More

    ಆದಾಯ ಮಿತಿ ಕೈಬಿಡುವ ಕ್ರಮ ಸಲ್ಲ

    ಶಿವಮೊಗ್ಗ: ಕೃಷಿ ಭೂಮಿ ಖರೀದಿಗೆ ಆದಾಯ ಮಿತಿ ಕೈಬಿಡುವ ಕ್ರಮವನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತ ಸಂಘದ ಮುಖಂಡರು ಸೋಮವಾರ ಜಿಲ್ಲಾಧಿಕಾರಿ ಸಹಾಯಕ ಅಧಿಕಾರಿ ನಫೀಜಾ ಬೇಗಂ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಕೃಷಿ ಭೂಮಿ ರೈತರಲ್ಲಿಯೇ ಉಳಿಯಬೇಕು. ಬಂಡವಾಳಶಾಹಿಗಳು, ಉದ್ಯಮಿಗಳು, ವ್ಯಾಪಾರಸ್ಥರು, ರೈತರಲ್ಲದವರು, ಭೂಮಿ ಖರೀದಿ ಮಾಡಬಾರದೆಂದು ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ 2 ಲಕ್ಷ ರೂ. ಆದಾಯ ಮಿತಿ ಜಾರಿಗೆ ತಂದಿದ್ದರು. ಇದಕ್ಕೂ ಹೆಚ್ಚು ಆದಾಯ ಹೊಂದಿರುವವರು ಕೃಷಿ ಭೂಮಿ ಖರೀದಿಸುವಂತಿರಲಿಲ್ಲ. ಸಿದ್ದರಾಮಯ್ಯ ಅದನ್ನು 25 ಲಕ್ಷ ರೂ. ಆದಾಯ ಮಿತಿಗೆ ಏರಿಸಿದ್ದರು. ಈಗ ಅದನ್ನೂ ಕೈಬಿಡಲು ಮುಂದಾಗಿರುವುದು ಸರಿಯಲ್ಲ ಎಂದು ರೈತ ಮುಖಂಡರು ಅಭಿಪ್ರಾಯಪಟ್ಟರು.

    ದೇಶದಲ್ಲಿ ಶೇ.65ರಷ್ಟಿರುವ ರೈತರು ಅನಕ್ಷರಸ್ಥರೂ ಸೇರಿ ಶೇ.80ರಷ್ಟು ಮಂದಿಗೆ ಉದ್ಯೋಗ ನೀಡಿದ್ದಾರೆ. ಉದ್ಯಮಗಳು ಶೇ.20ರಷ್ಟು ಮಾತ್ರ ಉದ್ಯೋಗ ನೀಡುತ್ತಿವೆ. ಹಾಗಾಗಿ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ ನೀಡುತ್ತೇವೆಂದು ಹೇಳುತ್ತಿರುವುದು ಸುಳ್ಳು. 1 ಎಕರೆ ಕೃಷಿ ಭೂಮಿ ಚಟುವಟಿಕೆ ಮಾಡುವುದರಿಂದ ಸುಮಾರು 10 ಸಾವಿರ ಜನರಿಗೆ ಉದ್ಯೋಗ ಸಿಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

    ಕೃಷಿ ಭೂಮಿಯನ್ನು ಹಂತಹಂತವಾಗಿ ಉದ್ಯಮಿಗಳು, ವ್ಯಾಪಾರಸ್ಥರು, ಬಂಡವಾಳಗಾರರು, ಖರೀದಿಸಿ ಅಲ್ಲಿ ಕೃಷಿ ಮಾಡದೆ ಮಹಡಿಗಳನ್ನು ನಿರ್ವಿುಸಿ ಕೃಷಿ ಭೂಮಿ ನುಂಗಿಹಾಕಿ ಆಹಾರ ಭದ್ರತೆಯ ಸರಪಳಿಯನ್ನೇ ಕಳಚಿಬಿಡುತ್ತಿದ್ದಾರೆ. ಸಾವಿರಾರು ಎಕರೆ ಭೂಮಿ ಇಂದು ಬಂಡವಾಳಶಾಹಿಗಳ ಪಾಲಾಗಿ ಅಕ್ರಮ ಭೂ ಮಾಫಿಯಾಕ್ಕೂ ಒಳಗಾಗಿ ರೈತರನ್ನು ನಿರಾಶ್ರಿತರನ್ನಾಗಿ ಮಾಡಿ, ಇದೇ ಬಂಡವಾಳ ಶಾಹಿಗಳ ಬಳಿ ವಲಸೆ ಹೋಗಿ ಕೈಚಾಚುವಂತೆ ಮಾಡಿದೆ ಎಂದು ದೂರಿದರು.

    ಈಗಾಗಲೇ ವಿವಿಧ ಅಭಿವೃದ್ಧಿ ಯೋಜನೆ, ಕೈಗಾರಿಕೆಗಳ ಬೆಳವಣಿಗೆ ನೆಪದಲ್ಲಿ ಕೃಷಿ ಭೂಮಿಯನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಗಾಯದ ಮೇಲೆ ಬರೆ ಎಂಬಂತೆ ಈಗ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಿ ರೈತರನ್ನು ಮರುಳು ಮಾಡಿ ಹಣದಾಸೆ ತೋರಿಸಿ, ಶಾಶ್ವತವಾಗಿ ಕೃಷಿಯಿಂದ ದೂರ ಮಾಡುವ ಹುನ್ನಾರ ನಡೆಸಲಾಗಿದೆ. ಆದ್ದರಿಂದ ತಕ್ಷಣ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ರೈತ ಸಂಘ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಿದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

    ರೈತ ಸಂಘದ ಜಿಲ್ಲಾಧ್ಯಕ್ಷ ಎಸ್.ಶಿವಮೂರ್ತಿ, ರಾಜ್ಯ ಉಪಾಧ್ಯಕ್ಷ ಹಿಟ್ಟೂರು ರಾಜು, ಮುಖಂಡರಾದ ಕೆ.ರಾಘವೇಂದ್ರ, ಸಿ. ಚಂದ್ರಪ್ಪ, ಇ.ಬಿ.ಜಗದೀಶ್, ಕೆ.ಎನ್.ಜ್ಞಾನೇಶ್, ಪರಮೇಶ್ವರಪ್ಪ, ಗುರುಶಾಂತಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts