು. ಅದೇ ರೀತಿ ನ್ಯಾಯಾಲಯ ಜಾಮೀನು ನೀಡಬಹುದು ಎಂದು ವಕೀಲ ವೆಂಕಟೇಶ ವಾದಿಸಿದರು. ಸರ್ಕಾರದ ಪರ ವಾದ ಮಂಡಿಸಿದ ಸರ್ಕಾರಿ ಅಭಿಯೋಜಕಿ ಸುಮಿತ್ರಾ ಅಂಚಟಗೇರಿ, ಕಾಶ್ಮೀರ ಮೂಲದ ಆರೋಪಿಗಳಿಗೆ ಜಾಮೀನು ನೀಡಿದರೆ ಸಾಕ್ಷಿ ನಾಶ ಮಾಡುವ ಸಾಧ್ಯತೆ ಇದೆ. ಹಾಗಾಗಿ, ಜಾಮೀನು ನೀಡಬಾರದು ಎಂದು ವಾದಿಸಿದರು.

    ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಮಾ. 9ಕ್ಕೆ ಜಾಮೀನು ಅರ್ಜಿ ಕುರಿತ ಆದೇಶ ಕಾಯ್ದಿರಿಸಿದರು.

    ಪೊಲೀಸ್ ಆಯುಕ್ತರ ವಿರುದ್ಧ್ಧ ಆಕ್ರೋಶ: ದೇಶದ್ರೋಹಿ ಘೊಷಣೆ ಕೂಗಿದ್ದ ಕಾಶ್ಮೀರಿ ವಿದ್ಯಾರ್ಥಿಗಳ ಪ್ರಕರಣದಲ್ಲಿ ಹು-ಧಾ ಪೊಲೀಸ್ ಆಯುಕ್ತರು ಕರ್ತವ್ಯ ಲೋಪ ಎಸಗಿದ್ದು, ಅದರ ಆಧಾರದಲ್ಲಿ ಆರೋಪಿಗಳ ಪರ ವಕೀಲರು ಗುರುವಾರ ಜಾಮೀನು ಕೇಳಿದ್ದಾರೆ ಎಂದು ಯುವ ವಕೀಲರ ಸಂಘದ ಅಧ್ಯಕ್ಷ ಅಶೋಕ ಅಣವೇಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಆರ್​ಪಿಸಿ ಕಾಯ್ದೆ 169 ಅಡಿ ಬಾಂಡ್ ಮೇಲೆ ಆರೋಪಿಗಳನ್ನು ಬಿಡುಗಡೆ ಮಾಡಿದ್ದರು. ನ್ಯಾಯಾಲಯವೂ ಇದೇ ರೀತಿ ಜಾಮೀನು ನೀಡಬೇಕು ಎಂದು ವಕೀಲರು ವಾದಿಸಿದ್ದಾರೆ. ಒಂದು ವೇಳೆ ಜಾಮೀನು ಸಿಕ್ಕರೆ ಪೊಲೀಸ್ ಆಯುಕ್ತರೇ ಹೊಣೆ ಎಂದು ಅಣವೇಕರ ಆಯುಕ್ತರ ನಡೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಅಮೆರಿಕ ಜಿಂದಾಬಾದ್ ಪ್ರಸ್ತಾಪ !: ಕಾಶ್ಮೀರಿ ವಿದ್ಯಾರ್ಥಿಗಳು ಪಾಕಿಸ್ತಾನ ಜಿಂದಾಬಾದ್ ಎಂದಿದ್ದು, ಜಿಂದಾಬಾದ್ ಎಂದರೆ ಆ ದೇಶವನ್ನು ನಾನು ಪ್ರೀತಿಸುತ್ತೇನೆ ಎಂದರ್ಥ. ಅದೇ ರೀತಿ ಅಮೆರಿಕ ಜಿಂದಾಬಾದ್, ಇಂಗ್ಲೆಂಡ್ ಜಿಂದಾಬಾದ್ ಎಂದರೆ ತಪ್ಪಾಗುವುದಿಲ್ಲ ಎಂದು ವಕೀಲ ವೆಂಕಟೇಶ ವಾದಿಸಿದರು. ಅಮೆರಿಕ ಮಿತ್ರ ರಾಷ್ಟ್ರ, ಪಾಕಿಸ್ತಾನ ಶತ್ರುರಾಷ್ಟ್ರ. ಹಾಗಾಗಿ, ಶತ್ರು ರಾಷ್ಟ್ರ ಹೊಗಳುವುದು ಎಷ್ಟು ಸರಿ ಎಂದು ನ್ಯಾಯಾಧೀಶರು ಹೇಳಿದರು. ಈ ಮಾತಿಗೆ ನ್ಯಾಯಾಲಯದಲ್ಲಿ ನೆರೆದಿದ್ದ ವಕೀಲರು ಚಪ್ಪಾಳೆ ಹೊಡೆದರು. ಚಪ್ಪಾಳೆ ಹೊಡೆಯದಂತೆ ನ್ಯಾಯಾಧೀಶರು ಸೂಚಿಸಿದರು.

    9 ವಕೀಲರ ತಂಡ: ಪಾಕ್ ಪರ ಘೊಷಣೆ ಕೂಗಿದ್ದ ಆರೋಪಿಗಳ ಪರ ಬೆಂಗಳೂರಿನ ವಕೀಲರಾದ ಬಿ.ಟಿ. ವೆಂಕಟೇಶ, ಮೈತ್ರೇಯಿ ಕೃಷ್ಣನ್ ನೇತೃತ್ವದ 9 ವಕೀಲರ ತಂಡ ಗುರುವಾರ ನ್ಯಾಯಾಲಯಕ್ಕೆ ಹಾಜರಾಗಿತ್ತು.

    ಆಯುಕ್ತರ ನೇತೃತ್ವದಲ್ಲಿ ಭದ್ರತೆ: ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳ ಪರ ವಕೀಲರಿಗೆ ಸ್ವತಃ ಪೊಲೀಸ್ ಆಯುಕ್ತ ಆರ್. ದಿಲೀಪ, ಡಿಸಿಪಿ ಕೃಷ್ಣಕಾಂತ್ ನೇತೃತ್ವದಲ್ಲಿ ಭಾರಿ ಭದ್ರತೆ ನೀಡಲಾಗಿತ್ತು. ವಕೀಲರು ಬಂದು ವಾಪಸ್ ಹೋಗುವವರೆಗೂ ಪೊಲೀಸ್ ಆಯುಕ್ತರು ಸ್ಥಳದಲ್ಲೇ ಇದ್ದು ಭದ್ರತೆ ಕೈಗೊಂಡಿದ್ದರು. ವಕೀಲರು ತಂಗಿದ್ದ ಲ್ಯಾಮಿಂಗ್ಟನ್ ರಸ್ತೆಯ ಅಶೋಕ ಹೋಟೆಲ್ ಬಳಿಯೂ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts