More

    ಆತ್ಮವಿಶ್ವಾಸ ವೃದ್ಧಿಸುವ ಸಹಕಾರ ಕ್ಷೇತ್ರ

    ಶಿಕಾರಿಪುರ: ಸಹಕಾರ ಕ್ಷೇತ್ರ ರೈತರಲ್ಲಿ ಶಕ್ತಿ ಮತ್ತು ಆತ್ಮವಿಶ್ವಾಸ ತಂದಿದೆ. ಶತಮಾನಗಳ ಹಿಂದೆ ಗದಗದ ಹಿರಿಯರ ಕನಸು ಇಂದು ಸಾಕ್ಷ್ಯೂಪ ಪಡೆದಿದೆ. ಆದರೆ ಪ್ರಸ್ತುತ ಕಾಲ ಘಟ್ಟಕ್ಕೆ ತಕ್ಕಂತೆ ಬದಲಾವಣೆ ಆಗಬೇಕಿದ್ದು ಇನ್ನೂ ಹೆಚ್ಚಿನ ಜನಸ್ನೇಹಿ, ರೈತಸ್ನೇಹಿ ಆಗಬೇಕಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

    ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ, ಮಹಿಳಾ ಸಹಕಾರ ಮಹಾಮಂಡಳ, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಸಹಕಾರ ಸಂಘ, ಸಹಕಾರ ಯೂನಿಯನ್, ಸಪ್ತಗಿರಿ, ಶಾಂತೇಶ್ವರಿ, ಬನಸಿರಿ ಮಹಿಳಾ ಪತ್ತಿನ ಸಹಕಾರ ಸಂಘಗಳ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಸಹಕಾರ ಸಂಘಗಳು ಸಾಲ ವಸೂಲಾತಿಗೆ ಶ್ರಮಿಸುತ್ತವೆ. ಸಹಕಾರಿಗಳ ಕಾರ್ಯಕ್ಷಮತೆ ಅವರ ನಿವ್ವಳ ಲಾಭದಿಂದ ತಿಳಿಯುತ್ತದೆ. ಸಹಕಾರಿ ಕ್ಷೇತ್ರದಿಂದಲೇ ಬೆಳೆದು ಬಂದಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಹಕಾರಿ ಕ್ಷೇತ್ರದ ಮೇಲೆ ಬಹಳ ಕಾಳಜಿ. ಶಿಕಾರಿಪುರದಲ್ಲಿ ಡಾ. ಬಿ.ಡಿ.ಭೂಕಾಂತ್, ಚನ್ನವೀರಪ್ಪ, ಅಗಡಿ ಅಶೋಕ್ ಸಹಕಾರ ಕ್ಷೇತ್ರದಲ್ಲಿಂದು ಅಶ್ವತ್ಥವೃಕ್ಷವಾಗಿ ಬೆಳೆದಿದ್ದಾರೆ ಎಂದರು.

    ಈ ಬಾರಿ ಸಹಕಾರ ಸಂಘಗಳ ಚುನಾವಣೆಗಳಲ್ಲಿ ಬಹಳಷ್ಟು ಮತದಾರರು ಮತದಾನದಿಂದ ವಂಚಿತರಾಗಿದ್ದಾರೆ. ಸಹಕಾರಿ ರಂಗದ ಕಾನೂನುಗಳನ್ನು ಸಮರ್ಪಕವಾಗಿ ತಿಳಿಸುವಲ್ಲಿ ವಿಫಲವಾದ ಕಾರಣ ಬಹುತೇಕ ಷೇರುದಾರರ ಹೆಸರು ಬಿಟ್ಟು ಹೋಗಿವೆ. ಪರೋಕ್ಷವಾಗಿ ಷೇರುದಾರರ ಮತದಾನದ ಹಕ್ಕನ್ನು ಕಸಿದುಕೊಂಡಂತಾಗಿದೆ ಎಂದು ಹೇಳಿದರು.

    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತಪರ ಕೆಲಸ ಮಾಡುತ್ತಿವೆ. ಮಾರ್ಕೆಟಿಂಗ್ ಸೊಸೈಟಿಗಳಲ್ಲಿ ಮೊದಲು ವ್ಯಾಟ್ ಇತ್ತು. ಈಗ ಜಿಎಸ್​ಟಿ ಆಗಿ ಬದಲಾಗಿದೆ. ಕೃಷಿ ಮತ್ತು ಕೃಷಿಕರಿಗೆ ಪೂರಕವಾದ ಸಹಕಾರ ಸಂಘಗಳ ಸೇವೆಯಲ್ಲಿ ತೆರಿಗೆ ವಿನಾಯಿತಿ ಇದೆ. ಆದರೆ ವಾಣಿಜ್ಯ ವ್ಯವಹಾರಗಳಿಗೆ ಬಳಸುವ ಸಹಕಾರ ಸಂಘಗಳಿಗೆ ತೆರಿಗೆ ವಿನಾಯಿತಿ ಇಲ್ಲ. ನಿಮ್ಮ ಮನವಿಯನ್ನು ನಾನು ಬಜೆಟ್ ಅಧಿವೇಶನ ದಲ್ಲಿ ಕೇಂದ್ರ ವಿತ್ತ ಸಚಿವರ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು.

    ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಮಹಾ ಮಂಡಳದ ನಿರ್ದೇಶಕ ವಿ.ರಾಜು ಮಾತನಾಡಿ, ಮಹಾಮಂಡಳ ರಾಜ್ಯಾದ್ಯಂತ 400ಕ್ಕೂ ಹೆಚ್ಚು ಶೈಕ್ಷಣಿಕ ಕಾರ್ಯಾಗಾರವನ್ನು ಏರ್ಪಡಿಸಿದೆ. 2004ರಲ್ಲಿ ಲಕ್ಕೇಗೌಡರ ಅಧ್ಯಕ್ಷತೆಯಲ್ಲಿ ಮಹಾಮಂಡಳ ಆರಂಭವಾಯಿತು. ಕ್ಷೇತ್ರದ ಅಭಿವೃದ್ಧಿಗೆ ಮಹಾಮಂಡಳ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.

    ಸಹಕಾರ ರತ್ನ ಪುರಸ್ಕೃತ ಡಾ. ಬಿ.ಡಿ.ಭೂಕಾಂತ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಉಪಾಧ್ಯಕ್ಷ ಎಂ.ಬಿ.ಚನ್ನವೀರಪ್ಪ, ನಿರ್ದೇಶಕ ಅಗಡಿ ಅಶೋಕ್, ಮಹಿಳಾ ಸಹಕಾರ ಮಹಾ ಮಂಡಳದ ಅಧ್ಯಕ್ಷೆ ಶಕುಂತಲಾ ಕಾಶೀನಾಥ್ ಬೆಲ್ದಾಳೆ, ಕರ್ನಾಟಕ ರಾಜ್ಯಪತ್ತಿನ ಮಹಾಮಂಡಳ ನಿರ್ದೇಶಕ ನಾಗೇಶಪ್ಪ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಸುರೇಶ್ ವಾಟಗೋಡು, ಮಹಿಳಾ ಸಹಕಾರ ಮಹಾಮಂಡಳ ನಿರ್ದೇಶಕಿ ಶಾಂತಲಾ ಭೂಕಾಂತ್, ಮಂಜುನಾಥ್, ವಾಸುದೇವ್, ನಾಗರತ್ನಾ, ಜ್ಯೋತಿ, ನಾಗರಾಜಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts