More

    ಆಡಳಿತ ಸಮಿತಿ ಕೈಗೆ ಅಧಿಕಾರ

    ಸುಭಾಸ ಧೂಪದಹೊಂಡ ಕಾರವಾರ

    ಜೂನ್ ಅಥವಾ ಜುಲೈ ತಿಂಗಳಲ್ಲಿ ಅಧಿಕಾರಾವಧಿ ಮುಕ್ತಾಯವಾಗುವ ಗ್ರಾಮ ಪಂಚಾಯಿತಿಗಳಿಗೆ ಸರ್ಕಾರವು ಆಡಳಿತ ಸಮಿತಿಗಳನ್ನು ನೇಮಿಸಲು ಚಿಂತನೆ ನಡೆಸಿದ್ದು, ಕಾಂಗ್ರೆಸ್​ಗೆ ಇದು ಬಿಸಿ ತುಪ್ಪವಾಗಿ ಪರಿಣಮಿಸಿದೆ.

    ಆಡಳಿತ ಸಮಿತಿ ರಚಿಸುವ ಸಂಬಂಧ ಬಿಜೆಪಿ ಈಗಾಗಲೇ ತಯಾರಿ ನಡೆಸಿದೆ. ಬಿಜೆಪಿ ಪರ ಇರುವ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ, ಬೇರೆ ಬೇರೆ ವರ್ಗಗಳ ಜನರ ದಾಖಲಾತಿಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳುವಂತೆ ಪಕ್ಷದ ಗ್ರಾಮೀಣ ಮಟ್ಟದ ಪದಾಧಿಕಾರಿಗಳಿಗೆ ಪಕ್ಷದಿಂದ ಸೂಚನೆ ಬಂದಿದೆ. ಎರಡು ದಿನಗಳ ಹಿಂದೆ ಇದೇ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರ ನೇತೃತ್ವದಲ್ಲಿ ಶಿರಸಿಯಲ್ಲಿ ಬಿಜೆಪಿ ವಿವಿಧ ಮಂಡಳಗಳ ಅಧ್ಯಕ್ಷರ ಹಾಗೂ ಜಿಲ್ಲಾಧ್ಯಕ್ಷರ ಸಭೆ ನಡೆದಿದ್ದು, ಈ ಕುರಿತು ಹಲವು ನಿರ್ದೇಶನ ನೀಡಿರುವುದಾಗಿ ತಿಳಿದುಬಂದಿದೆ.

    ಆಡಳಿತ ಮಂಡಳಿ ರಚಿಸುವ ಸಂಬಂಧ ಜನಾಭಿಪ್ರಾಯ ಸೃಷ್ಟಿಯಾಗುವಂತೆ ಮಾಡಲು ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸಿದೆ. ಆದರೆ, ಕಾಂಗ್ರೆಸ್ ಪಕ್ಷವು ಸಮಿತಿ ರಚನೆಯ ನಿರ್ಧಾರವನ್ನು ತೀವ್ರವಾಗಿ ವಿರೋಧಿಸುತ್ತಿದೆ. ಈಗಾಗಲೇ ಕಾಂಗ್ರೆಸ್ ನಾಯಕರು ಆಡಳಿತ ಸಮಿತಿ ನೇಮಕವನ್ನು ವಿರೋಧಿಸಿ ರಾಜ್ಯ ಚುನಾವಣಾ ಆಯುಕ್ತರನ್ನು ಭೇಟಿಯಾಗಿ ಚುನಾವಣೆ ನಡೆಸುವಂತೆ ಮನವಿ ಮಾಡಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ಮುಖಂಡರೂ ಸರ್ಕಾರದ ಈ ನಿರ್ಣಯದ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

    ಕಾಂಗ್ರೆಸ್ ವಿರೋಧವೇಕೆ?: ದೇಶ, ರಾಜ್ಯದಲ್ಲಿ ಬಿಜೆಪಿಯ ಅಧಿಕಾರದಲ್ಲಿದ್ದರೂ ಗ್ರಾಮೀಣ ಮಟ್ಟದಲ್ಲಿ ಇದುವರೆಗೂ ಬೇರೂರಲು ಸಾಧ್ಯವಾಗಿಲ್ಲ. ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಗ್ರಾಪಂ, ತಾಪಂ ಹಾಗೂ ಜಿಪಂಗಳಲ್ಲಿ ಇದುವರೆಗೂ ಕಾಂಗ್ರೆಸ್ ಪ್ರಬಲವಾಗಿದೆ. ಈಗ ಚುನಾವಣೆ ಇಲ್ಲದೆ, ಆಡಳಿತ ಸಮಿತಿ ನೇಮಿಸಿದಲ್ಲಿ ಬಿಜೆಪಿಗೆ ಹೆಚ್ಚು ಅನುಕೂಲವಾಗಲಿದೆ. ಜಿಲ್ಲೆಯಲ್ಲಿ ಬಿಜೆಪಿಯ ಸಂಸದರಿದ್ದಾರೆ, ಆರರಲ್ಲಿ ಐದು ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಇದರಿಂದ ಆಡಳಿತ ಸಮಿತಿಗೆ ಬಿಜೆಪಿ ಬೆಂಬಲಿತರೇ ಗ್ರಾಮೀಣ ಮಟ್ಟದಲ್ಲಿ ಅಧಿಕಾರಕ್ಕೆ ಬಂದಂತಾಗುತ್ತದೆ. ಈ ಮೂಲಕ ಗ್ರಾಮೀಣ ಮಟ್ಟದಲ್ಲಿ ಕಾಂಗ್ರೆಸ್ ಸಂಘಟನೆ ಸಂಪೂರ್ಣ ನಿತ್ರಾಣವಾಗುವ ಆತಂಕ ಆ ಪಕ್ಷದವರಲ್ಲಿದೆ. ಒಮ್ಮೆ ಅಧಿಕಾರ ಕೈ ತಪ್ಪಿದಲ್ಲಿ ಮುಂಬರುವ ಚುನಾವಣೆಗಳಲ್ಲಿ ತಳಮಟ್ಟದಲ್ಲೂ ತನ್ನ ಹಿಡಿತ ತಪ್ಪಲಿದೆ ಎಂಬ ಭೀತಿ ಕಾಂಗ್ರೆಸ್​ಗೆ ಇದೆ.

    ಬಿಜೆಪಿ ಹೇಳುವುದೇನು?: ಕರೊನಾ ಹಿನ್ನೆಲೆಯಲ್ಲಿ ಈಗ ಚುನಾವಣೆ ನಡೆಸುವುದು ಸೂಕ್ತವಲ್ಲ. ಇದರಿಂದ ವಿವಿಧ ಕ್ಷೇತ್ರಗಳ ಚಿಂತಕರನ್ನು, ಯುವಕರನ್ನು ನೇಮಿಸಿದಲ್ಲಿ ಗ್ರಾಮಗಳ ಅಭಿವೃದ್ಧಿಯಾಗಲಿದೆ. ಚುನಾವಣೆ ಆಯೋಗವು ಅನುಮತಿ ನೀಡಿದೆ. ಶಾಸಕರ ಶಿಫಾರಸಿನಂತೆ ಈ ಆಯ್ಕೆ ನಡೆಯಲಿ. ಜನರ ಕೈಗೆ ಅಧಿಕಾರ ನೀಡುವುದು ನಿಜವಾದ ಪ್ರಜಾಪ್ರಭುತ್ವವಲ್ಲವೇ ಎಂದು ಬಿಜೆಪಿ ಹೇಳುತ್ತಿದೆ. ಸರ್ಕಾರ ನಿರ್ಧಾರ ಪ್ರಕಟಿಸುವ ಮೊದಲೇ ಕಾಂಗ್ರೆಸ್ ವಿರೋಧವೇಕೆ ಎಂಬುದು ಬಿಜೆಪಿ ಪ್ರಶ್ನೆಯಾಗಿದೆ.

    ಹಿನ್ನೋಟ : 2015ರ ಮೇ 29ರಂದು ಜಿಲ್ಲೆಯ 230 ಗ್ರಾಪಂಗಳ 2437 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. 14 ವಾರ್ಡ್​ಗಳಿಗೆ ಯಾರೂ ಸ್ಪರ್ಧೆ ನಡೆಸಿರಲಿಲ್ಲ. 281 ವಾರ್ಡ್​ಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಒಟ್ಟು 7318 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದರು. ಜೂನ್ 5 ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಿತ್ತು. ಮೀಸಲಾತಿಯಂತೆ ಜೂನ್ ಅಂತ್ಯ ಹಾಗೂ ಜುಲೈ ಮೊದಲ ವಾರದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದು ಮೊದಲ ಸಭೆ ನಡೆದಿದೆ. ರಾಜ್ಯದ ಸಂವಿಧಾನ ನಿಯಮ 243 ಇ ನಂತೆ ಮೊದಲ ಸಭೆ ನಡೆದ 5 ವರ್ಷದವರೆಗೆ ಸದಸ್ಯರ ಅಧಿಕಾರಾವಧಿ ಇರಲಿದೆ. ಅಂದರೆ, ಜೂನ್ ಅಂತ್ಯ ಅಥವಾ ಜುಲೈ ಮೊದಲ ವಾರದಲ್ಲಿ ಎಲ್ಲ ಸದಸ್ಯರ ಅಧಿಕಾರಾವಧಿ ಮುಕ್ತಾಯವಾಗಲಿದೆ. ನಂತರ ಸರ್ಕಾರ ಗ್ರಾಪಂಗಳಿಗೆ ಆಡಳಿತಾಧಿಕಾರಿ ನೇಮಿಸಬೇಕು. ಈಗಿರುವ ಸದಸ್ಯರನ್ನು ಮುಂದುವರಿಸಬೇಕು, ಇಲ್ಲವೆ, ಆಡಳಿತ ಸಮಿತಿ ನೇಮಿಸಬೇಕಿದೆ.

    ಸರ್ಕಾರವು ಕರೊನಾ ನೆಪ ಇಟ್ಟುಕೊಂಡು ಗ್ರಾಪಂಗಳಿಗೆ ಆಡಳಿತ ಸಮಿತಿ ನೇಮಿಸಲು ಯೋಜಿಸುತ್ತಿದೆ. ಇದರಿಂದ ಆಡಳಿತದ ಅನುಭವ ಇಲ್ಲದ ಸದಸ್ಯರು ನೇಮಕವಾಗುವ ಅಪಾಯವಿದೆ. ಕರೊನಾದಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರಿಗೆ ಮತ್ತಷ್ಟು ತೊಂದರೆಯಾಗಬಹುದು. ಆಡಳಿತ ವಿಕೇಂದ್ರೀಕರಣ ವ್ಯವಸ್ಥೆಯ ಕಗ್ಗೊಲೆಯಾಗಬಹುದು. ಇದರಿಂದ ಸರ್ಕಾರ ಆಡಳಿತ ಸಮಿತಿ ನೇಮಿಸುವ ಅಥವಾ ಆಡಳಿತಾಧಿಕಾರಿ ನೇಮಿಸುವ ಕಾರ್ಯಕ್ಕೆ ಮುಂದಾಗಬಾರದು. ಅನಿವಾರ್ಯವಾದಲ್ಲಿ ಹಾಲಿ ಸದಸ್ಯರನ್ನು ಮುಂದುವರಿಸಬೇಕು.

    | ಆರ್.ವಿ.ದೇಶಪಾಂಡೆ, ಕಾಂಗ್ರೆಸ್ ಶಾಸಕ, ಮಾಜಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts