More

    ಆತಂಕ ಸೃಷ್ಟಿಸಿರುವ ಅಣ್ಣೇಗೌಡ ಬಿಲ್ಡಿಂಗ್: ಶಿಥಿಲಾವಸ್ಥೆ ತಲುಪಿರುವ ವಾಣಿಜ್ಯ ಸಮುಚ್ಚಯ

    ಚನ್ನಪಟ್ಟಣ :  ಪ್ರತಿನಿತ್ಯ ನೂರಾರು ಜನರು ವ್ಯಾಪಾರ, ವಹಿವಾಟಿಗಾಗಿ ಭೇಟಿ ನೀಡುವ ನಗರದ ಹೃದಯಭಾಗ ಎಂ.ಜಿ. ರಸ್ತೆಯಲ್ಲಿರುವ ಅಣ್ಣೇಗೌಡ ಬಿಲ್ಡಿಂಗ್ (ವಾಣಿಜ್ಯ ಸಮುಚ್ಚಯ) ಶಿಥಿಲಾವಸ್ಥೆ ತಲುಪಿದ್ದು, ಆತಂಕಕ್ಕೆ ಕಾರಣವಾಗಿದೆ.
    ಈ ಕಟ್ಟಡ ನೂರು ವರ್ಷಗಳಿಗೂ ಹಳೆಯದಾಗಿದ್ದು, ಪ್ರಮುಖ ಜನನಿಬಿಡ ಪ್ರದೇಶದಲ್ಲಿದೆ. ನಗರದ ಮೊದಲ ವಾಣಿಜ್ಯ ಸಮುಚ್ಚಯ ಎಂಬ ಹೆಗ್ಗಳಿಕೆ ಹೊಂದಿದೆ. ಎರಡು ಅಂತಸ್ತಿನ ವಿಶಾಲವಾದ ಜಾಗದಲ್ಲಿರುವ ಈ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಯಾವಾಗ ಬೇಕಾದರೂ ಕುಸಿಯುವ ಹಂತದಲ್ಲಿದೆ.

    ಮೊಟ್ಟಮೊದಲ ಸಮುಚ್ಚಯ: ಮದ್ದೂರು ತಾಲೂಕಿನ ನಿಡಟ್ಟದ ಗ್ರಾಮದ ದಿವಂಗತ ಅಣ್ಣೇಗೌಡರು ನಗರದ ಹೃದಯಭಾಗದಲ್ಲಿ ನಿರ್ಮಿಸಿದ ಈ ವಾಣಿಜ್ಯ ಕಟ್ಟಡ ಅಂದಿನ ಕಾಲಕ್ಕೆ ಬಹು ಆಕರ್ಷಕ ಕಟ್ಟಡವಾಗಿತ್ತು. ಅಲ್ಲದೆ, ನಗರದ ಮೊಟ್ಟಮೊದಲ ವಾಣಿಜ್ಯ ಸಮುಚ್ಚಯವಾಗಿತ್ತು. ಆದರೆ, ಇದೀಗ ಕಟ್ಟಡದ ಒಂದೊಂದು ಭಾಗವೇ ಕುಸಿದು ಬೀಳುತ್ತಿದೆ. ಎರಡು ಅಂತಸ್ತಿನ ಈ ವಾಣಿಜ್ಯ ಸಮುಚ್ಚಯದಲ್ಲಿ ಹತ್ತಾರು ಅಂಗಡಿಗಳಿದ್ದು, ಹಲವು ವರ್ಷಗಳ ಹಿಂದೆಯೇ ಮೇಲಂತಸ್ತಿನ ಭಾಗ ಚಟುವಟಿಕೆಯಿಲ್ಲದೆ ಕಾರ್ಯ ಸ್ಥಗಿತಗೊಳಿಸಿದೆ. ಕೆಳ ಅಂತಸ್ತು ಸಹ ಶಿಥಿಲಗೊಂಡಿದೆ. ಕೆಳ ಅಂತಸ್ತಿನಲ್ಲಿ ಹತ್ತಾರು ಅಂಗಡಿ ಮಳಿಗೆಗಳು ಕಾರ್ಯ ನಿರ್ವಹಿಸುತ್ತಿವೆ. ಮೇಲ್ಭಾಗದಲ್ಲಿ ಕುಸಿದಿರುವ ಅವಶೇಷಗಳ ಕೆಳಗೆ ಶಿಥಿಲಗೊಂಡಿರುವ ಅಂಗಡಿಗಳಲ್ಲಿಯೇ ಕೆಲ ವರ್ತಕರು ವ್ಯಾಪಾರ ನಡೆಸುತ್ತಿದ್ದಾರೆ.

    ವ್ಯಾಜ್ಯವೇ ಕಾರಣ: ಕಟ್ಟಡ ಶಿಥಿಲಾವಸ್ಥೆ ತಲುಪಲು ಮಾಲೀಕರು ಮತ್ತು ಅಂಗಡಿ ಮಾಲೀಕರ ನಡುವೆ ನ್ಯಾಯಾಲಯದಲ್ಲಿ ನಡೆಯುತ್ತಿರುವ ವ್ಯಾಜ್ಯವೇ ಕಾರಣವಾಗಿದೆ. ಬಾಡಿಗೆ ಕರಾರು ಸೇರಿ ಇನ್ನಿತರ ವಿಷಯ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಸಮುಚ್ಚಯದ ಮಾಲೀಕರು ಈ ಕಟ್ಟಡವನ್ನು ಕೆಡವಲು ಮುಂದಾಗಿದ್ದಾರೆ. ಆದರೆ, ಅಂಗಡಿ ಬಿಟ್ಟುಕೊಡಲು ನಿರಾಕರಿಸಿ ಶಿಥಲಾವಸ್ಥೆಯಲ್ಲಿರುವ ಕಟ್ಟಡದಲ್ಲಿಯೇ ವ್ಯಾಪಾರ ಮುಂದುವರಿಸಿರುವ ವರ್ತಕರು ಅಂಗಡಿ ಖಾಲಿ ವಾಡದಿರುವುದು ಇದಕ್ಕೆ ತೊಡಕಾಗಿದೆ. ಕಟ್ಟಡ ಮಾಲೀಕರು ಹಾಗೂ ವರ್ತಕರ ನಡುವಿನ ತಿಕ್ಕಾಟ ಹೀಗೆ ಮುಂದುವರಿದರೆ ಇಡೀ ಕಟ್ಟಡ ತಾನಾಗಿಯೇ ಉರುಳಿದರೂ ಆಶ್ಚರ್ಯ ಪಡಬೇಕಾಗಿಲ್ಲ.

    ಇತ್ತೀಚೆಗೆ ಬಹುತೇಕ ವ್ಯಾಜ್ಯಗಳು ಮುಕ್ತಾಯಗೊಂಡಿದ್ದು, ಕೆಲ ಅಂಗಡಿಗಳ ವಾಲೀಕರು ಅಲ್ಪಮೊತ್ತದ ಬಾಡಿಗೆ ನೀಡುತ್ತ ವ್ಯಾಪಾರ ಮುಂದುವರಿಸಿದ್ದಾರೆ. ಪ್ರಸುತ್ತ ಮಳೆ ಸುರಿಯುತ್ತಿರುವುದರಿಂದ ರಾಜ್ಯದ ವಿವಿಧೆಡೆ ಕಟ್ಟಡಗಳು ಉರುಳಿತ್ತಿರುವ ಪ್ರಕರಣಗಳು ನಡೆಯುತ್ತಿವೆ. ಮೊನ್ನೆಯಷ್ಟೇ ನಗರದ ಎಂ.ಜಿ. ರಸ್ತೆಯಲ್ಲಿನ ದಿನೇಶ್ ಲ್ಯಾಬ್‌ನ ಮುಂಭಾಗ ಇದ್ದ ಹಳೆಯ ಹೆಂಚಿನ ಮನೆ ಕುಸಿದು ಇಬ್ಬರು ಗಾಯಗೊಂಡಿರುವ ನಿದರ್ಶನ ನಮ್ಮ ಮುಂದಿದೆ. ವೈಯಕ್ತಿಕ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕಟ್ಟಡದ ವಾಲೀಕರು ಹಾಗೂ ಬಾಡಿಗೆದಾರರು ತಮ್ಮ ನಡುವಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕಿದೆ. ಇಲ್ಲವಾದರೆ ತಾಲೂಕು ಆಡಳಿತ ಹಾಗೂ ನಗರಸಭೆ ಶಿಥಿಲಾವಸ್ಥೆಯಲ್ಲಿರುವ ಈ ಕಟ್ಟಡಕ್ಕೆ ಮುಕ್ತಿ ದೊರಕಿಸಬೇಕಾಗಿದೆ.

    ಅನಾಹುತಕ್ಕೆ ಹೊಣೆ ಯಾರು? :
    ಕೆಳ ಅಂತಸ್ತಿನಲ್ಲಿ ಕೆಲ ಅಂಗಡಿಗಳು ಕಾರ್ಯ ನಿರ್ವಹಿಸುತ್ತಿವೆ. ಇನ್ನು ಕೆಲವರು ಅಂಗಡಿಗಳನ್ನು ಗೋದಾಮು ವಾಡಿಕೊಂಡಿದ್ದಾರೆ. ಇಂದಿಗೂ ಪ್ರತಿನಿತ್ಯ ಈ ಕಟ್ಟಡಕ್ಕೆ ಸಾವಿರಾರು ಮಂದಿ ಬಂದು ಹೋಗುತ್ತಾರೆ. ಒಂದುವೇಳೆ ಕಟ್ಟಡ ಉರುಳಿ ಅನಾಹುತ ಸಂಭವಿಸಿದರೆ ಸಾವು-ನೋವು ಖಚಿತ. ಬದುಕಿನ ಬಂಡಿ ಸಾಗಿಸಲು ಭಂಡತನದಿಂದ ವಹಿವಾಟು ನಡೆಸುತ್ತಿರುವ ವರ್ತಕರ ಜೀವಕ್ಕೂ ಅಪಾಯ.

    ವಾಣಿಜ್ಯ ಸಮುಚ್ಚಯ ಸಂಪೂರ್ಣ ಶಿಥಿಲಗೊಂಡಿದೆ. ಕೆಲ ವರ್ಷಗಳ ಹಿಂದೆಯೇ ಕಟ್ಟಡ ತೆರವುಗೊಳಿಸಲು ಯತ್ನಿಸಿದ್ದೆವು. ಆದರೆ, ಕಾನೂನು ತೊಡಕುಗಳಿಂದ ಸಾಧ್ಯವಾಗಲಿಲ್ಲ. ಇದೀಗ, ಯಾವುದೇ ವ್ಯಾಜ್ಯಗಳಿಲ್ಲ. ಕಾನೂನು ಪ್ರಕಾರವಾಗಿ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕಟ್ಟಡ ತೆರವುಗೊಳಿಸಲು ಸಿದ್ಧನಿದ್ದೇನೆ. ಇದಕ್ಕೆ ಎಲ್ಲರ ಸಹಕಾರ ಬೇಕು.
    ಎ. ಪ್ರಕಾಶ್, ಕಟ್ಟಡ ಮಾಲೀಕರು (ಅಣ್ಣೇಗೌಡರ ಪುತ್ರ)

    ಈ ಜಾಗ ಗ್ರಾಹಕರಿಗೆ ಚಿರಪರಿಚಿತವಾದ ಕಾರಣ, ಬದಲಿ ವ್ಯವಸ್ಥೆ ಇಲ್ಲದ ಕಾರಣ ಹಲವು ವರ್ಷಗಳಿಂದ ಇಲ್ಲಿಯೇ ವಹಿವಾಟು ನಡೆಸುತ್ತಿದ್ದೇವೆ ಅಷ್ಟೇ. ಏನಾದರೂ ಅನಾಹುತವಾದರೆ ಗತಿಯೇನು ಎಂಬ ಭಯವಿದೆ. ವಾಲೀಕರು ತೆರವುಗೊಳಿಸಲು ಕಾಲಾವಕಾಶ ಕೊಟ್ಟರೆ ತೆರವುಗೊಳಿಸಲು ಸಿದ್ಧರಿದ್ದೇವೆ.
    ಗುಂಡಣ್ಣ, ಕಟ್ಟಡದಲ್ಲಿರುವ ದಿನಸಿ ಅಂಗಡಿ ವಾಲೀಕ

     

    ಅಣ್ಣೇಗೌಡರ ಬಿಲ್ಡಿಂಗ್ ಶಿಥಿಲಾವಸ್ಥೆ ತಲುಪಿ ಹಲವು ವರ್ಷಗಳೇ ಕಳೆದಿವೆ. ನಗರದ ಪ್ರಮುಖ ಭಾಗದಲ್ಲಿರುವ ಈ ಕಟ್ಟಡ ಉರುಳಿದರೆ ಸಾವು ನೋವುಗಳನ್ನು ಊಹಿಸಿಕೊಳ್ಳಲು ಅಸಾಧ್ಯ. ಅನಿವಾರ್ಯ ಕಾರಣದಿಂದಾಗಿ ಕೆಲವರ್ತಕರು ವಹಿವಾಟು ನಡೆಸುತ್ತಿದ್ದಾರೆ. ಜಾಗದ ವಾಲೀಕರು, ವರ್ತಕರನ್ನು ಕೂರಿಸಿ ವಿವಾದ ಬಗೆಹರಿಸಲು ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು.
    ಸಿಂ.ಲಿಂ. ನಾಗರಾಜು ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ

     

    ಕಟ್ಟಡಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿರುವ ಬಗ್ಗೆ ವಾಹಿತಿಯಿದೆ. ಕಟ್ಟಡದ ವಾಲೀಕರಿಗೆ ಕಟ್ಟಡ ತೆರವುಗೊಳಿಸುವಂತೆ ನೋಟಿಸ್ ನೀಡುತ್ತೇವೆ. ಶಿಥಿಲಾವಸ್ಥೆ ತಲುಪಿರುವ ನಗರದ ಎಲ್ಲ ಕಟ್ಟಡ ಮಾಲೀಕರಿಗೂ ನೋಟಿಸ್ ನೀಡಲಾಗುವುದು. ಏನಾದರೂ ಅನಾಹುತ ಸಂಭವಿಸಿದರೆ ಸಂಬಂಧಪಟ್ಟ ಮಾಲೀಕರೇ ಹೊಣೆಗಾರರಾಗುತ್ತಾರೆ.
    ಶಿವನಂಕರಿಗೌಡ, ನಗರಸಭೆ ಪೌರಾಯುಕ್ತ, ಚನ್ನಪಟ್ಟಣ

     

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts